ಬಜತ್ತೂರು ಗ್ರಾ.ಪಂ.ಗ್ರಂಥಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

0

ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಬಿರ ಸೂಕ್ತ ವೇದಿಕೆ : ಗಂಗಾಧರ ನೆಕ್ಕರಾಜೆ

ಪುತ್ತೂರು: ಮಕ್ಕಳಿಗೆ ಎಳವೆಯಲ್ಲಿ ಸರಿಯಾದ ಮಾರ್ಗದರ್ಶನ ನೀಡಿದರೆ ಅಂತಹ ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗಾಗಿ ಶಿಬಿರಗಳನ್ನು ನಡೆಸಲಾಗುತ್ತದೆ. ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಇಂತಹ ಬೇಸಿಗೆ ಶಿಬಿರಗಳು ಉತ್ತಮ ವೇದಿಕೆ ಎಂದು ಬಜತ್ತೂರು ಗ್ರಾ ಪಂ ಅಧ್ಯಕ್ಷ ಗಂಗಾಧರ ನೆಕ್ಕರಾಜೆ ಅಭಿಪ್ರಾಯಪಟ್ಟರು.


ಬಜತ್ತೂರು ಗ್ರಾ.ಪಂ. ಮತ್ತು ಬಜತ್ತೂರು ಗ್ರಂಥಾಲಯದ ಜಂಟಿ ಆಶ್ರಯದಲ್ಲಿ ಬಜತ್ತೂರು ಗ್ರಂಥಾಲಯದಲ್ಲಿ 4 ದಿನಗಳ ಕಾಲ ನಡೆಯುವ ಮಕ್ಕಳ ಬೇಸಿಗೆ ಶಿಬಿರಕ್ಕೆ ಮೇ 15ರಂದು ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳ ಮನಸ್ಸು ಮುದಗೊಳಿಸುವಂತಹ ವಿವಿಧ ಚಟುವಟಿಕೆಗಳು ಶಿಬಿರದಲ್ಲಿ ದೊರೆಯುತ್ತವೆ. ಆಟ ಮತ್ತು ಪಾಠಗಳು ಮಕ್ಕಳಿಗೆ ವಿವಿಧ ಆಯಾಮಗಳಲ್ಲಿ ಸಿಗುವ ಇಂತಹ ಶಿಬಿರಗಳ ಸದುಪಯೋಗ ಮಕ್ಕಳು ಪಡೆದುಕೊಳ್ಳಬೇಕು. ಶಿಬಿರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಕೆಲಸ ಪೋಷಕರು ಮಾಡಬೇಕು. ಮಕ್ಕಳ ಭವಿಷ್ಯಕ್ಕೆ ಪಂಚಾಂಗ ಹಾಕುವ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಅತ್ಯುತ್ತಮ ಸಾಧನ ಎಂದು ಅವರು ಹೇಳಿದರು.


ಸಂಪನ್ಮೂಲ ವ್ಯಕ್ತಿ ಜಗದೀಶ್ ಬಾರಿಕೆ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಕ್ಕಳ ಬೇಸಿಗೆ ಶಿಬಿರಗಳು ನಡೆದಾದ ಹೆಚ್ಚು ಸಫಲತೆ ಪಡೆದುಕೊಳ್ಳುತ್ತವೆ. ನಗರ ಭಾಗಗಳಲ್ಲಿ ಮಕ್ಕಳಿಗೆ ಬೇಕಾದಷ್ಟು ಅನುಕೂಲಗಳು ಶಾಲೆಗಳು ಹಾಗೂ ಶಿಬಿರಗಳ ಮೂಲಕ ದೊರೆಯುತ್ತವೆ. ಆದರೆ ಗ್ರಾಮೀಣ ಭಾಗದಲ್ಲಿ ಇಂತಹ ಅವಕಾಶಗಳು ಕಡಿಮೆಯಾಗಿದ್ದು, ಶಿಬಿರಗಳ ಆಯೋಜನೆಯಾದಾಗ ಮಕ್ಕಳು ಹೆಚ್ಚು ಆಸಕ್ತಿಯಿಂದ ಭಾಗವಹಿಸುತ್ತಾರೆ ಎಂದರು.


ಬಜತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚಂದ್ರಮತಿ, ಗ್ರಾ.ಪಂ ಸದಸ್ಯರಾದ ಪ್ರೆಸಿಲ್ಲಾ ಡಿಸೋಜ ಬೆದ್ರೋಡಿ, ಅರ್ಪಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೇ 15 ರಿಂದ 18 ತನಕ ನಡೆಯಲಿರುವ ಶಿಬಿರದಲ್ಲಿ ರೋಚನಾ ಸಮತಾ ಮುದ್ಯ ಹಾಗೂ ಪುಷ್ಪಾ ಪಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಬಜತ್ತೂರು ಗ್ರಂಥಾಲಯ ಮೇಲ್ವಿಚಾರಕಿ ಸವಿತಾ ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 25 ಪುಟಾಣಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here