ಮೂಡಬಿದ್ರೆ ಆಳ್ವಾಸ್‌ನಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳ-ಶಾಸಕ ಅಶೋಕ್ ರೈ ಟ್ರಸ್ಟ್ ಮೂಲಕ 750 ಉದ್ಯೋಗಾಂಕ್ಷಿಗಳು ಮೇಳದಲ್ಲಿ ಭಾಗಿ

0


ಕಲಿಕೆಯ ವೇಳೆ ಉದ್ಯೋಗವೂ ಒಂದು ಧ್ಯೇಯವಾಗಿರಲಿ; ಸುದೇಶ್ ಶೆಟ್ಟಿ


ಪುತ್ತೂರು: ಕಲಿಕೆಯ ಧ್ಯೇಯ ಉದ್ಯೋಗಗಳಿಸುವುದಾಗಿದೆ ಆದರೆ ಎಲ್ಲರಿಗೂ ಇಲ್ಲಿ ಸರಕಾರಿ ಉದ್ಯೋಗ ಸಿಗುತ್ತದೆ ಎಂಬ ಖಾತ್ರಿಯಿಲ್ಲದೇ ಇರುವ ಕಾರಣ ಖಾಸಗಿ ಸಂಸ್ಥೆಗಳಲ್ಲಿ ದಾರಾಳ ಉದ್ಯೋಗಗಳು ದೊರೆಯುತ್ತಿದ್ದು ವಿದ್ಯಾರ್ಥಿಳು ಕಲಿಕೆಯ ವೇಳೆಯೇ ಉದ್ಯೋಗದ ಧ್ಯೇಯವನ್ನು ಹೊಂದಬೇಕು ಎಂದು ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.


ಅವರು ಮೂಡಬಿದ್ರೆ ಆಳ್ವಾಸ್‌ನಲ್ಲಿ ಜೂ. 7 ಮತ್ತು 8 ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳಕ್ಕೆ ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು 750 ಮಂದಿ ಆಕಾಂಕ್ಷಿಗಳನ್ನು ಮೇಳಕ್ಕೆ ಕರೆದೊಯ್ಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿರುವ ಪ್ರತೀಯೊಬ್ಬ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವಂತಾಗಬೇಕು ಎಂಬ ಸಂಕಲ್ಪವನ್ನು ಶಾಸಕರಾದ ಅಶೋಕ್ ರೈಯವರದ್ದು, ಆಳ್ವಾಸ್ ಮೇಳದಲ್ಲಿ ಇಂದು 750 ಮಂದಿ ಭಾಗವಹಿಸುತ್ತಿದ್ದಾರೆ ಅವರನ್ನು ಮೇಳಕ್ಕೆ ತಲುಪಿಸುವ ವ್ಯವಸ್ಥೆಯನ್ನು ಟ್ರಸ್ಟ್ ಮೂಲಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಪುತ್ತೂರಿನ ಯುವಕರಿಗೆ ಉದ್ಯೋಗ ದೊರೆಯಬೇಕು, ಸ್ವಂತ ಕಾಲಲ್ಲಿ ನಿಂತು ಅವರು ಅವರ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತಾಗಬೇಕು ಎಂಬ ಧ್ಯೇಯವರು ಶಾಸಕರಲ್ಲಿದೆ ಎಂದು ಸುದೇಶ್ ಶೆಟ್ಟಿಯವರು ಹೇಳಿದರು.


ಕಳೆದ ವರ್ಷ ನಡೆದ ಉದ್ಯೋಗ ಮೇಳದಲ್ಲಿ ಪುತ್ತೂರಿನ ಹಲವು ಮಂದಿ ಯುವಕ, ಯುವತಿಯರಿಗೆ ಉದ್ಯೋಗ ದೊರಕಿದೆ, ಉದ್ಯೋಗಾಂಕ್ಷಿಗಳು ಎಲ್ಲೆಲ್ಲಿ ಉದ್ಯೋಗ ಮೇಳಗಳು ನಡೆಯುತ್ತವೆಯೋ ಅಲ್ಲೆಲ್ಲಾ ಭಾಗವಹಿಸುವಂತಾಗಬೇಕು, ಒಂದೇ ಸಂದರ್ಶನದಲ್ಲಿ ಉದ್ಯೋಗ ಸಿಗದೇ ಇರಬಹುದು ಆದರೆ ಪದೇ ಪದೇ ಸಂದರ್ಶನದಲ್ಲಿ ಭಾಗವಹಿಸಿದ್ದಲ್ಲಿ ಅನುಭದ ಜೊತೆಗೆ ವಿವಿಧ ಕಂಪೆನಿಗಳ ಪರಿಚಯವೂ ಆಗಲಿದೆ, ನನಗೆ ಇಂಥದ್ದೇ ಉದ್ಯೋಗ ಬೇಕು ಎಂಬ ಕಲ್ಪನೆ ಸರಿಯಲ್ಲ, ಸಿಕ್ಕಿದ ಉದ್ಯೋಗವನ್ನು ಸೇರಿಕೊಂಡು ಬಳಿಕ ತನ್ನ ಕನಸಿನ ಉದ್ಯೋಗಕ್ಕೆ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು. ಪುತ್ತೂರಿನಲ್ಲಿ ಹಲವು ಉದ್ಯಮಗಳನ್ನು ಆರಂಭ ಮಾಡಿಸುವ ಮೂಲಕ ಶಾಸಕರು ಇಲ್ಲಿನವರಿಗೇ ಉದ್ಯೋಗ ನೀಡಲಿದ್ದಾರೆ ಎಂದು ಹೇಳಿದರು.

ನಾಚಿಕೆ ಬಿಟ್ಟು ಧೈರ್ಯದಿಂದ ಭಾಗವಹಿಸಿ: ನಿಹಾಲ್ ಶೆಟ್ಟಿ
ಸಂದರ್ಶನವನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ ಟ್ರಸ್ಟಿನ ಪ್ರಮುಖರಾದ ನಿಹಾಲ್ ಶೆಟ್ಟಿ ಮಾತನಾಡಿ ನಾವು ನಾಚಿಕೆ ಬಿಡಬೇಕು, ಯಾವುದೇ ಸಮಯದಲ್ಲೂ ನಾವು ಧೈರ್ಯದಿಂದ ಎಲ್ಲವನ್ನೂ ಎದುರಿಸುವಂತಾಗಬೇಕು. ಆ ಕೆಲಸ ನನ್ನ ಯೋಗ್ಯತೆಗೆ ತಕ್ಕುದಲ್ಲ ಎಂಬ ಭಾವನೆಯನ್ನು ಬಿಟ್ಟು ಬಿಡಬೇಕು , ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ನಾವು ಕೆಲವೊಮ್ಮ ಕಷ್ಟಗಳನ್ನು ಎದರಿಸಬೇಕಾಗುತ್ತದೆ ಆನಂತರ ಮುಂದೆ ಒಳ್ಳೆಯ ದಿನಗಳು ಬರುತ್ತದೆ ಎಂದು ಹೇಳಿದರು. ಪುತ್ತೂರಿನ ಉದ್ಯೋಗಾಂಕ್ಷಿಗಳಿಗೆ ಟ್ರಸ್ಟ್ ಮೂಲಕ ತರಬೇತಿಯನ್ನು ನೀಡಿ ಮೇಳಕ್ಕೆ ಕಳುಹಿಸಲಾಗಿದೆ, ಕನಿಷ್ಟ ಹತ್ತು ಮಂದಿಗೆ ಉದ್ಯೋಗ ದೊರೆತರೂ ಅದು ನಮಗೆ ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರಾದ ಶಿವಪ್ರಸಾದ್ ಕೋಡಿಂಬಾಡಿ, ಯೋಗೀಶ್ ಸಾಮಾನಿ, ಉದ್ಯಮಿಗಳಾದ ರಿತೇಶ್ ಶೆಟ್ಟಿ ಮಂಗಳೂರು,ರಾಮಣ್ಣಪಲಿಂಜ ಉಪಸ್ಥಿತರಿದ್ದರು. ಟ್ರಸ್ಟ್ ಸಿಬಂದಿ ಲಿಂಗಪ್ಪ ಸ್ವಾಗತಿಸಿ, ವಿನೋದ್ ಕೊಳ್ತಿಗೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here