ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವಾಂತರ-ಕೆಸರುಗದ್ದೆಯಾದ ನೆಕ್ಕಿಲಾಡಿ ಸರ್ವೀಸ್ ರಸ್ತೆ

0

ಉಪ್ಪಿನಂಗಡಿ: ಬಿ.ಸಿ.ರೋಡ್- ಅಡ್ಡಹೊಳೆ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಬೇಸಿಗೆಯಲ್ಲಿ ಪರಿಸರದ ಜನತೆಗೆ ಧೂಳಿನ ಸಮಸ್ಯೆಯಾದರೆ, ಈಗ ಕೆಸರಿನ ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ನಡೆಸಬೇಕೆಂದು ಅಧಿಕಾರಿಗಳು ಕಾಮಗಾರಿ ನಿರ್ವಹಿಸುವವರಿಗೆ ಸೂಚನೆ, ನಿರ್ದೇಶನ ನೀಡುವ ಪ್ರಕ್ರಿಯೆಗಳು ನಡೆಯುತ್ತಿಲೇ ಇದ್ದರೂ, ಕಾಮಗಾರಿ ನಡೆಸುವವರು ಮಾತ್ರ ಅದೆಲ್ಲಾವನ್ನು ಗಾಳಿ ತೂರುತ್ತಿದ್ದಾರೆ. ಇದರಿಂದ 34 ನೆಕ್ಕಿಲಾಡಿಯಲ್ಲಿ ನಿರ್ಮಾಣವಾಗಿರುವ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರವೂ ಕಷ್ಟವಾಗಿದೆ.


ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಬದಿಯಲ್ಲಿ 34-ನೆಕ್ಕಿಲಾಡಿ ಪೇಟೆಯಲ್ಲಿ ರಾಘವೇಂದ್ರ ಮಠ ಸಮೀಪದಿಂದ ಕುಡಿಪ್ಪಾಡಿ ತನಕ ಸುಮಾರು 1 ಕಿ.ಮೀ. ತನಕ ಮಣ್ಣು ಹಾಸಲಾಗಿ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿಲ್ಲ. ಒಂದಿಷ್ಟು ಜಾಗದಲ್ಲಿ ಚರಂಡಿ ಇದ್ದರೂ ಅದು ರಸ್ತೆಯಿಂದ ಎತ್ತರದಲ್ಲಿದೆ. ಮತ್ತೊಂದಿಷ್ಟು ಕಡೆಯಲ್ಲಿ ಚರಂಡಿ ನಿರ್ಮಿಸಿದ್ದರೂ ಅದನ್ನು ಅಪೂರ್ಣ ಸ್ಥಿತಿಯಲ್ಲಿ ಬಿಡಲಾಗಿದೆ. ಹೀಗಾಗಿ ಮಳೆ ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆಯೇ ಇಲ್ಲದಂತಾಗಿದ್ದು, ಮಳೆಯ ನೀರು ರಸ್ತೆಯಲ್ಲೇ ನಿಂತು ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಂತಾಗಿದೆ. ಈ ಸರ್ವೀಸ್ ರಸ್ತೆ ಇರುವ 1 ಕಿ.ಮೀ. ವ್ಯಾಪ್ತಿಯಲ್ಲಿ 1 ವಸತಿ ಸಮುಚ್ಚಯ ಸೇರಿದಂತೆ ಸುಮಾರು 40ಕ್ಕೂ ಅಧಿಕ ಮನೆಗಳಿವೆ. ಗ್ಯಾರೇಜು, ಗ್ರಾನೈಟ್, ಹಾರ್ಡ್‌ವೇರ್, ಸಿಮೆಂಟು, ಕಬ್ಬಿಣ ಮಾರಾಟ ಸೇರಿದಂತೆ 10ಕ್ಕೂ ಅಧಿಕ ಉದ್ಯಮ ಸಂಸ್ಥೆಗಳು ಇಲ್ಲಿ ಕಾರ್ಯಾಚರಿಸುತ್ತಿದೆ. ಮಳೆ ಬಂದಾಗಿನಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಕನಿಷ್ಟ ಸೈಕಲ್ ಕೂಡಾ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಮನೆಯವರು, ಮಕ್ಕಳು ಎಲ್ಲೂ ಹೋಗಲಾರದೆ ಒಂದು ರೀತಿಯಲ್ಲಿ ಧಿಗ್ಭಂದನದಲ್ಲಿದ್ದಾರೆ. ಉದ್ಯಮಿಗಳು ವಾಹನ ಬರಲು ಸಾಧ್ಯವಿಲ್ಲದೆ, ವ್ಯಾಪಾರ ಇಲ್ಲದೆ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಪರಿಸರದ ನಿವಾಸಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯಲ್ಲಿ ತಡೆಗೋಡೆ, ಮೋರಿ ನಿರ್ಮಿಸುವ ಸಲುವಾಗಿ ರಸ್ತೆಯ ಇಕ್ಕೆಯಲ್ಲಿ ಅಲ್ಲಲ್ಲಿ ಹೊಂಡ ತೆಗೆದು ಹಾಗೇ ಬಿಡಲಾಗಿದೆ. ಅವುಗಳು ಮರಣ ಗುಂಡಿಯಂತೆ ಭಾಸವಾಗುತ್ತಿದ್ದು, ಜರಿದು ಬೀಳುವ ಅಪಾಯ ಇರುವುದರಿಂದ ನಡೆದುಕೊಂಡು ಹೋಗೋದಕ್ಕೂ ಭಯಪಡುವಂತಾಗಿದೆ. ಈ ಎಲ್ಲಾ ರೀತಿಯಿಂದ ನಾವುಗಳು ಧಿಗ್ಭಂದನದಲ್ಲಿ ಇದ್ದೇವೆ, ನಮ್ಮನ್ನು ಈ ಸಮಸ್ಯೆಯಿಂದ ಪಾರು ಮಾಡಿ ಎಂದು ಪರಿಸರದ ನಿವಾಸಿಗಳು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಈ ರಸ್ತೆಯಲ್ಲಿ ವಾಹನದವರು ಬರುವುದಕ್ಕೆ ನಿರಾಕರಿಸುತ್ತಿದ್ದಾರೆ. ಆದ್ದರಿಂದ ನಮಗೆ ವ್ಯಾಪಾರವೇ ಇಲ್ಲದಂತಾಗಿ ಕಂಗಾಲಾಗಿದ್ದೇವೆ. ಇನ್ನು ಮನೆಯವರೂ ಹೊರಗಡೆ ಹೋಗುವುದಕ್ಕೆ ಆಗುತ್ತಿಲ್ಲ, ಇನ್ನೇನು ಶಾಲೆ ಆರಂಭವಾಗುತ್ತಿದೆ. ಮಕ್ಕಳು ಶಾಲೆಗೆ ಹೋಗುವುದಾದರೂ ಹೇಗೆ..? ಎನ್ನುವುದು ನಮ್ಮೆಲ್ಲರನ್ನು ಕಾಡುತ್ತಿದೆ.
-ಇಸ್ಮಾಯಿಲ್ ಇಕ್ಬಾಲ್, ಪಾಂಡೇಲ್ ಸ್ಟೀಲ್, 34-ನೆಕ್ಕಿಲಾಡಿ

LEAVE A REPLY

Please enter your comment!
Please enter your name here