ರಾಮಕುಂಜ: ಹೆದ್ದಾರಿಯುದ್ದಕ್ಕೂ ಇವೆ ಅಪಾಯಕಾರಿ ಮರ

0

ತೆರವಿಗೆ ಗ್ರಾಮಸ್ಥರ ಆಗ್ರಹ | ಪಂಚಾಯತ್ ಮನವಿಗೂ ಇಲ್ಲ ಸ್ಪಂದನೆ

ರಾಮಕುಂಜ: ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಅಪಾಯಕಾರಿ ಮರಗಳಿದ್ದು ಬೀಳುವ ಸ್ಥಿತಿಯಲ್ಲಿವೆ. ಅಪಾಯಕಾರಿ ಮರಗಳ ಗುರುತಿಸಿ ತೆರವುಗೊಳಿಸುವಂತೆ ಗ್ರಾಮ ಪಂಚಾಯತ್‌ನಿಂದ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಅಪಾಯಕಾರಿ ಮರಗಳ ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ, ರಾಮಕುಂಜ -ಹಳೆನೇರೆಂಕಿ ರಸ್ತೆ ಸೇರಿದಂತೆ ರಾಜ್ಯ ಹೆದ್ದಾರಿ ಬದಿ ಹಾಗೂ ಒಳರಸ್ತೆಗಳ ಬದಿಗಳಲ್ಲಿ ಅಲ್ಲಲ್ಲಿ ವಿವಿಧ ಜಾತಿಯ ಅಪಾಯಕಾರಿ ಮರಗಳಿವೆ. ಕೆಲವೊಂದು ಮರಗಳು ಒಣಗಿ ಹೋಗಿದ್ದು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿವೆ. ಇನ್ನು ಕೆಲವು ಮರಗಳು ರಸ್ತೆಗೆ ಬಾಗಿ ನಿಂತು ಜೀವ ಬಲಿಗಾಗಿ ಕಾದು ನಿಂತುಕೊಂಡಂತಿವೆ. ರಾಜ್ಯ ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ದಿನಾಲೂ ನೂರಾರು ವಾಹನಗಳು ಓಡಾಡುತ್ತಿವೆ. ಗಾಳಿ ಮಳೆಗೆ ರಸ್ತೆಗೆ ಬಾಗಿ ನಿಂತಿರುವ ಮರಗಳು ಮುರಿದು ಬಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈಗಾಗಲೇ ಗಾಳಿ ಮಳೆಗೆ ಕೆಲವೊಂದು ಕಡೆ ಮರದ ಗೆಲ್ಲುಗಳು ರಸ್ತೆಗೆ ಬಿದ್ದಿವೆ. ವಿದ್ಯುತ್ ತಂತಿಯ ಮೇಲೆಯೂ ಮರದ ಗೆಲ್ಲುಗಳು ಬೀಳುತ್ತಿದ್ದು ವಿದ್ಯುತ್ ತಂತಿಗಳೂ ತುಂಡಾಗಿ ಬೀಳುತ್ತಿವೆ. ಮರಗಳು ಬಿದ್ದು ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಮರ ತೆರವುಗೊಳಿಸಲಿ ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಪಂಚಾಯತ್‌ನಿಂದ ಪತ್ರ:
ರಾಜ್ಯ ಹೆದ್ದಾರಿ ಬದಿ ಹಾಗೂ ಒಳರಸ್ತೆಗಳ ಬದಿ ಅಪಾಯಕಾರಿಯಾಗಿ ಸ್ಥಿತಿಯಲ್ಲಿರುವ ಮರ ತೆರವುಗೊಳಿಸುವಂತೆ ಸಂಬಂಧಿಸಿದ ಇಲಾಖೆಗೆ ರಾಮಕುಂಜ ಗ್ರಾಮ ಪಂಚಾಯತ್‌ನಿಂದ ನಾಲ್ಕೈದು ತಿಂಗಳ ಹಿಂದೆಯೇ ಪತ್ರ ಬರೆದು ಒತ್ತಾಯಿಸಲಾಗಿದೆ. ಆದರೆ ನಾನಾ ಕಾರಣ ಹೇಳಿ ಅರಣ್ಯ ಇಲಾಖೆ ಮರ ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂಬ ಆರೋಪವೂ ಪಂಚಾಯತ್ ಕಡೆಯಿಂದ ಕೇಳಿಬಂದಿದೆ. ಈಗಾಗಲೇ ಗುರುತು ಮಾಡಿರುವ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸಲು ಇಲಾಖೆ ಮುಂದಾಗಬೇಕೆಂದು ಒತ್ತಾಯಿಸಲಾಗಿದೆ.

ಅಪಾಯಕಾರಿ ಮರ ತೆರವುಗೊಳಿಸಲಿ:
ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲ್ಲಲ್ಲಿ ಅಪಾಯಕಾರಿ ಮರಗಳಿವೆ. ಇವುಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯತ್‌ನಿಂದ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ ಈ ತನಕ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮಳೆಗಾಲ ಆರಂಭಗೊಂಡಿದ್ದು ಗಾಳಿ ಮಳೆಗೆ ಮರಗಳು ರಸ್ತೆಗೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯವರು ಎಚ್ಚೆತ್ತು ಅಪಾಯಕಾರಿ ಮರಗಳ ತೆರವಿಗೆ ತಕ್ಷಣ ಮುಂದಾಗಬೇಕು.
-ಪ್ರಶಾಂತ್ ಆರ್.ಕೆ.,
ಸದಸ್ಯರು, ಗ್ರಾ.ಪಂ.ರಾಮಕುಂಜ

LEAVE A REPLY

Please enter your comment!
Please enter your name here