ಉಪ್ಪಿನಂಗಡಿ: ಬೀಳಲಿದ್ದ ಮನೆಗೆ ಲಕ್ಷ ವೆಚ್ಚದಲ್ಲಿ ಮೇಲ್ಛಾವಣಿ ರಚನೆ-ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಬೆಳಕಾದ ಉದ್ಯಮಿ

0

ಉಪ್ಪಿನಂಗಡಿ: ತಾನು ಗಳಿಸಿದ ಸಂಪತ್ತಿನ ಒಂದಂಶವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿರುವ ಉದ್ಯಮಿ ನಟೇಶ್ ಪೂಜಾರಿಯವರು 34 ನೆಕ್ಕಿಲಾಡಿಯ ಬೀತಲಪ್ಪುವಿನ ಉಷಾ ಅವರ ಮನೆಗೆ ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಮೇಲ್ಚಾವಣಿ ನಿರ್ಮಿಸಿಕೊಟ್ಟಿದ್ದು, ಇಂದೋ ನಾಳೆಯೋ ಮೇಲ್ಚಾವಣಿ ಕುಸಿದು ಬೀಳಬಹುದೆಂಬ ಭಯದ ಬದುಕಿನಿಂದ ದಿನಕಳೆಯುತ್ತಿದ್ದ ಉಷಾ ಅವರ ಕುಟುಂಬದಲ್ಲಿ ಹೊಸ ಬೆಳಕನ್ನು ಮೂಡಿಸಿದ್ದಾರೆ.


ಬೀತಲಪ್ಪು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಎರಡು ಪುಟ್ಟ ಮಕ್ಕಳು ಹಾಗೂ ಪತಿಯೊಂದಿಗೆ ವಾಸಿಸುತ್ತಿದ್ದ ಉಷಾ ಅವರದ್ದು ತೀರಾ ಬಡತನದ ಬದುಕು. ಪತಿಯ ಬೇಜಾವಬ್ದಾರಿಯಿಂದಾಗಿ ಉಷಾ ಅವರೇ ಮನೆಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಿತ್ತು. ಕೂಲಿ ಮಾಡಿಕೊಂಡು ತನ್ನ ಕುಟುಂಬವನ್ನು ನೋಡುತ್ತಿದ್ದರು. ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಿದ ಇವರ ಮನೆಯ ಬಿದಿರಿನ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿತ್ತು. ಮೇಲ್ಛಾವಣಿಗೆ ಅಳವಡಿಸಿದ್ದ ಬಿದಿರು ತುಂಡಾಗಿ ಬಿದ್ದಿತ್ತು. ಇದರೊಂದಿಗೆ ಹಂಚುಗಳು ಬಿದ್ದಿದ್ದವು. ಇದ್ದ ಮೇಲ್ಛಾವಣಿಯಂತೂ ಸಂಪೂರ್ಣ ಶಿಥಿಲಗೊಂಡು ಇಡೀ ಮೇಲ್ಛಾವಣಿಯೇ ಇಂದೋ ನಾಳೆಯೇ ಬೀಳುವ ಸ್ಥಿತಿಯಿತ್ತು. ಇದರಿಂದ ಮಳೆಗಾಲದಲ್ಲಿ ಮನೆಯ ಗೋಡೆಗಳು ಬೀಳುವ ಆತಂಕವಿತ್ತು. ಎರಡು ಪುಟ್ಟ ಮಕ್ಕಳನ್ನು ಹಿಡಿದುಕೊಂಡು ಈ ಮನೆಯಲ್ಲಿ ಭಯದಿಂದಲೇ ವಾಸ್ತವ್ಯ ಮಾಡುವಂತ ಸ್ಥಿತಿ ಇವರದ್ದಾಗಿತ್ತು. ಕುಟುಂಬ ಸಲಹುವುದೇ ಕಷ್ಟವಿರುವಾಗ ಅವರಿಂದ ಇದಕ್ಕೆ ಮೇಲ್ಚಾವಣಿ ನಿರ್ಮಿಸುವುದು ಕನಸಿನ ಮಾತೇ ಸರಿ. ಇವರ ಸಂಕಷ್ಟವನ್ನು ಇನ್ನೊಬ್ಬರಿಂದ ಕೇಳಿ ತಿಳಿದ ಉದ್ಯಮಿ ನಟೇಶ್ ಪೂಜಾರಿಯವರು ಇವರಿಗೆ ನೆರವಿನ ಹಸ್ತ ಚಾಚಿದ್ದು, ತಾನೊಬ್ಬರೇ ಸುಮಾರು ಒಂದು ಲಕ್ಷದಷ್ಟು ರೂ. ಖರ್ಚು ಭರಿಸಿ ಇವರ ಮನೆಗೆ ಕಬ್ಬಿಣದ ಮೇಲ್ಛಾವಣಿಯನ್ನು ಮಾಡಿಕೊಟ್ಟಿದ್ದಲ್ಲದೆ, ಅದಕ್ಕೆ ಹಂಚು ಹೊದಿಸಿ ಕೊಡುವ ಕಾರ್ಯವನ್ನು ನಡೆಸಿದ್ದಾರೆ. ಅಲ್ಲದೇ, ಸರ್ವೀಸ್ ವಯರ್ ತುಂಡಾಗಿದ್ದರಿಂದ ಉಷಾರ ಮನೆಗೆ ಸುಮಾರು ಒಂದು ವರ್ಷದಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಅದನ್ನು ಸರಿ ಮಾಡಿಸಿ ಕೊಡುವ ಭರವಸೆ ನೀಡಿದ್ದಾರೆ.


ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿಯ ಹೊನ್ನಪ್ಪ ಪೂಜಾರಿ ಮತ್ತು ಲೀಲಾವತಿ ದಂಪತಿಯ ಪುತ್ರನಾದ ನಟೇಶ್ ಪೂಜಾರಿಯವರು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ್ದರೂ, ಬಡತನವನ್ನು ಅನುಭವಿಸಿಯೇ ಬೆಳೆದವರು. 22 ವರ್ಷಗಳ ಹಿಂದೆ ತನ್ನ ಶಿಕ್ಷಣವನ್ನು ಮೊಟಕುಗೊಳಿಸಿ, ಬೆಂಗಳೂರಿನಲ್ಲಿ ಎಲೆಕ್ಟ್ರಿಷಿಯನ್‌ಗಳೊಂದಿಗೆ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿದರು. ಬಳಿಕ ಎಲೆಕ್ಟ್ರೀಷಿಯನ್ ಕ್ಷೇತ್ರದಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಿದ ಇವರು ಕರ್ನಾಟಕ ಸರಕಾರದಿಂದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರನಾಗಿ ಬೆಂಗಳೂರಿನಲ್ಲಿ ತನ್ನದೇ ಆದ ಅನನ್ಯ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯನ್ನು ಕಟ್ಟಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತವರು. ಆದ್ದರಿಂದ ಬಡವರಿಗೆ, ಅಸಹಾಯಕರಿಗೆ ಸದಾ ಸ್ಪಂದಿಸುವ ಹೃದಯ ಇವರದ್ದಾಗಿದೆ. ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ಶಾಲೆಗೆ ಶುದ್ಧ ನೀರಿನ ಘಟಕದ ಕೊಡುಗೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಕೊರೋನಾದ ಸಂದರ್ಭ ಕಿಟ್ ವಿತರಣೆ, ಮಡಿಕೇರಿಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಅಲ್ಲಿಗೆ ತೆರಳಿ ಸಂಕಷ್ಟದಲ್ಲಿದ್ದವರಿಗೆ ಆಹಾರದ ಕಿಟ್ ವಿತರಣೆ, ಧಾರ್ಮಿಕ ಕೇಂದ್ರಗಳಿಗೆ ಆರ್ಥಿಕ ನೆರವು, ಕ್ರೀಡಾ ಕೂಟಗಳಿಗೆ ಧನ ಸಹಾಯ ಹೀಗೆ ಒಂದಲ್ಲ, ಎರಡಲ್ಲ, ನಿರಂತರವಾಗಿ ಸಾಮಾಜಿಕ, ಧಾರ್ಮಿಕವಾಗಿ ನಿರಂತರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರೂ, ಎಲೆ ಮರೆಯ ಕಾಯಿಯಂತೆ ಉಳಿದುಬಿಟ್ಟವರು. ಪತ್ನಿ ಪ್ರಮೀಳಾ ಎ. ಹಾಗೂ ಮಕ್ಕಳಾದ ಶಾಗ್ವಿ ಎನ್.ಪಿ. ಮತ್ತು ವಿವಿನ್ ಎನ್.ಪಿ. ಅವರೊಂದಿಗೆ ಸುಖ ಜೀವನ ನಡೆಸುತ್ತಿರುವ ನಟೇಶ್ ಪೂಜಾರಿಯವರು ಉಷಾ ಅವರ ಕುಟುಂಬಕ್ಕೆ ಮೇಲ್ಛಾವಣಿ ಕಟ್ಟಿಕೊಡುವ ಮೂಲಕ ಮಾಡಿದ ಸೇವಾ ಕಾರ್ಯವು ಮನೆ ಬಿದ್ದು ಹೋದರೆ ಮುಂದೇನು ಎಂದು ಕಂಗಾಲಾಗಿದ್ದ ಆ ಕುಟುಂಬಕ್ಕೆ ಹೊಸ ಬದುಕನ್ನೇ ನೀಡಿದಂತಾಗಿದೆ.

LEAVE A REPLY

Please enter your comment!
Please enter your name here