ಡಾ. ಎಂ. ಮೋಹನ ಆಳ್ವರಿಗೆ 72ರ ಸಂವತ್ಸರ- ಇಂದು ಕಾರ್ಕಳ ಜ್ಞಾನಸುಧಾದಲ್ಲಿ “ಸವ್ಯಸಾಚಿ” ಸಂಭ್ರಮ

0

ಪುತ್ತೂರು: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಆರೋಗ್ಯ, ದೇಶಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡು ಅದ್ವಿತೀಯ ಸಾಧನೆ ಮಾಡಿರುವ ಆಧುನಿಕ ಮೂಡುಬಿದಿರೆಯ ನಿರ್ಮಾತೃ ಡಾ. ಎಂ. ಮೋಹನ ಆಳ್ವರಿಗೆ ಕಾರ್ಕಳ ಗಣಿತ ನಗರದ ಜ್ಞಾನಸುಧಾ ಆವರಣದಲ್ಲಿ ಇಂದು ಸಂಜೆ 5:30ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಆಶೀರ್ವಚನ ನೀಡಲಿದ್ದಾರೆ. ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.


ಪುಸ್ತಕ ಅನಾವರಣ
ಆಳ್ವರಿಗೆ 72 ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ಹೊರತರಲಾದ ಪುಸ್ತಕ “ಸವ್ಯಸಾಚಿ” ಇದೇ ಸಂದರ್ಭದಲ್ಲಿ ಅನಾವರಣಗೊಳ್ಳಲಿದೆ. ಆಳ್ವರ ಕುರಿತಾದ ಈ ಪುಸ್ತಕ 208 ಪುಟಗಳನ್ನು ಹೊಂದಿದ್ದು, ವಿವಿಧ ಕ್ಷೇತ್ರದ 72 ಮಂದಿ ಗಣ್ಯರ ಲೇಖನ ಒಳಗೊಂಡಿದೆ. ಆಳ್ವರ ಜೀವನ, ವ್ಯಕ್ತಿತ್ವ, ಸಾಧನೆಗಳ ಕುರಿತಾಗಿರುವ ಈ ಪುಸ್ತಕದಲ್ಲಿ ಅಪರೂಪದ ಮತ್ತು ಸುಂದರವಾದ ಚಿತ್ರಗಳು ಅಚ್ಚಾಗಿವೆ.


ಆರ್ಥಿಕ ನೆರವು
ಆಳ್ವರ ಹುಟ್ಟುಹಬ್ಬದ ಪ್ರಯುಕ್ತ ಅನಾರೋಗ್ಯದಿಂದ ಬಳಲುತ್ತಿರುವ 10 ಮಂದಿ ಹಾಗೂ 5 ಸಮಾಜ ಸೇವಾ ಸಂಸ್ಥೆಗಳಿಗೆ ತಲಾ 10 ಸಾವಿರ ರೂ.ವಿನಂತೆ ಆರ್ಥಿಕ ನೆರವನ್ನು ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ನೀಡಲಿದೆ. ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳ ಶುಶ್ರೂಷೆಗಾಗಿ ರೂ. 2 ಲಕ್ಷ ರೂ. ಸಹಕಾರ ನೀಡಲಿದೆ.


ಈ ಕಾರ್ಯಕ್ರಮದಲ್ಲಿ ಆಳ್ವರ ಹಿತೈಷಿಗಳು, ಸಾರ್ವಜನಿಕರು ಭಾಗವಹಿಸುವಂತೆ ಶಾಸಕ ವಿ. ಸುನಿಲ್‌ ಕುಮಾರ್‌, ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ (ರಿ.) ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ, ಆಳ್ವರ ಅಭಿಮಾನಿಗಳ ಬಳಗ – ಕಾರ್ಕಳ ವಿನಂತಿ ಮಾಡಿಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here