ಸೂರಿಕುಮೇರು ಚರ್ಚ್ ಗೆ ನೂತನ ಧರ್ಮಗುರುಗಳಾಗಿ ವಂ|ನವೀನ್ ಪ್ರಕಾಶ್ ಡಿಸೋಜ ಅಧಿಕಾರ ಸ್ವೀಕಾರ

0

ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ಬರಿಮಾರ್ ಸೈಂಟ್ ಜೋಸೆಫ್ ಧರ್ಮಕೇಂದ್ರಕ್ಕೆ 26 ನೇ ನೂತನ ಧರ್ಮಗುರುಗಳಾಗಿ ವಂ|ನವೀನ್ ಪ್ರಕಾಶ್ ಡಿ’ಸೋಜರವರು ಆಗಮಿಸಿ ಸೇವಾ ಹುದ್ದೆಯನ್ನು ಸ್ವೀಕರಿಸಿಕೊಂಡಿದ್ದಾರೆ.

ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಈ ನೇಮಕಾತಿಯನ್ನು ಮಾಡಿದ್ದು, ಬಿಷಪ್ ಪ್ರತಿನಿಧಿಯಾಗಿ ಆಗಮಿಸಿದ ವಿಟ್ಲ ವಲಯದ ಧರ್ಮಗುರು ವಂ| ಐವನ್ ಮೈಕಲ್ ರೊಡ್ರಿಗಸ್ ರವರಿಂದ ಸೇವಾ ಹುದ್ದೆಯನ್ನು ಸ್ವೀಕರಿಸಿದರು. ಕಿನ್ನಿಗೋಳಿ ಧರ್ಮಕೇಂದ್ರದಲ್ಲಿ ಹುಟ್ಟಿ ಬೆಳೆದ ವಂ|ನವೀನ್ ಪ್ರಕಾಶ್ ರವರು 2005ನೇ ವರ್ಷದಲ್ಲಿ ಮಂಗಳೂರು ಧರ್ಮಕ್ಷೇತ್ರದ ನಿಕಟಪೂರ್ವ ಧರ್ಮಾಧ್ಯಕ್ಷರಾದ ಅತಿ.ವಂ|ಡಾ|ಅಲೋಶಿಯಸ್ ಪಾವ್ಲ್ ಡಿಸೋಜ ಇವರಿಂದ ಗುರುದೀಕ್ಷೆಯನ್ನು ಪಡೆದು, ವಿಟ್ಲ, ಬಿಜೈ ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಹಾಗೂ ಕಾಸರಗೋಡು, ತಾಕೊಡೆ ಮತ್ತು ಬಾಂಬಿಲ್ ಚರ್ಚ್ ಗಳಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಇದೀಗ ಸೂರಿಕುಮೇರು ಬರಿಮಾರ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿರುವರು.

ಈ ಸಂದರ್ಭದಲ್ಲಿ ಬಂಟ್ವಾಳ ಮತ್ತು ವಿಟ್ಲ ವಲಯದ ಧರ್ಮಗುರುಗಳು, ಸೂರಿಕುಮೇರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಬಾಂಬಿಲ್ ಹಾಗೂ ಸೂರಿಕುಮೇರು ಚರ್ಚ್ ನ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಕೃಷಿ ಕ್ಷೇತ್ರದಲ್ಲಿ ಪಪ್ಪಾಯಿ ಫಾದರ್ ಎಂದೇ ಹೆಸರು ಗಳಿಸಿರುವ ಹಾಗೂ ಸೂರಿಕುಮೇರು ಚರ್ಚ್ ಅಭಿವೃದ್ಧಿಪಡಿಸಿ ಇಡೀ ಪರಿಸರವನ್ನೇ ಬದಲಾಯಿಸಿ ಭಕ್ತಾಧಿಗಳ ಪ್ರೀತಿಗೆ ಪಾತ್ರರಾಗಿರುವ ಈ ಹಿಂದೆ ಧರ್ಮಗುರುವಾಗಿದ್ದ ವಂ| ಗ್ರೆಗರಿ ಪಿರೇರಾರವರನ್ನು ತಲಪಾಡಿ ಮರಿಯಾಶ್ರಮ್ ಧರ್ಮಕೇಂದ್ರಕ್ಕೆ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ಆದೇಶದಂತೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ನೂತನ ಧರ್ಮಗುರುಗಳ ಆಗಮನವಾಗಿದೆ.

LEAVE A REPLY

Please enter your comment!
Please enter your name here