*ಪುತ್ತೂರು ಬ್ಲಾಕ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಪಕ್ಷದ ವರಿಷ್ಠರಿಗೆ ಮನವಿ
*ಮೂರು ವರ್ಷದ ಅವಧಿ ತೃಪ್ತಿ ಇದೆ – ಎಂ ಬಿ ವಿಶ್ವನಾಥ ರೈ
*ತಪ್ಪು ಸಂದೇಶ ಹೋಗಬಾರದೆಂದು ಪತ್ರಿಕಾಗೋಷ್ಟಿ – ಡಾ.ರಾಜಾರಾಮ್ ಕೆ ಬಿ
ಪುತ್ತೂರು: ಪಕ್ಷ ನಮಗೆ ಮೂರು ವರ್ಷದ ಅವಕಾಶ ಕೊಟ್ಟಿದೆ. ನಮ್ಮ ಅವಧಿ ಮೂರು ವರ್ಷ. ಈ ಅವಧಿಯಲ್ಲಿ ಸಿದ್ದಾಂತಕ್ಕೆ ಸರಿಯಾಗಿ ಪಕ್ಷದ ಎಲ್ಲಾ ಸಂಘಟನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿ ಹುದ್ದೆಗೆ ನ್ಯಾಯ ಕೊಟ್ಟಿದ್ದೇವೆ. ಹಾಗಾಗಿ ನಮ್ಮನ್ನು ಹುದ್ದೆಯಿಂದ ಬಿಡಬೇಕೆಂದು ನಮ್ಮ ಹಿರಿಯರಿಗೆ ಮನವರಿಕೆ ಮಾಡಿದ್ದೇವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಕಲ್ಪಣೆ ಮೂಡಿದಾಗ ಅದಕ್ಕೆ ಸ್ಪಷ್ಟನೆ ನೀಡಲು ಪತ್ರಿಕಾಗೋಷ್ಟಿ ಮಾಡುತ್ತಿದ್ದೇವೆ ಎಂದು ಪುತ್ರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ ರಾಜಾರಾಮ್ ಕೆ ಬಿ ಜಂಟಿಯಾಗಿ ಹೇಳಿದ್ದಾರೆ.
ನಮ್ಮ ದೇಶದ ಅತೀ ದೊಡ್ಡ ರಾಷ್ಟ್ರೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಪುತ್ತೂರು ವಿಧಾನ ಸಭಾ ಕ್ಷೇತ್ರದ ನಮ್ಮ ಎರಡು ಬ್ಲಾಕ್ ಗಳಾದ ಪುತ್ತೂರು ಬ್ಲಾಕ್ ಮತ್ತು ಉಪ್ಪಿನಂಗಡಿ ಬ್ಲಾಕ್ ನಿಗದಿತ ಅವಧಿಯಿಂದ ವರ್ಷ ಪೂರ್ಣಗೊಂಡಿರುತ್ತದೆ. ಎಂ.ಬಿ ವಿಶ್ವನಾಥ ರೈ ಮತ್ತು ಡಾ ರಾಜಾರಾಮ್ ಕೆ. ಆದ ನಾವಿಬ್ಬರು ಈ ಎರಡು ಬ್ಲಾಕ್‌ಗಳ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಸಂತೃಪ್ತಿ ನಮಗಿದೆ. ನಮ್ಮ ಅವಧಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಕಾರ್ಯಕರ್ತರನ್ನು ಸಂಘಟಿಸಿದ್ದೇವೆ. ಪಕ್ಷದ ವರಿಷ್ಠರ ಆದೇಶದಂತೆ ಕಾಲ ಕಾಲಕ್ಕೆ ನಿರ್ವಹಿಸಬೇಕಾದ ಕಾರ್ಯಕ್ರಮಗಳನ್ನು ಅಗತ್ಯವಿದ್ದರೆ ಪ್ರತಿಭಟನಾ ಸಭೆಗಳನ್ನು ನಡೆಸಿ ಪಕ್ಷವನ್ನು ಸದಾ ಚಟುವಟಿಕೆಯಲ್ಲಿ ಇಟ್ಟಿದ್ದೇವೆ. ಕಳೆದ ವಿಧಾನ ಸಭಾ ಚುನಾವಣಾ ಸಂಧರ್ಭದಲ್ಲಿ ನಾವಿಬ್ಬರೂ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಆಕಾಂಕ್ಷಿಗಳಾಗಿದ್ದೆವು. ಆದರೂ ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಅಶೋಕ್ ಕುಮಾರ್ ರೈ ಯವರಿಗೆ ಅವಕಾಶ ಕಲ್ಪಿಸಿತು. ಈ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿ ನಮ್ಮ ಕರ್ತವ್ಯಕ್ಕೆ ಎಳ್ಳಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ, ಎಲ್ಲೂ ಭಿನ್ನಾಭಿಪ್ರಾಯ ಬಾರದ ರೀತಿಯಲ್ಲಿ ಅಹರ್ನಿಶಿ ಶ್ರಮಿಸಿದ್ದೇವೆ. ನಮ್ಮ ಶ್ರಮದ ಫಲಶೃತಿಯಾಗಿ ಅಶೋಕ್ ಕುಮಾರ್ ರೈ ಯವರು ಶಾಸಕರಾಗಿ ಆರಿಸಿ ಬಂದರು ನಮ್ಮಿ ಅಧ್ಯಕ್ಷೀಯ ಅವಧಿಯಲ್ಲಿ ಓರ್ವ ಶಾಸಕರನ್ನು ಪಡೆದ ಧನ್ಯತಾ ಭಾವ ನಮಗಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೂಡ ಬೂತ್ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ತೊಡಗಿಸಿಕೊಂಡು ಮತಯಾಚನೆ ಮಾಡಿದ್ದೇವೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕೂಡಾ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ.
ಒಟ್ಟಾರೆ ಹೇಳುವುದಾದರೆ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಪಕ್ಷಕ್ಕೆ ಎಳಷ್ಟೂ ಚ್ಯುತಿ ಬಾರದ ಹಾಗೆ ಕಾರ್ಯನಿರ್ವಹಿಸಿದ್ದೇವೆ ಎಂಬ ಆತ್ಮ ತೃಪ್ತಿ ನಮಗಿದೆ ಎಂದ ಅವರು ಇವತ್ತು ಮೂರು ವರ್ಷ ಅವಧಿ ಪೂರ್ಣ ಆಗಿದೆ. ನಮ್ಮ ಅಪೇಕ್ಷೆ ಯಾವುದು ಇಲ್ಲ. ಇನ್ನು ಯುವಕರಿಗೆ ,ಹೊಸಬರಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು.