ಕೆಯ್ಯೂರು: ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ-12 ನೇ ವರ್ಷದ ಪುಸ್ತಕ ವಿತರಣೆ, ವಿದ್ಯಾಸಿರಿ ಪುರಸ್ಕಾರ

0

ಪುತ್ತೂರು: ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರಾಥಮಿಕ) ಕೆಯ್ಯೂರು ಇದರ ಸಹಕಾರದೊಂದಿಗೆ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ 12 ನೇ ವರ್ಷದ ಪುಸ್ತಕ ವಿತರಣೆ ಹಾಗೂ ವಿದ್ಯಾಸಿರಿ ಪುರಸ್ಕಾರ ಜೂ.18 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಪ್ರಾಥಮಿಕ ವಿಭಾಗದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ದೀಪ ಬೆಳಗಿಸಿ ಉದ್ಘಾಟಿಸಿ, ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಕೋಶ ಓದು, ದೇಶ ಸುತ್ತು ಎಂಬಂತೆ ಹರ್ಷಕುಮಾರ್ ರೈಯವರು ತಾನು ಕಲಿತ ಶಾಲೆಗೆ ತನ್ನಿಂದ ಸಾಧ್ಯವಾಗುವ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದ್ದಾರೆ. ಅವರು ನೀಡಿದ ಪುಸ್ತಕಗಳನ್ನು ಸದ್ಭಳಕೆ ಮಾಡಿಕೊಂಡು ಒಳ್ಳೆಯ ವಿದ್ಯಾರ್ಥಿಗಳಾಗಿ ಉತ್ತಮ ಶಿಕ್ಷಣವನ್ನು ಪಡೆಯುವಂತಾಗಿರಿ ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್‌ರವರು ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಪಡೆಯುವ ಮೂಲಕ ತಾನು ಕಲಿತ ಶಾಲೆಗೆ, ಊರಿಗೆ, ತಾಲೂಕಿಗೆ ಕೀರ್ತಿ ತರುವಂತಾಗಬೇಕು ಎಂದು ಹೇಳಿ ಶುಭ ಹಾರೈಸಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಇಸ್ಮಾಯಿಲ್ ಪಿ.ರವರು ಮಾತನಾಡಿ, ಸರಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಸಮುದಾಯದ ಸಹಕಾರ ಕೂಡ ಅತೀ ಅಗತ್ಯ ಈ ನಿಟ್ಟಿನಲ್ಲಿ ಡಾ.ಹರ್ಷ ಕುಮಾರ್ ರೈಯವರು ತಾನು ಗಳಿಸಿದರಲ್ಲಿ ಒಂದಂಶವನ್ನು ತನ್ನೂರಿನ ಶಾಲೆಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.


ಶಾಲಾ ಮುಖ್ಯಗುರು ಬಾಬು.ರವರು ಮಾತನಾಡಿ, ‘ನನ್ನ ಬಗ್ಗೆ ಮಾತನಾಡಬಾರದು, ನಾನು ಮಾಡುವ ಕೆಲಸ ಮಾತನಾಡಬೇಕು’ ಇದು ಡಾ.ಹರ್ಷ ಕುಮಾರ್ ರೈಯವರ ಮಾತಾಗಿದೆ. ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ಎಲ್ಲೂ ತನ್ನನ್ನು ತಾನು ಬಿಂಬಿಸಿಕೊಳ್ಳದೆ, ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರನ್ನು ಯಾರಾದರೂ ಹೊಗಳಿದರೆ ಅವರಿಗೆ ಇರಿಸು ಮುರಿಸು ಆಗುತ್ತದೆ ಇಂತಹ ಒಳ್ಳೆಯ ಮನಸ್ಸಿನ ಹರ್ಷ ಕುಮಾರ್ ರೈಯವರು ತಾನು ಕಲಿತ ಶಾಲೆಗೆ ಕಳೆದ 12 ವರ್ಷಗಳಿಂದ ತನ್ನ ಅಜ್ಜಿ, ಅಜ್ಜನ ಹೆಸರಿನಲ್ಲಿ ಪುಸ್ತಕಗಳನ್ನು ಅಲ್ಲದೆ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅವರಿಗೆ ನಮ್ಮ ಸಂಸ್ಥೆ ಸದಾ ಚಿರಋಣಿಯಾಗಿರುತ್ತದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ, ಕಾರ್ಯಕ್ರಮದ ರೂವಾರಿ ಡಾ.ಹರ್ಷ ಕುಮಾರ್ ರೈ ಮಾಡಾವು ಸ್ವಾಗತಿಸಿದರು. ಸಹ ಶಿಕ್ಷಕ ನವೀನ್ ರೈ, ಆದಿತ್ಯ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಮುಖ್ಯಗುರು ಬಾಬು ವಂದಿಸಿದರು. ಸಹ ಶಿಕ್ಷಕ ರವಿ ಪಿ.ಎಮ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿಯರಾದ ವಸಂತಿ, ಸಂದ್ಯಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

430 ವಿದ್ಯಾರ್ಥಿಗಳು, 1700 ಪುಸ್ತಕ ವಿತರಣೆ
ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದ ಎಲ್‌ಕೆಜಿಯಿಂದ 8 ನೇ ತರಗತಿವರೆಗಿನ 430 ವಿದ್ಯಾರ್ಥಿಗಳಿಗೆ ತಲಾ 4 ಬರೆಯುವ ಪುಸ್ತಕಗಳಂತೆ ಒಟ್ಟು 1700ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ವಿದ್ಯಾಸಿರಿ ಪುರಸ್ಕಾರ
ಅತ್ಯುತ್ತಮ ವಿದ್ಯಾರ್ಥಿ( ಬೆಸ್ಟ್ ಔಟ್‌ಗೋಯಿಂಗ್ ಸ್ಟುಡೆಂಟ್)ಯಾಗಿ ಮಿನಾಜ್‌ರವರನ್ನು ಈ ಸಂದರ್ಭದಲ್ಲಿ ಶಾಲು,ಫಲಪುಷ್ಪ, ಪ್ರಮಾಣಪತ್ರ, ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು. ಇದಲ್ಲದೆ ತರಗತಿವಾರು ಉತ್ತಮ ಅಂಕ ಗಳಿಸಿದ ಸುಮಾರು 16 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.


‘ 430 ವಿದ್ಯಾರ್ಥಿಗಳಿಗೆ ಸುಮಾರು 1700 ಪುಸ್ತಕಗಳನ್ನು ವಿತರಿಸಲಾಗಿದೆ. ಅಲ್ಲದೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ಸೇರಿದಂತೆ ವಿದ್ಯಾಸಿರಿ ಪುರಸ್ಕಾರ ಮಾಡಲಾಗಿದೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವುದು ನಮ್ಮ ಉದ್ದೇಶವಾಗಿದೆ. ನಮ್ಮೊಂದಿಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.’
ಡಾ.ಹರ್ಷ ಕುಮಾರ್ ರೈ ಮಾಡಾವು, ಅಧ್ಯಕ್ಷರು ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು

LEAVE A REPLY

Please enter your comment!
Please enter your name here