ಪುತ್ತೂರು: ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಕುಂಬ್ರ ಕೆಪಿಎಸ್ ಶಾಲಾ ಬಳಿ ಇರುವ ಪರಿಶಿಷ್ಠ ಜಾತಿ ಕಾಲನಿಗೆ ಹೋಗುವ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ಇದ್ದುದರಿಂದ ಮಳೆ ನೀರು ರಸ್ತೆ ಮೇಲೆ ಹರಿದು ರಸ್ತೆಯಲ್ಲಿ ಕೆಸರು ಮಣ್ಣು ತುಂಬಿಕೊಂಡು ಜನ, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಶಾಲಾ ಆಟದ ಮೈದಾನದಿಂದ ಬರುವ ಮಳೆ ನೀರು ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೇ ಇದ್ದುದರಿಂದ ನೇರವಾಗಿ ಕಾಂಕ್ರೀಟ್ ರಸ್ತೆಗೆ ಬಂದು ಬೀಳುತ್ತಿತ್ತು. ಇದರಿಂದ ರಸ್ತೆಯಲ್ಲಿ ಕೆಸರು ತುಂಬಿಕೊಂಡು ಜನರು ನಡೆದಾಡಲು ಕೂಡ ಕಷ್ಟವಾಗಿತ್ತು. ದ್ವಿಚಕ್ರ ವಾಹನ, ಅಟೋ ರಿಕ್ಷಾ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಬಗ್ಗೆ ಕಾಲನಿ ನಿವಾಸಿಗಳು ಪಂಚಾಯತ್ ಗಮನಕ್ಕೆ ತಂದಿದ್ದರು. ಇದಲ್ಲದೆ ಪತ್ರಿಕೆಗಳಲ್ಲೂ ಈ ಬಗ್ಗೆ ವರದಿ ಪ್ರಸಾರವಾಗಿತ್ತು. ಇದನ್ನು ತಿಳಿದ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿಯವರು ಮೇ.24 ರಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕಾಲನಿ ನಿವಾಸಿಗಳ ಜೊತೆ ಮಾತುಕತೆ ನಡೆಸಿದರು. ಅಲ್ಲದೆ ತಕ್ಷಣವೇ ಜೆಸಿಬಿಯನ್ನು ತಂದು ರಸ್ತೆಗೆ ಬಿದ್ದು ಕೆಸರು ಮಣ್ಣನ್ನು ತೆಗೆದು ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು. ಪಂಚಾಯತ್ ಉಪಾಧ್ಯಕ್ಷರ ಈ ಕಾರ್ಯಕ್ಕೆ ಕಾಲನಿ ನಿವಾಸಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಕಾಲನಿ ನಿವಾಸಿ ಸುಂದರ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
ಕಾಲನಿ ನಿವಾಸಿಗಳು ನನಗೆ ದೂರವಾಣಿ ಕರೆ ಮೂಲಕ ವಿಷಯ ತಿಳಿಸಿದ್ದರು. ಅದರಂತೆ ನಾನು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ರಸ್ತೆಯಲ್ಲಿ ಕೆಸರು ತುಂಬಿಕೊಂಡು ನಡೆದು ಹೋಗಲು ಕೂಡ ಕಷ್ಟವಾಗುತ್ತಿತ್ತು. ತಕ್ಷಣವೇ ನಾನು ಜೆಸಿಬಿಯನ್ನು ತರಿಸಿ ರಸ್ತೆ ಮೇಲಿನ ಕೆಸರು ಮಣ್ಣನ್ನು ತೆರವು ಮಾಡಿಸಿ, ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿಸಿಕೊಟ್ಟಿರುತ್ತೇನೆ. ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ಕೊಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ.
ಅಶ್ರಫ್ ಉಜಿರೋಡಿ, ಉಪಾಧ್ಯಕ್ಷರು ಒಳಮೊಗ್ರು ಗ್ರಾಪಂ
ನಮ್ಮ ಕಾಲನಿಯ ಸಮಸ್ಯೆಯನ್ನು ಮನಗಂಡು ನಾವು ಹೇಳಿದ ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕೂಡಲೇ ಜೆಸಿಬಿ ಮೂಲಕ ರಸ್ತೆ ಮಣ್ಣು ತೆಗೆಸಿ, ಚರಂಡಿ ವ್ಯವಸ್ಥೆ ಮಾಡಿಕೊಟ್ಟು ಸಹಕರಿಸಿದ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರುರವರಿಗೆ ಕಾಲನಿ ಪರಿವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.
-ಸುಂದರ ಮತ್ತು ಕಾಲನಿ ನಿವಾಸಿಗಳು, ಶಾಲಾ ಬಳಿ