ಉಪ್ಪಿನಂಗಡಿ: ಗೃಹಿಣಿ ಪುಷ್ಪಲತಾ ಕೊಲೆ ಪ್ರಕರಣ 10 ವರ್ಷಗಳಾದರೂ ಪತ್ತೆಯಾಗದ ಹಂತಕರು

0

ಉಪ್ಪಿನಂಗಡಿ :ಹಾಡು ಹಗಲೇ ಪುಷ್ಪಲತಾ (34) ಎಂಬ ಗೃಹಿಣಿಯನ್ನು ಉಪ್ಪಿನಂಗಡಿಯಲ್ಲಿ ಕತ್ತು ಇರಿದು ಕೊಲೆಗೈದ ಪ್ರಕರಣಕ್ಕೆ ಇಂದಿಗೆ ಹತ್ತು ವರ್ಷ ಪೂರ್ಣಗೊಂಡರೂ ಪೊಲೀಸ್ ಇಲಾಖೆಗೆ ಹಂತಕರನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಪೊಲೀಸ್ ವ್ಯವಸ್ಥೆ ಮೇಲಿನ ನಂಬಿಕೆಗೆ ಚ್ಯುತಿಯುಂಟಾಗಿದೆ.


ಅಂದು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೆಬಂಡಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯೋಪಧ್ಯಾಯರಾಗಿದ್ದ ಗುರುಮೂರ್ತಿ ಎಂಬವರ ಮಡದಿ ಇಬ್ಬರು ಮಕ್ಕಳ ತಾಯಿಯಾಗಿರುವ ಪುಷ್ಪಲತಾ ರವರು ಮೈಸೂರು ಮೂಲದವರಾಗಿದ್ದು, ,ತನ್ನ ವಾಸ್ತವ್ಯದ ಉಪ್ಪಿನಂಗಡಿ ಕ್ರೈಸ್ತ ದೇಗುಲದ ಒಡೆತನದ ಬಾಡಿಗೆ ಮನೆಯಲ್ಲಿ ದಿನಾಂಕ 5/6/2014 ರ ಗುರುವಾರದಂದು ಕತ್ತು ಇರಿಯಲ್ಪಟ್ಟ ಸ್ಥಿತಿಯಲ್ಲಿ ಕೊಲೆಗೀಡಾಗಿದ್ದರು.


ಪತಿ ಮಕ್ಕಳು ಶಾಲೆಗೆ ಹೋದ ಬಳಿಕ ಎಂದಿನಂತೆ ಬಟ್ಟೆ ಬರೆಗಳನ್ನು ಒಗೆಯುವ ಕಾರ್ಯದಲ್ಲಿ ನಿರತಳಾಗಿದ್ದ ಈಕೆಯನ್ನು ಹಂತಕ ನೆಂಟನಂತೆಯೋ , ಪರಿಚಯಸ್ಥನಂತೆಯೋ ಬಂದು ಕೊಲೆಗೈದಿರುವ ಸಾಧ್ಯತೆಯನ್ನು ಮನೆಯಲ್ಲಿ ಕಂಡು ಬಂದ ತುಂಪು ಪಾನೀಯವನ್ನು ಲೋಟ ಶಂಕಿಸುವಂತೆ ಮಾಡಿತ್ತು. ತನ್ನ ವಾಸ್ತವ್ಯದ ಮನೆಯ ಅಡುಗೆ ಕೋಣೆಯಲ್ಲಿ ಕೊಲೆಯಾಗಿ ಬಿದ್ದಿದ್ದ ಪುಷ್ಪಲತಾ ಕೊಸರಾಡಿಕೊಂಡ ಯಾ ಸಾವಿನ ಸಂಧರ್ಭದಲ್ಲಿ ಪ್ರಾಣ ಉಳಿಸಿಕೊಳ್ಳುವ ಸಹಜ ಯತ್ನವನ್ನಾಗಲಿ ಮಾಡಿರುವ ಯಾವ ಕುರುಹು ಅಲ್ಲಿ ಕಂಡು ಬಂದಿರಲಿಲ್ಲ. ಕೊಲೆಗೀಡಾದಾಗ ಧರಿಸಿದ ಬಟ್ಟೆಯ ಮೇಲ್ಭಾಗದಲ್ಲಿ ರಕ್ತದಕಲೆಯಾಗಲಿ ಕಂಡು ಬರಲಿಲ್ಲ. ಹಂತಕ ಬಲಿಷ್ಠವಾಗಿ ಹಿಡಿದಿಟ್ಟುಕೊಂಡು, ಅಥವ ಪ್ರಜ್ಞೆ ತಪ್ಪಿಸಿ ಈ ಕೃತ್ಯವೆಸಗಿರುವ ಸಾಧ್ಯತೆಯನ್ನೂ ಶಂಕಿಸುವಂತಿತ್ತು.


ಸಹಜವೆಂಬಂತೆ ಈ ಪ್ರಕರಣದಲ್ಲಿ ತನಿಖೆಯ ಸಂಶಯದ ಕಣ್ಣು ಕೊಲೆಗೀಡಾದಾಕೆಯ ಪತಿ ಗುರುಮೂರ್ತಿಯ ಮೇಲೆ ಇತ್ತಾದರೂ , ನಡೆಸಿದ ವಿಚಾರಣೆಯಲ್ಲಿ ಪೂರಕವಾದ ಯಾವುದೇ ಮಾಹಿತಿ ಪೊಲೀಸರಿಗೆ ದೊರೆತಿಲ್ಲವೆನ್ನಲಾಗಿದೆ. ಅಂದಾಜಿನ ಪ್ರಕಾರ ಕೊಲೆ ನಡೆದ ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 11 ಗಂಟೆಯ ಮಧ್ಯೆಯಾಗಿದ್ದರೆ ಸದ್ರಿ ಸಮಯದಲ್ಲಿ ಆಕೆ ಪತಿ ಹಿರೆಬಂಡಾಡಿ ಶಾಲೆಯಲ್ಲೇ ಕರ್ತವ್ಯದಲ್ಲಿರುವುದು ದೃಢಪಟ್ಟಿದೆ. ಪದೇ ಪದೇ ಮಾನಸಿಕ ಖಿನ್ನತೆಗೆ ತುತ್ತಾಗುವ ಪತ್ನಿಯ ಚಿಕಿತ್ಸೆಗೆ ಪತಿ ಬಹಳಷ್ಟು ಶ್ರಮಿಸುತ್ತಿರುವುದು, ಆಧ್ಯಾತ್ಮಿಕ ಕಾರ್ಯಗಳಿಗೆ ಕರೆದೊಯ್ಯುತ್ತಿದ್ದುದ್ದು ಕೂಡಾ ಪ್ರಕರಣದಲ್ಲಿ ಪತಿಯ ಪಾತ್ರದ ಸಾಧ್ಯತೆಯನ್ನು ಕ್ಷೀಣಿಸಿತ್ತು.


ಗೃಹಿಣಿ ಪುಷ್ಪಲತಾ ಕೊಲೆಯ ಪ್ರಕರಣವನ್ನು ಅಮೂಲಾಗ್ರ ತನಿಖೆಗೆ ಒಳಪಡಿಸಬೇಕೆಂದು ಪುತ್ತೂರಿನ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಅದೇ ದಿನ ಜಿಲ್ಲಾ ಪೊಲೀಸ್ ವರಿಷ್ಠರನ್ನು ಒತ್ತಾಯಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆ ಮೇರೆಗೆ ಶವದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಪ್ರತಿಷ್ಠಿತ ವೈದ್ಯ ಸಂಸ್ಥೆಯಲ್ಲಿ ನಡೆಸಲಾಗಿತ್ತು. ಆದಾಗ್ಯೂ ಮರಣೋತ್ತರ ಪರೀಕ್ಷೆ ತನಿಖೆಯಲ್ಲಿ ಫಲಿತಾಂಶವನ್ನು ಒದಗಿಸಲು ಸಹಕಾರಿಯಾಗಿಲ್ಲ ಎನ್ನುವುದು ಈ ವರೆಗಿನ ಬೆಳವಣಿಗೆಯಿಂದ ದೃಢಪಟ್ಟಿದೆ.


ಕೊಲೆಗೀಡಾದ ಶವದ ಮರಣೋತ್ತರ ಪರೀಕ್ಷೆ ನಡೆಸುವಾಗ ಶವದ ಅಂಗಾಂಗಗಳ ಸ್ಥಿತಿಗತಿಯನ್ನಾಧರಿಸಿ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ದಾಖಲಿಸುವುದು ಸಾಮಾನ್ಯ ನಡೆಯಾಗಿದೆ. ಆದರೆ, ಈ ಪ್ರಕರಣದಲ್ಲಿ ವೈದ್ಯಾಧಿಕಾರಿಗಳ ತಂಡವೊಂದು ಘಟನಾ ಸ್ಥಳವನ್ನೂ ಕೂಡಾ ಪರಿಶೀಲನೆ ನಡೆಸಿದೆ. ಇಲ್ಲಿ ಘಟನಾ ಸ್ಥಳದ ಪರಿಶೀಲನೆ ತನಿಖಾಧಿಕಾರಿಗಳಿಗೆ ಪ್ರಮುಖವಾಗಿರುತ್ತದೆಯೇ ವಿನಃ ವೈದ್ಯಾಧಿಕಾರಿಗಳಿಗೆ ಯಾವ ಮಟ್ಟದಲ್ಲಿ ಪ್ರಮುಖವಾಗಿರುತ್ತದೆ ಎನ್ನುವುದು ಅರ್ಥವಾಗದ ವಿಚಾರ.ಇದೇ ಸಂಧರ್ಭದಲ್ಲಿ ವೈದ್ಯರೊಬ್ಬರು ಮಾನಸಿಕ ಖಿನ್ನತೆಯ ವ್ಯಕ್ತಿ ಸ್ವಇಚ್ಚೆಯಿಂದಲೇ ಕುತ್ತಿಗೆಗೆ ಇರಿದು ಸಾವನ್ನಪ್ಪುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆದರೆ ಈ ಸಾಧ್ಯತೆ ನಿಜವಾಗಿದ್ದರೂ, ಪುಷ್ಪಲತಾ ಪ್ರಕರಣದಲ್ಲಿ ಮಾತ್ರ ಅದು ನಿಜವಾಗಿಲ್ಲ .ಯಾಕೆಂದರೆ ಸ್ವತಃ ಇರಿದುಕೊಂಡು ಸಾವನ್ನಪ್ಪಿದ್ದರೆ ಇರಿದುಕೊಳ್ಳಲು ಬಳಸಿದ್ದ ಆಯುಧವೂ ಪತ್ತೆಯಾಗಬೇಕಿತ್ತು. ಮಾತ್ರವಲ್ಲದೆ ಒಂದೇ ಬಾಗಿಲು ಇರುವ ಈ ಮನೆಯಲ್ಲಿ ಬಾಗಿಲಿಗೆ ಬೀಗ ಹಾಕುವ ಸಾಧ್ಯತೆಯೂ ಇರುತ್ತಿರಲಿಲ್ಲ. ಆ ಮನೆಗೆ ಬರಬಹುದಾಗಿದ್ದ ವ್ಯಕ್ತಿಗಳ ಬಗ್ಗೆ ಸಹಜ ಸಂಶಯ ಮೂಡುತ್ತಿದ್ದು, , ಅಪರಿಚಿತರು ಬಂದಿದ್ದಲ್ಲಿ ಅವರನ್ನು ಮನೆಯೊಳಗೆ ಕರೆದು ಪಾನೀಯವನ್ನು ನೀಡುವ ಸಾಧ್ಯತೆ ಇಲ್ಲವಾಗಿದ್ದು, ಪಾನೀಯದ ಸತ್ಕಾರವನ್ನು ಪಡೆದಿರಬೇಕಾದರೆ ಹಂತಕ ಪರಿಚಿತನೇ ಆಗಿರುವ ಸಾಧ್ಯತೆ ದಟ್ಟವಾಗಿತ್ತು. ಮಾತ್ರವಲ್ಲದೆ ತಾನು ಬಟ್ಟೆ ಒಗೆಯುವ ಸಂಧರ್ಭದಲ್ಲಿ ಬಂದಿದ್ದ ಹಂತಕನನ್ನು ಸತ್ಕರಿಸುವ ಸಲುವಾಗಿ ಆಕೆ ಬಟ್ಟೆ ಒಗೆಯುವ ಸ್ಥಳದಿಂದ ಮನೆಗೆ ನಿರ್ಗಮಿಸಿರುವುದು ಕಂಡು ಬಂದಿತ್ತು.


ಪುಷ್ಪಲತಾ ಕೊಲೆ ಪ್ರಕರಣದ ಹಂತಕರನ್ನು ಪತ್ತೆ ಹಚ್ಚಲು ಅಗ್ರಹಿಸಿ ಮಹಿಳಾ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರೂ ಈ ಹತ್ತು ವರ್ಷದ ಅವಧಿಯಲ್ಲಿ ಯಾವುದೇ ಫಲಶ್ರುತಿ ಕಾಣಿಸದಿರುವುದು ವ್ಯವಸ್ಥೆಯೊಳಗಿನ ದೋಷವಾಗಿದೆ.

LEAVE A REPLY

Please enter your comment!
Please enter your name here