ಹಣ ಕೊಡದಿದ್ದರೆ ಅಂಡರ್‌ವಲ್ಡ್ ರೌಡಿಗಳ ಮೂಲಕ ಕೊಲೆ ಮಾಡುವುದಾಗಿ ಬೆದರಿಕೆ – ಮಂಗಳೂರಿನ ಗುತ್ತಿಗೆದಾರರಿಂದ ಉಪ್ಪಿನಂಗಡಿ ಪೊಲೀಸರಿಗೆ ದೂರು

0

ಪುತ್ತೂರು: ನಿನಗೆ ಬರುವ ಲಾಭದಲ್ಲಿ ನನಗೆ ಸ್ವಲ್ಪ ಹಣ ಕೊಡು. ಇಲ್ಲದೇ ಇದ್ದಲ್ಲಿ ನನಗೆ ಪರಿಚಯ ಇರುವ ಅಂಡರ್‌ವಲ್ಡ್ ರೌಡಿಗಳ ಮೂಲಕ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಲಾಗಿದೆ ಎಂದು ಆರೋಪಿಸಿ ಮಂಗಳೂರು ನಿವಾಸಿ, ಪಿಡಬ್ಲ್ಯುಡಿ ಗುತ್ತಿಗೆದಾರ ರಿತೇಶ್ ಜೆ.ಶೆಟ್ಟಿ ಎಂಬವರು ಮುನ್ನ ಯಾನೆ ಗೋಪಾಲ ಶೆಟ್ಟಿ ಎಂಬವರ ವಿರುದ್ದ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಿತೇಶ್ ಜೆ.ಶೆಟ್ಟಿ ಅವರು ಪ್ರಸ್ತುತ ಬಂಟ್ವಾಳ ತಾಲೂಕಿನ ಬಿಳಿಯೂರು ಮತ್ತು ಇತರ ಕಡೆಗಳಲ್ಲಿ ನಡೆಸುವ ಕಾಮಗಾರಿಯ ವಿಚಾರದಲ್ಲಿ ಮುನ್ನ ಯಾನೆ ಗೋಪಾಲ ಶೆಟ್ಟಿ ಎಂಬವರು ಮೇ.16ರಂದು ರಾತ್ರಿ ರಿತೇಶ್ ಜೆ.ಶೆಟ್ಟಿ ಅವರ ಕೆಲಸ ಕಾರ್ಯ ನೋಡಿಕೊಳ್ಳುತ್ತಿದ್ದ ಸಂದೇಶ್‌ರವರ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಕೆಲಸದಲ್ಲಿ ಹೆಚ್ಚಿನ ಲಾಭ ಗಳಿಸುತ್ತೀರಿ. ನನಗೆ ಅದರಿಂದ ಹಣವನ್ನು ಕೊಡಬೇಕು ಎಂದು ಹೇಳಿದ್ದು ಆಗ ಸಂದೇಶ ಅವರು ರಿತೇಶ್ ಶೆಟ್ಟಿಯವರ ಮೊಬೈಲ್ ನಂಬ್ರಕ್ಕೆ ಕಾನ್ಫರೆನ್ಸ್ ಮೂಲಕ ಕಾಲ್ ಮಾಡಿದ್ದು ರಿತೇಶ್ ಶೆಟ್ಟಿಯವರು ಮುನ್ನ ಯಾನೆ ಗೋಪಾಲ ಶೆಟ್ಟಿಯವರಲ್ಲಿ ಮಾತನಾಡುತ್ತಿರುವಾಗ ನಿಮ್ಮ ವ್ಯವಹಾರದಲ್ಲಿ ನನಗೆ ಹಣವನ್ನು ನೀಡಬೇಕು ಎಂದಿದ್ದು, ಅದಕ್ಕೆ ರಿತೇಶ್ ಶೆಟ್ಟಿಯವರು ನಿನಗೆ ಯಾಕೆ ಹಣ ನೀಡಬೇಕು ಎಂದಾಗ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ಬರುವ ಲಾಭದಲ್ಲಿ ನನಗೆ ಸ್ವಲ್ಪ ಹಣ ಕೊಡು ಎಂದು ಹೇಳಿ, ನೀನು ಹಣ ಕೊಡದಿದ್ದರೆ ನನಗೆ ಪರಿಚಯ ಇರುವ ಅಂಡರ್‌ವಲ್ಡ್ ರೌಡಿಗಳಲ್ಲಿ ತಿಳಿಸಿ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಮೇ.17ರಂದು ಬೆಳಿಗ್ಗೆ ಮುನ್ನ ಯಾನೆ ಗೋಪಾಲ ಶೆಟ್ಟಿಯು ಇತರ ಇಬ್ಬರೊಂದಿಗೆ ಬಿಳಿಯೂರಿನಲ್ಲಿರುವ ಸೈಟ್‌ಗೆ ಹೋಗಿ ರಿತೇಶ್ ಶೆಟ್ಟಿ ಅವರ ಇರುವಿಕೆಯ ಬಗ್ಗೆ ಕೆಲಸಗಾರರಲ್ಲಿ ವಿಚಾರಿಸಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 61/2024 ಕಲಂ:447,504,387 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here