





ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ಆಡಳಿತ ಮಂಡಳಿ ವತಿಯಿಂದ ಜೂ. 8 ರಂದು ಅಭಿನಂದನಾ ಕಾರ್ಯಕ್ರಮ ನಡೆಯಿತು.


ನಿರಂತರ ಕಲಿಯುವಿಕೆ ಅಗತ್ಯ
ಮಕ್ಕಳು ಪಾಠಗಳನ್ನು ಪ್ರಾರಂಭದಿಂದಲೇ ನಿರಂತರವಾಗಿ ಕಲಿಯಬೇಕು ಎಂದು ಮುಖ್ಯ ಅತಿಥಿಯಯಾದ ಪಾಣಾಜೆ ಗ್ರಾಮ ಪಂಚಾಯತಿನ ಅಧ್ಯಕ್ಷೆ ಮೈಮನಾತುಲ್ ಮೆಹ್ರಾ ಮಕ್ಕಳಿಗೆ ಕರೆ ನೀಡಿದರು.
ಸುಬೋಧ ಮಕ್ಕಳು ಉನ್ನತ ಪ್ರಜೆಗಳಾಗಬೇಕು
ಆರ್ಲಪದವು ಸ್ನೇಹ ಟೆಕ್ಸ್ ಟೈಲ್ಸ್ ಮಾಲಕ ವರದರಾಯ ನಾಯಕ್ ಮಾತನಾಡಿ ವಿದ್ಯಾರ್ಥಿಗಳು ಶ್ರಮಪಟ್ಟು ಓದಬೇಕು, ಜೀವನದಲ್ಲಿ ಒಂದು ಗುರಿ ಇರಬೇಕು ಎಂದು ಮಕ್ಕಳನ್ನು ಅಭಿನಂದಿಸಿದರು.






ಸತತವಾಗಿ 100ಶೇ ಬರಬೇಕು
ಸುಬೋಧ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಜಗನ್ಮೋಹನ ರೈ ಸೂರಂಬೈಲ್ ಮಾತನಾಡಿ ಶಾಲೆಗೆ ಸತತವಾಗಿ ನೂರು ಶೇಕಡ ಫಲಿತಾಂಶ ಬಂದಲ್ಲಿ ಮಕ್ಕಳ ಸಂಖ್ಯೆ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ಪ್ರತಿ ವರ್ಷ ಶಾಲೆಯಲ್ಲಿ ಶೇ. 100 ಫಲಿತಾಂಶ ಬರುವಂತೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ಉಡುಗೊರೆ,ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯರು ನೀಡಿದ ನೆನಪಿನ ಕಾಣಿಕೆ, ಆಡಳಿತ ಮಂಡಳಿ ಸದಸ್ಯರಾದ ವಿದ್ಯಾ ಮಣ್ಣಂಗಳ ಅವರು ನೀಡಿದ ನಗದು ಬಹುಮಾನವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಯವರಿಗೆ ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಮುಹಮ್ಮದ್ ಅಫ್ಸಲ್, ಚೈತನ್ಯ ಜಿ, ಗ್ರಿಷ್ಮಾ ಎ ಮತ್ತು ಶ್ರೀಜಶ್ರೀ ಕುಮಾರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸುಬೋಧ ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾದ ಪಿಲಿಂಗಲ್ಲು ಕೃಷ್ಣ ಭಟ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ ಶುಭಾಹಾರೈಸಿದರು.
ಇದೇ ಸಂದರ್ಭದಲ್ಲಿ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು.
ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶೇ 100 ಫಲಿತಾಂಶಕ್ಕೆ ಕಾರಣಕರ್ತರಾದ ಎಲ್ಲಾ ವಿದ್ಯಾರ್ಥಿಗಳನ್ನು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯವರನ್ನು ಅಭಿನಂದಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ಸಿಂಚನಾ, ಸಿಂಚನಾ ಎಸ್ ಸ್ವಸ್ತಿಕಾ, ದೀಪ್ತಿ ಲಕ್ಷ್ಮಿ, ಭವ್ಯಶ್ರೀ ಹಾಗೂ ಲಾವಣ್ಯ ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಶ್ರೀಪತಿ ಭಟ್ ವಂದಿಸಿದರು. ಸಹ ಶಿಕ್ಷಕಿ ನಿರ್ಮಲ ಕೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್ .ಪಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಸದಸ್ಯರು ಪೋಷಕರು,ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡರು.
*ವರದರಾಯ ನಾಯಕ್ ರಿಂದ ನಗದು ಬಹುಮಾನ ವಿತರಣೆ
ಸ್ನೇಹ ಟೆಕ್ಸ್ ಟೈಲ್ಸ್ ನ ಮಾಲಕ ವರದರಾಯ ನಾಯಕ್ ಅವರು ಶಾಲೆಗೆ ಪ್ರಥಮ ಸ್ಥಾನ ಪಡೆದ ಮುಹಮ್ಮದ್ ಆಫ್ಸಲ್ ಗೆ ರೂ 10000, ದ್ವಿತೀಯ ಸ್ಥಾನ ಪಡೆದ ಚೈತನ್ಯ ಜಿ ಅವರಿಗೆ ರೂ 3000, ಮೂರನೇ ಸ್ಥಾನ ಪಡೆದ ಗ್ರೀಷ್ಮಾ. ಎ ಅವರಿಗೆ ರೂ 2000, ನಾಲ್ಕನೇ ಸ್ಥಾನ ಪಡೆದ ಶ್ರೀಜಶ್ರೀ ಕುಮಾರಿಗೆ ರೂ 1000 ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ರೂ 500/-ರಂತೆ ನಗದು ಬಹುಮಾನ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಿದರು. ಮುಂದೆಯೂ ಶಾಲೆಗೆ ನೂರು ಶೇಕಡ ಫಲಿತಾಂಶ ಬಂದಲ್ಲಿ ಎಲ್ಲಾ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಗೌರವಿಸುವುದಾಗಿ ತಿಳಿಸಿದರು.





