ಅಡಿಕೆ ಸಿಪ್ಪೆಯ ಅಣಬೆಗೆ ಅಂತರ್ರಾಷ್ಟ್ರೀಯ ಮಾನ್ಯತೆ- ಕಣ್ಮರೆಯಾಗಿದ್ದ ಪ್ರಭೇದ ಮರುಸೃಷ್ಟಿಸಿದ ಕೃಷಿಕ ಹರೀಶ್ ರೈ ದೇರ್ಲ

0

ಪುತ್ತೂರು: ಬೀಜ ಬಿತ್ತನೆ ಇಲ್ಲದೆ ಕೇವಲ ಪ್ರಕೃತಿದತ್ತವಾಗಿ ಅಣಬೆಯನ್ನು ಬೆಳೆಸುವ ಮೂಲಕ ಅಪೂರ್ವ ಅಣಬೆ ಪ್ರಭೇದವೊಂದನ್ನು ಪುತ್ತೂರಿನ ಕೃಷಿಕರೊಬ್ಬರು ನಿರಂತರ ಪ್ರಯೋಗದ ಮೂಲಕ ಮರುಸೃಷ್ಟಿ ಮಾಡಿದ್ದಾರೆ. ಮಳೆಗಾಲದಲ್ಲಿ ಕೊಳೆತ ಸಾವಯವ ರಾಶಿಯಲ್ಲಿ ಹುಟ್ಟಿ ಮಾಯವಾಗುತ್ತಿದ್ದ ಅಣಬೆ ಪ್ರಭೇದವನ್ನು ಪ್ರಯೋಗಶೀಲ ಕೃಷಿಕ ಹರೀಶ್ ರೈ ದೇರ್ಲ ಎಂಬವರು ವರ್ಷದ 12 ತಿಂಗಳು ಕೂಡ ಬಿತ್ತನೆ ಬೀಜವಿಲ್ಲದೆ -ಫಸಲು ಪಡೆದು ಇವರು ಕ್ರಾಂತಿ ಮಾಡಿದ್ದಾರೆ. ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಡಿಪುನಡ್ಕ ನಿವಾಸಿಯಾಗಿರುವ ಇವರು ಈಗಾಗಲೇ 24 ಬ್ಯಾಚ್‌ಗಳಲ್ಲಿ ಆಣಬೆ ಕೃಷಿ ಮಾಡಿ ಈಗ 25ನೇ ಬ್ಯಾಚ್ ತಯಾರಿಸುತ್ತಿದ್ದಾರೆ.


ಬಿತ್ತನೆ ಪ್ರಕ್ರಿಯೆ ಇಲ್ಲ:
ಹರೀಶ್ ರೈಯವರು ಅಣಬೆ ಬೀಜ ಬಿತ್ತನೆ ಮಾಡುತ್ತಿಲ್ಲ, ಬದಲಾಗಿ ಸುಲಿದ ಅಡಕೆ ಸಿಪ್ಪೆಯನ್ನೇ ಹದವಾಗಿ ಹರಡಿ ನೀರು ಸಿಂಪಡಿಸಿ ಕೊಳೆಯಲು ಬಿಡುತ್ತಾರೆ. 10ನೇ ದಿನಕ್ಕೆ ಹುಟ್ಟಿಕೊಳ್ಳುವ ಪ್ರಕೃತಿದತ್ತ ಅಣಬೆಯನ್ನು ಪ್ರತೀ ದಿನ ಸಂಜೆ ಕೊಯ್ಯುತ್ತಾರೆ. 10 ದಿನ ಕೊಯ್ಲು ಮಾಡಿ ಬ್ಯಾಚ್ ಮುಗಿಸುತ್ತಾರೆ. ಮತ್ತೆ ಮುಂದಿನ ಬ್ಯಾಚ್‌ಗೆ ಹೊಸ ಅಡಕೆ ಸಿಪ್ಪೆ ಹರಡುತ್ತಾರೆ. ಹೀಗೆ ಇವರು ಅಡಕೆ ಸಿಪ್ಪೆ ರಾಶಿಯಲ್ಲಿ ವರ್ಷವಿಡೀ ಅಣಬೆ ಬೆಳೆಯುತ್ತಿದ್ದಾರೆ. ಇವರು ಬೆಳೆಸುವ ಅಣಬೆಯು ವಿಶ್ವದ ಆಪೂರ್ವ ಕಾಪ್ರಿನೋಪ್ಸ್ ಸಿನೆರಿಯಾ’ ಪ್ರಭೇದ ಎಂದು ಗೊತ್ತಾದ ಬಳಿಕ ಅಂತಾರಾಷ್ಟ್ರೀಯ ಜರ್ನಲ್ ಈ ಸುದ್ದಿಯನ್ನು ಪ್ರಕಟಿಸಿದೆ. ಈ ಅಣಬೆ ಕೃಷಿಯುನ್ನು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ)ದ ವಿಟ್ಲ ಮತ್ತು ಕಾಸರಗೋಡಿನ ವಿಜ್ಞಾನಿಗಳ ತಂಡ ಪ್ರತಿ ಬಾರಿ ಅಧ್ಯಯನ ಮಾಡಿ ಖಾದ್ಯ ವರ್ಗಕ್ಕೆ ಸೇರಿದ ಅಣಬೆಯೆಂದು ಖಚಿತಪಡಿಸಿದೆ.


ಪ್ರಕೃತಿದತ್ತ ಅಣಬೆ:
ಬೈಹುಲ್ಲು, ಒಣಗಿದ ಮರಗಳಲ್ಲಿ ಅಲ್ಲದೆ ಮತ್ತಿತರ ತ್ಯಾಜ್ಯದಲ್ಲಿ ಮಳೆಗಾಲದಲ್ಲಿ ಕೆಲ ಜಾತಿಯ ತಿನ್ನಬಹುದಾದ ಅಣಬೆಗಳು ಹುಟ್ಟುತ್ತವೆ. ಮಳೆಗಾಲ ಆರಂಭದಲ್ಲಿ ಹಾಗೂ ಮಧ್ಯದಲ್ಲಿ ಸಿಡಿಲು ಆರ್ಭಟಿಸಿದ ಮರುದಿನವೇ ಭೂಮಿ ಮೇಲೆ ಅಣಬೆಗಳು ಹುಟ್ಟಿಕೊಳ್ಳುತ್ತವೆ. ಇದನ್ನು ಹೊರತುಪಡಿಸಿದರೆ ಇತ್ತೀಚಿನ ವರ್ಷಗಳಲ್ಲಿ ಅಣಬೆ ಬೀಜ ಬಿತ್ತನೆ ಮಾಡಿ ಅಣಬೆ ಬೆಳೆದು ಮಾರುಕಟ್ಟೆಗೆ ಬಿಡಲಾಗುತ್ತದೆ. ಇವೆರಡರ ನಡುವೆ, ಪ್ರಕೃತಿದತ್ತವಾದ ಆಪೂರ್ವ ತಳಿಯನ್ನು ಅಡಕೆ ಸಿಪ್ಪೆ ಮೂಲಕ ವರ್ಷವಿಡೀ ಪಡೆಯುವ ಮೂಲಕ ಹರೀಶ್ ರೈ ಅವರು ಕಣ್ಮರೆಯಾಗುತ್ತಿದ್ದ ತಳಿಗೆ ಮರು ಜೀವ ನೀಡಿದ್ದಾರೆ.


ಸಿಪಿಸಿಆರ್‌ಐ – ಕ್ಯಾಲಿಕಟ್ ವಿವಿ ವಿಜ್ಞಾನಿಗಳ ಜಂಟಿ ಸಂಶೋಧನೆ:
ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಈ ಅಣಬೆ ಯಾವ ಜಾತಿಗೆ ಸೇರಿದ್ದೆಂದು ಯಾರಿಗೂ ಗೊತ್ತಿರಲಿಲ್ಲ. ಹಿಂದಿನ ಕಾಲದಲ್ಲಿ ಇದನ್ನು ತಿನ್ನುತ್ತಿದ್ದರೂ ಬಳಿಕ ಬಳಕೆಯೇ ನಿಂತು ಹೋಗಿತ್ತು. ಸಂಜೆ ಹೊತ್ತು ಮೂಡಿ ರಾತ್ರಿಯೇ ಬಾಡುತ್ತಿತ್ತು ಅಲ್ಲದೆ ಬೆಳಗ್ಗೆಯ ಹೊತ್ತಿಗೆ ಕಪ್ಪಾಗುತ್ತಿದ್ದ ಕಾರಣ ಜನರು ವಿಷ ಅಣಬೆಯೆಂದೇ ಭಾವಿಸಿದ್ದರು. ಹರೀಶ್ ರೈ ಇದನ್ನು ಬೆಳೆಯಲಾರಂಭಿಸಿದ ಬಳಿಕ ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿಗಳು ಮಾದರಿ ಸಂಗ್ರಹಿಸಿದರು. ಕೇರಳದ ಕ್ಯಾಲಿಕಟ್ ವಿ.ವಿ.ಯ ತಜ್ಞ ದೀಪನ್ ಲತಾ ನೇತೃತ್ವದ ತಂಡ ಮಾ-ಲಜಿ ಮಾಡಿ ಇದು ‘ಕಾಪ್ರಿನೋಪ್ಪಿಸ್ ಸಿನೆರಿಯಾ’ ಪ್ರಭೇದದ ಅಣಬೆ ಎಂದು ದೃಢಪಡಿಸಿದರು. ಈ ಪ್ರಭೇದದ ಅಣಬೆಯನ್ನು ತಿನ್ನಬಹುದಾಗಿದ್ದು ಆದರೆ ಅಮಲು ಪದಾರ್ಥದ ಜತೆ ಸೇವನೆ ಮಾಡಬಾರದು ಎಂಬ ಮಾಹಿತಿ ಈ ಪ್ರಭೇದದ ಮೂಲ ಸ್ವರೂಪ ವಿವರಣೆಯಲ್ಲಿದೆ ಎನ್ನುತ್ತಾರೆ ಸಿಪಿಸಿಆರ್‌ಐ ವಿಜ್ಞಾನಿಗಳು. ಈ ಅಣಬೆಯ ಮೊಲೆಕ್ಯುಲರ್ ಅನಾಲಿಸಿಸ್ ಅನ್ನು ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥ ಡಾ.ಎಂ.ಕೆ.ರಾಜೇಶ್ ನೇತೃತ್ವದ ತಂಡ ಮಾಡಿದೆ.

ಅಂತಾರಾಷ್ಟ್ರೀಯ ‘ಜರ್ನಲ್’ನಲ್ಲಿ ಲೇಖನ ಪ್ರಕಟ
ಹರೀಶ್ ರೈ ಅವರ ಅಣಬೆ ಪ್ರಭೇದದ ಬಗ್ಗೆ ಕೃಷಿ- ಜಲ ತಜ್ಞ ಶ್ರೀಪಡ್ರೆ ಅವರು ಸಿಪಿಸಿಆರ್‌ಐ ವಿಜ್ಞಾನಿಗಳ ಗಮನ ಸೆಳೆದಿದ್ದರು. ವಿಜ್ಞಾನಿಗಳು ಮುಡಿಪಿನಡ್ಕ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಕ್ಯಾಲಿಕಟ್ ವಿವಿ ಸಹಯೋಗದ ಜತೆ ಸಂಶೋಧನೆಗೆ ಒಳಪಡಿಸಿ ಭಾರತದ 283 ಮತ್ತು ವಿಶ್ವದ 2000 ಖಾದ್ಯ ಅಣಬೆ ಪ್ರಭೇಧಗಳ ಪೈಕಿ ಇದೂ ಒಂದೆಂದು ಖಚಿತಪಡಿಸಿದ್ದಾರೆ. ಕೇರಳದ ಸಂಶೋಧಕ ಡಾ| ಪ್ರದೀಪ್ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಇದೀಗ ಈ ಕೃಷಿಯ ಕುರಿತ ಲೇಖನ ’ಎಮಿರೇಟ್ಸ್ ಜರ್ನಲ್ ಆ- -ಡ್ ಆಂಡ್ ಅಗ್ರಿಕಲ್ಚರ್’ ನಲ್ಲಿ ಪ್ರಕಟವಾಗಿದೆ.


‘ ಮಳೆಗಾಲದಲ್ಲಿ ಕೊಳೆಯುವ ಅಡಕೆ ಸಿಪ್ಪೆಯ ರಾಶಿಯಲ್ಲಿ ಅಣಬೆ ಹುಟ್ಟುವುದು ಮೊದಲೇನಲ್ಲ, ಆದರೆ ಇದನ್ನು ಯಾರೂ ಬಳಸುತ್ತಿರಲಿಲ್ಲ. ಒಂದೇ ದಿನದಲ್ಲಿ ಈ ಆಣದೆ ಹುಟ್ಟಿ ಬೆಳೆದು ಕಣ್ಣೆರೆಯಾಗುತ್ತಿತ್ತು. ಪರಿಚಯದ ರಾಮಕೃಷ್ಣ ಪ್ರಭು ಎಂಬವರ ತೋಟದಲ್ಲಿ ನಾನಿದನ್ನು ಕಂಡು ವಿಚಾರಿಸಿದಾಗ ಹಿರಿಯರ ಕಾಲದಲ್ಲಿ ಈ ಪ್ರಭೇದವನ್ನು ತಿನ್ನುತ್ತಿದ್ದರಂತೆ ಎಂಬ ಮಾಹಿತಿ ತಿಳಿಯಿತು. ಬಳಿಕ ನಾನು ಅಡಕೆ ಸಿಪ್ಪೆಯನ್ನು ಹರಡಿ ಕೊಳೆಯುವಂತೆ ಮಾಡಿ ಗಮನಿಸಿದೆ. ಅದೇ ಜಾತಿಯ ಅಣದೆ ಹುಟ್ಟಿಕೊಂಡಿತು. ಹೀಗೆ ಆರಂಭವಾದ ಪ್ರಯೋಗವನ್ನು ಬೇಸಿಗೆಯಲ್ಲೂ ಮುಂದುವರಿಸಿ ಯಶಸ್ವಿಯಾದೆ. ಬಳಕೆಯೇ ನಿಂತು ಹೋಗಿದ್ದ ಈ ಪ್ರಭೇದ ಈಗ ಮತ್ತೊಮ್ಮೆ ತಿನ್ನಲು ಸಿಗುತ್ತಿದೆ. ಈ ಅಣಬೆಯಲ್ಲಿ ರೋಗ ನಿರೋಧಕ ಶಕ್ತಿಯಿದೆ ಎಂಬ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ.’
-ಹರೀಶ್ ರೈ ದೇರ್ಲ ಮುಡಿಪಿನಡ್ಕ, ಪ್ರಯೋಗಶೀಲ ಕೃಷಿಕ.

LEAVE A REPLY

Please enter your comment!
Please enter your name here