ದೇಶದಲ್ಲಿ ಸರ್ವಾಧಿಕಾರವನ್ನು ಕಟ್ಟಿ ಹಾಕಿದ್ದು ಅಂಬೇಡ್ಕರ್ ಸಂವಿಧಾನ; ಶಾಸಕ ಅಶೋಕ್ ರೈ
ಪುತ್ತೂರು: ಇಂದು ಈ ದೇಶದಲ್ಲಿ ಜನ ನೆಮ್ಮದಿಯಿಂದ ಬಾಳ್ವೆ ನಡೆಸುತ್ತಿದ್ದರೆ ಅದಕ್ಕೆ ಕಾರಣ ಅಂಬೇಡ್ಕರ್ ಅವರ ಸಂವಿಧಾನವಾಗಿದೆ, ಅಂಬೇಡ್ಕರ್ ಅವರ ಸಂವಿಧಾನ ಈ ದೇಶದಲ್ಲಿ ಸರ್ವಾಧಿಕಾರವನ್ನು ಕಟ್ಟಿ ಹಾಕಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ವಿಟ್ಲ ಮಾದರಿ ಹಿ ಪ್ರಾ ಶಾಲೆಯ ಸಭಾಂಗಣದಲ್ಲಿ ನಡೆದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿ ನಮ್ಮನ್ನಾಳುವವರು ಏನೇ ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ಇಲ್ಲಿನ ಕಟ್ಟಕಡೇಯ ನಾಗರಿಕನಿಗೆ ಸಂವಿಧಾನ ಕಲ್ಪಿಸಿದೆ ಈ ಸಂವಿಧಾನ ಇಲ್ಲದೇ ಇರುತ್ತಿದ್ದರೆ ದೇಶದಲ್ಲಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿರುತ್ತಿರಲಿಲ್ಲ, ಸಂವಿಧಾನದ ಕಾರಣಕ್ಕಾಗಿಯೇ ಇಂದು ಭಾರತ ವಿಶ್ವದಲ್ಲಿ ಮೆರೆಯುವಂತಾಗಿದೆ. ನಮ್ಮ ದೇಶದಲ್ಲಿ ಇರುವ ಸ್ವಾತಂತ್ರ್ಯ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಸಂವಿದಾನವನ್ನು ರಚನೆ ಮಾಡುವ ವೇಳೆ ಅಂಬೇಡ್ಕರ್ ಅವರು ಎಷ್ಟೊಂದು ಮುಂದಾಲೋಚನೆಯನ್ನು ಮಾಡಿಕೊಂಡಿದ್ದರು ಎಂಬುದನ್ನು ನಾವು ಪ್ರತೀಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಇಂದು ದೇಶದಲ್ಲಿ ಜನ ನೆಮ್ಮದಿಯಿಂದ ಬದುಕಲು ಸಂವಿಧಾನ ಪ್ರೇರಣೆಯಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶಾಸಕರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರಿಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು.
ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ರವಿಕಿರಣ್ ಪುಣಚ, ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೋಮಪ್ಪ , ಶಿಕ್ಷಕರಾದ ಶ್ರೀಧರ್, ಹರೀಶ್ ಬಿಕೆ, ಪ್ರೇಮ ಬಿಕೆ, ಶೈಲೇಶ್‌ಕುಮಾರ್, ಶಿಕ್ಷಕ ರಫೀಕ್, ರಾಮಣ್ಣ ಪಲಿಂಜ, ಚಂದ್ರಶೇಖರ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.