ಒಂದು ಲಕ್ಷ ರೂ ಮೌಲ್ಯದ ಪುಸ್ತಕ, ಲೇಖನ ಸಾಮಾಗ್ರಿ ವಿತರಣೆ
ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ಮೇ. 31ರಂದು 2024-25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು. ಹತ್ತನೇ ತರಗತಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯ ಶಿಕ್ಷಕ ವಿಷ್ಣುಪ್ರಸಾದ್ ಸಿ. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಪುತ್ತೂರು ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಕಾಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯದ ದತ್ತ ಜಯಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಗಜಾನನ ಪೈ ಮತ್ತು ಪುತ್ತೂರು ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನಿತಿನ್ ಪಕ್ಕಳ ಭಾಗವಹಿಸಿದ್ದರು. ಪ್ರಮುಖರಾದ ಡಾ.ರಘು ಬಿ. ಶಾಂತಿನಗರ, ನಿರಂಜನ ರೈ ಮಠಂತಬೆಟ್ಟು ಮತ್ತು ಮೋನಪ್ಪ ಗೌಡ ಪಮ್ಮನಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ:
ಒಂದು ಶೈಕ್ಷಣಿಕ ವರ್ಷಗಳಿಗಾಗುವಷ್ಟು ಪ್ರೌಢಶಾಲೆಯ ನೂರು ವಿದ್ಯಾರ್ಥಿಗಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ನೋಟ್ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳನ್ನು ದತ್ತ ಜಯಂತಿ ಸೇವಾ ಟ್ರಸ್ಟ್ ಸುಳ್ಯ ಹಾಗೂ ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಇದರ ವತಿಯಿಂದ ವಿತರಿಸಲಾಯಿತು.
2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ತಂದುಕೊಟ್ಟ ಶಾಲೆಯ 35 ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ನೋಟ್ ಪುಸ್ತಕ ಮತ್ತು ಲೇಖನ ಸಾಮಾಗ್ರಿ ನೀಡಿದ ಗಜಾನನ ಪೈ ಹಾಗೂ ನಿತಿನ್ ಪಕ್ಕಳ, ಕ್ರೀಡಾಕೂಟಕ್ಕೆ ಆರ್ಥಿಕ ಸಹಾಯ ನೀಡಿದ ಸುದೇಶ್ ಶೆಟ್ಟಿ ಶಾಂತಿನಗರ, ಶಾಲೆಗೆ ಒಂದು ಸಾವಿರ ಲೀಟರ್ ನೀರಿನ ಟ್ಯಾಂಕ್ ದಾನ ಮಾಡಿದ ಪ್ರಕಾಶ್ ಗೌಡ ಮತ್ತು ಶಾಲೆಯ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತ್ರಿನೇತ್ರ ಸೌಹಾರ್ದ ಸಹಕಾರಿ ಸಂಘದ ಸಿಇಓ ವಿವೇಕ್ ಶೆಣೈ, ದತ್ತ ಜಯಂತಿ ಸೇವಾ ಟ್ರಸ್ಟಿನ ಟ್ರಸ್ಟಿ ಸೂರ್ಯನಾರಾಯಣ ನಾಯಕ್, ಕೋಶಾಧಿಕಾರಿ ಸುಧೀರ್ ಪ್ರಸಾದ್ ಎ., ತ್ರಿನೇತ್ರ ದತ್ತ ಸೌಹಾರ್ದ ಸಹಕಾರಿ ಸಂಸ್ಥೆಯ ನಿರ್ದೇಶಕ ಜಗದೀಶ್, ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ
ರಾಮಚಂದ್ರ ಪೂಜಾರಿ ಶಾಂತಿನಗರ, ರಾಮಣ್ಣ ಗೌಡ ಗುಂಡೋಳೆ, ಜಗನ್ನಾಥ ಶೆಟ್ಟಿ ನಡುಮನೆ, ಹಿರಿಯ ಮುಂದಾಳು ಪದ್ಮನಾಭ ಶೆಟ್ಟಿ ರೆಂಜಾಜೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಸಹಶಿಕ್ಷಕರಾದ ಜ್ಯೋತಿರಾಣಿ ಎಸ್. ಕಾರ್ಯಕ್ರಮ ನಿರೂಪಿಸಿ ಜಯಂತಿ ಜೆ. ವಂದಿಸಿದರು.