ಜನಾರ್ದನ ದುರ್ಗ ಇವರ ‘ಶಾಂತೇಶ್ವರನ ವಚನಗಳು’ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರಕ್ಕೆ ಆಯ್ಕೆ- ಲೋಕಾರ್ಪಣೆ

0

ನಿಡ್ಪಳ್ಳಿ: ಪುತ್ತೂರು ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ  ಶಾಲೆಯ ಪದವೀಧರ ಶಿಕ್ಷಕ ಜನಾರ್ದನ ದುರ್ಗ ಇವರ “ಶಾಂತೇಶ್ವರನ ವಚನಗಳು “ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಪ್ರಾಧಿಕಾರದ ಚೊಚ್ಚಲ ಕೃತಿ ಪುರಸ್ಕಾರದಡಿ ಈ ವಚನ ಆಯ್ಕೆಗೊಂಡಿದ್ದು, ಇದು ಹದಿನೈದು ಸಾವಿರ ರೂಪಾಯಿ ನಗದು ಹಾಗೂ ಗೌರವ ಪುರಸ್ಕಾರವನ್ನು ಒಳಗೊಂಡಿದೆ. ಬೆಂಗಳೂರಿನ ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಡರಗಿ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಹಾಗೂ ಖ್ಯಾತ ಸಾಹಿತಿ ಜೋಗಿ ಇವರ ಸಮ್ಮುಖದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.

ವಚನ ಕೃತಿ ಲೋಕಾರ್ಪಣೆ: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯ್ಕೆಯಾದ ‘ಶಾಂತೇಶ್ವರನ ವಚನಗಳು’ ಕೃತಿಯು ಮೇ.27ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಸಮಾರಂಭವು ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪ್ರೊಫೆಸರ್ ಝೇವಿಯರ್ ಡಿಸೋಜ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಕೃತಿಯನ್ನು ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್  ಲೋಕಾರ್ಪಣೆ ಮಾಡಲಿರುವರು.ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೂ  ಹಿರಿಯ ಸಾಹಿತಿಗಳು ಆದ ಡಾ. ವರದರಾಜ ಚಂದ್ರಗಿರಿ  ಕೃತಿ ಪರಿಚಯ ಮಾಡಲಿದ್ದಾರೆ. ಗ್ರಂಥಪಾಲಕ ರಾಮ ಕೆ ಇವರು ಕೃತಿಕಾರರ ಪರಿಚಯ ಮಾಡಲಿದ್ದಾರೆ.

ಸಮಾರಂಭದಲ್ಲಿ ಶಿಕ್ಷಕರಿಂದ ಕವಿಗೋಷ್ಠಿ ಹಾಗು ವಿಶೇಷ ಕಾರ್ಯಕ್ರಮವಾಗಿ ವಿದುಷಿ ಡಾ.ಸುಚಿತ್ರ ಹೊಳ್ಳ ಅವರ ಶಿಷ್ಯೆ ನಂದಿನಿ ವಿನಾಯಕ್ ಅವರಿಂದ ಶಾಂತೇಶ್ವರನ ವಚನಗಳ ಗಾಯನವು ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾರಾಯಣ ಪಿ.ಎಸ್ ಅವರು ವಹಿಸಲಿದ್ದು, ಗಿರೀಶ್ ದರ್ಬೆತ್ತಡ್ಕ ಹಾಗು ಶಾರದಾ ತುಳುನಾಡು ಕಾರ್ಯಕ್ರಮ ನಿರ್ವಹಿಸಲಿದ್ದಾರೆ ಎಂದು ಜನಾರ್ದನ ದುರ್ಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here