ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ವಿಶ್ವ ತಂಬಾಕು ವಿರೋಧಿ ದಿನಾಚರಣೆ’

0

10 ಲಕ್ಷಕ್ಕೂ ಅಧಿಕ ಜನರು ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ: ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ

ಪುತ್ತೂರು: ತಂಬಾಕು ಸೇವನೆಯು ಮನುಷ್ಯನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ ಹೇಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ ಯೋಜನೆಗಳನ್ನು ರೂಪಿಸುವುದರ ಜತೆಗೆ ಅವರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ತಂಬಾಕು ನಿಯಂತ್ರಣದ ವಿಚಾರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಮಾಜ ಒಟ್ಟಾಗಿ ಪಣ ತೊಡಬೇಕಾಗಿದೆ ಎಂದು ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕರೂ, ತಜ್ಞ ವೈದ್ಯರೂ ಅಗಿರುವ ಡಾ.ರಾಘವೇಂದ್ರಪ್ರಸಾದ್ ಬಂಗಾರಡ್ಕ ಹೇಳಿದರು. ಅವರು ನೆಹರುನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಾನೂನು ಅರಿವು ನೆರವು ಘಟಕದ ಸಹಯೋಗದಲ್ಲಿ ನಡೆದ ‘ವಿಶ್ವ ತಂಬಾಕು ವಿರೋಧಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿಶೇಷ ಉಪನ್ಯಾಸ ನೀಡಿದರು. ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ. ಈಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂಬಾಕು ಹಾಗೂ ಮಾದಕ ವಸ್ತುಗಳಿಂದ ದೂರವಿರಬೇಕು. ತಮ್ಮ ಆರೋಗ್ಯ ಕಾಪಾಡುವುದರ ಜತೆಗೆ ಕುಟುಂಬದವರನ್ನೂ ಈ ಚಟದಿಂದ ದೂರ ಇರಿಸುವ ಉದ್ದೇಶದಿಂದಲಾದರೂ ತಂಬಾಕಿನ ಚಟಕ್ಕೆ ಒಳಗಾಗಿರುವವರು ‘ತಂಬಾಕು ರಹಿತ ದಿನ’ದಂದು ಈ ಚಟವನ್ನು ತ್ಯಜಿಸುವ ಪಣ ತೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ. ಪಿ. ಮಾತನಾಡಿ, ತಂಬಾಕು ನಿಯಂತ್ರಣ ಕಾಯ್ದೆ ಹಾಗೂ ಅನೇಕ ಯೋಜನೆಗಳು ಜಾರಿಯಲ್ಲಿದ್ದರೂ, ತಂಬಾಕು ಸೇವನೆಯ ಪ್ರಮಾಣ ಕಡಿಮೆಯಾಗುತ್ತಿಲ್ಲ ಎಂಬುದು ಆತಂಕದ ವಿಚಾರ. ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳು, ಮನೋವ್ಯೆದ್ಯರು, ಶಿಕ್ಷಣ ಸಂಸ್ಥೆಗಳು, ಆಪ್ತ ಸಮಾಲೋಚಕರು ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ತಂಬಾಕು ಮುಕ್ತ ಗ್ರಾಮ, ನಗರ ಹಾಗೂ ಕುಟುಂಬ ನಿರ್ಮಾಣ ಅಸಾಧ್ಯವೇನಲ್ಲ ಎಂದ ಅವರು, ಕಾನೂನು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕು ಎಂದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕರಾದ ಲಕ್ಷ್ಮೀಕಾಂತ ಎ. ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ರಕ್ಷಿತ್ ಸ್ವಾಗತಿಸಿ, ವಿದ್ಯಾರ್ಥಿ ಅಭಿಷೇಕ್ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕೀರ್ತಿ ಕೆ. ಆರ್ ನಿರೂಪಿಸಿದರು.

LEAVE A REPLY

Please enter your comment!
Please enter your name here