ಉಪ್ಪಿನಂಗಡಿ: ಇಲ್ಲಿನ ಕುಮಾರಧಾರ ಸೇತುವೆಯ ಮೇಲೆ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಮಾಡಿರುವ ರಂಧ್ರಗಳು ಮಣ್ಣು ತುಂಬಿ ಮುಚ್ಚಿ ಹೋಗಿದ್ದು, ಇದರಿಂದ ವಾಹನಗಳು ಸೇತುವೆಯ ಮೇಲೆ ತೆರಳುವಾಗ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರ ಮೇಲೆ ಕೆಸರ ನೀರಿನ ಪ್ರೋಕ್ಷಣೆಯಾಗುವಂತಾಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘನ ವಾಹನಗಳು ಸೇರಿದಂತೆ ದಿನವೊಂದಕ್ಕೆ ಸಾವಿರಕ್ಕಿಂತಲೂ ಅಧಿಕ ವಾಹನಗಳು ಓಡಾಟ ನಡೆಸುತ್ತವೆ. ಅದೇ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಬಳಿ ಕುಮಾರಧಾರ ನದಿಯ ಸೇತುವೆ ಬರುತ್ತಿದ್ದು, ಸೇತುವೆಯ ಮೇಲ್ಮೈಗೆ ಬೀಳುವ ಮಳೆ ನೀರು ಹರಿದು ಹೋಗಲು ಅದಕ್ಕೆ ಸೇತುವೆಯ ಇಕ್ಕೆಲಗಳಲ್ಲೂ ರಂಧ್ರಗಳನ್ನು ಮಾಡಲಾಗಿದೆ. ಆದರೆ ಇದು ಕಸ- ಕಡ್ಡಿ, ಮಣ್ಣು ತುಂಬಿ ಸಂಪೂರ್ಣ ಮುಚ್ಚಿಹೋಗಿದ್ದು, ನೀರಿನ ಹರಿಯುವಿಕೆಗೆ ತಡೆಯಾಗಿ ಸೇತುವೆಯ ಮೇಲ್ಮೈಯಲ್ಲೇ ನೀರು ನಿಲ್ಲುವಂತಾಗಿದೆ. ಇದರಿಂದಾಗಿ ವಾಹನಗಳು ಈ ಸೇತುವೆಯ ಮೇಲೆ ಓಡಾಡುವಾಗ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಅಟೋ ರಿಕ್ಷಾ ಸವಾರರ ಮೇಲೆ ಕೆಸರ ನೀರಿನ ಸಿಂಪಡಣೆಯಾಗುತ್ತಿದೆ.
ಕರ್ತವ್ಯ ಮರೆತ ಇಲಾಖೆ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬರುತ್ತಿದ್ದು, ಇದರ ನಿರ್ವಹಣೆ ಕೂಡಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬರುತ್ತದೆ. ಆದರೆ ಪ್ರತಿ ಬಾರಿಯೂ ಹೆದ್ದಾರಿ ಪ್ರಾಧಿಕಾರವು ತನ್ನ ಕರ್ತವ್ಯವನ್ನು ಮರೆಯುತ್ತಿದ್ದು, ಮಳೆಗಾಲದ ಆರಂಭದಲ್ಲಿ ಇದರ ಮಣ್ಣು ತೆರವುಗೊಳಿಸುವುದಿಲ್ಲ. ಕೆಲವೊಂದು ಬಾರಿ ತೆರವುಗೊಳಿಸಿದರೂ ಅರ್ಧ ಮಳೆಗಾಲ ಮುಗಿದಿರುತ್ತದೆ. ಇಲ್ಲಿನ ಅವ್ಯಸ್ಥೆಯನ್ನು ನೋಡಿ ಬೇಸತ್ತ ಉಪ್ಪಿನಂಗಡಿಯ ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದವರು ಶ್ರಮದಾನದ ಮೂಲಕ ಈ ಹಿಂದೆ ಇದರ ಮಣ್ಣನ್ನು ತೆರವುಗೊಳಿಸಿದ ಉದಾಹರಣೆಗಳು ಇವೆ. ಈ ಬಾರಿಯೂ ಮಳೆ ಬಂದ ಸಂದರ್ಭ ಕೆಸರ ನೀರು ಪ್ರೋಕ್ಷಣೆಯಾಗುವ ಪ್ರತಿ ವರ್ಷದ ಸಮಸ್ಯೆ ಮತ್ತೆ ಎದುರಾಗಿದ್ದು, ಆದ್ದರಿಂದ ಇಲಾಖೆಯವರು ಶೀಘ್ರವಾಗಿ ಇದರ ಮಣ್ಣು ತೆರವುಗೊಳಿಸಿ, ಸೇತುವೆಯ ಮೇಲಿನ ನೀರು ರಂಧ್ರದ ಮೂಲಕ ಸರಾಗವಾಗಿ ಹರಿಯುವಂತೆ ಮಾಡಬೇಕಿದೆ.