ಜನರ ಸೇವೆ ಮಾಡಲೆಂದೇ ಈ ಸಮಿತಿಗಳನ್ನು ರಚನೆ ಮಾಡಲಾಗಿದೆ; ಅಶೋಕ್ ರೈ
ಪುತ್ತೂರು: ಕ್ಷೇತ್ರದ ಜನರ ಸೇವೆ ಮಾಡುವ ಉದ್ದೇಶದಿಂದ ಸರಕಾರದಿಂದ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದ್ದು ಸಮಿತಿಯ ಪ್ರತೀಯೊಬ್ಬ ಸದಸ್ಯರೂ ತಮ್ಮ ಸಮಿತಿಯ ಕಾರ್ಯವೈಖರಿಯನ್ನು ತಿಳಿದುಕೊಂಡು ಕೆಲಸ ಮಾಡಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ಜೂ.18ರಂದು ಶಾಸಕರ ಕಚೇರಿ ಸಭಾಂಗಣದಲ್ಲಿ ಸರಕಾರದಿಂದ ನಾಮ ನಿರ್ದೇಶನಗೊಂಡ ವಿವಿಧ ಸಮಿತಿಗಳ ಸದಸ್ಯರಿಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರದಿಂದ ನಾಮ ನಿದೇರ್ಶನಗೊಂಡಿರುವ ಮೆಸ್ಕಾಂ, ಆರೋಗ್ಯ ರಕ್ಷಾ ಸಮಿತಿ, ಅಕ್ರಮಸಕ್ರಮ ಸಮಿತಿ, ಶಾಲಾ ಅಭಿವೃದ್ದಿ ಸಮಿತಿ, ಆಶ್ರಯ ಸಮಿತಿ, ಧಾರ್ಮಿಕ ದತ್ತಿ ಇಲಾಖಾ ಸಮಿತಿ, ತುಳು ಒಕ್ಕೂಟ ಸಮಿತಿ, ಧಾರ್ಮಿಕ ಪರಿಷತ್ ಸಮಿತಿ, ನಗರಸಬಾ ನಾಮ ನಿರ್ದೇಶಿತ ಸದಸ್ಯರುಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಸಮಿತಿಯ ಸದಸ್ಯರೆಲ್ಲರಿಗೂ ಮಹತ್ತರವಾದ ಜವಾಬ್ದಾರಿ ಇದೆ. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ರೀತಿ ಕೆಲಸ ಮಾಡಬೇಕು, ಸಾರ್ವಜನಿಕರೊಂದಿಗೆ ಹೇಗೆ ಬೆರೆಯಬೇಕು, ಅಧಿಕಾರಿಗಳ ಜೊತೆ ಹೇಗೆ ಸಂಯಮದಿಂದ ವರ್ತಿಸಬೇಕು ಮತ್ತು ಜನರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸಬೇಕು ಎಂಬುದರ ಕುರಿತು ಶಾಸಕರು ಮಾಹಿತಿ ನೀಡಿದರು.ಈಗಾಗಲೇ ಎಲ್ಲಾ ಸಮಿತಿಗಳಿಗೂ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಕೆಲಸದಲ್ಲಿ ವೇಗತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಜನರ ಸೇವೆಗೆ ಮುಂದಾಗಬೇಕು ಎಂದು ಹೇಳಿದರು. ಎಲ್ಲಿಯೂ ಯಾವುದೇ ಲೋಪ ದೋಷಗಳು ಕಂಡು ಬಂದಲ್ಲಿ ಅಲ್ಲಿಗೆ ತೆರಳಿ ತಕ್ಷಣ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಸದಸ್ಯರಿಗೆ ಸಲಹೆ ನೀಡಿದರು.
ಸಮಯ ಪ್ರಜ್ಞೆ ಮತ್ತು ತಾಳ್ಮೆ ಅತೀ ಮುಖ್ಯ; ಮಹಮ್ಮದ್ ಬಡಗನ್ನೂರು
ನಾಮ ನಿರ್ದೇಶಿತ ಸದಸ್ಯರು ಅತ್ಯಂತ ತಾಳ್ಮೆಯಿಂದ ಸಾರ್ವಜನಿಕರ ಜೊತೆ ಬೆರೆಯಬೇಕು. ನಾನಾ ರೀತಿಯ ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ನಿಮ್ಮಲ್ಲಿಗೆ ಬರುವಾಗ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ತಾಳ್ಮೆ ಮತ್ತು ಸಹಕಾರ ಮನೋಭಾವನೆ ನಮ್ಮ ಶಾಸಕರಿಗೂ ವರದಾನವಾಗಲಿದೆ ಎಂದು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹೇಳಿದರು. ಎಲ್ಲಾ ನಾಸದಸ್ಯರು ತಾವು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಪ್ರತೀ ತಿಂಗಳು ಮಾಸಿಕ ವರದಿಯನ್ನು ಶಾಸಕರಿಗೆ ಸಲ್ಲಿಸಬೇಕು ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ವ್ಯಾಟ್ಸಪ್ ಸಂದೇಶ ಹಾಕುವಾಗ ಎಚ್ಚರ ಇರಲಿ
ಪಕ್ಷದ ನಾಯಕರ ಬಗ್ಗೆ ವ್ಯಾಟ್ಸಪ್ ನಲ್ಲಿ ಚರ್ಚೆ ಮಾಡಬೇಡಿ, ಅಧ್ಯಕ್ಷರು ಬದಲಾಗಬೇಕು, ಅವನು ಹಾಗೆ ಇವನು ಹೀಗೆ ಎಂದು ಪಕ್ಷದ ನಾಯಕರ ಬಗ್ಗೆಯಾಗಲಿ ಕಾರ್ಯಕರ್ತರ ಬಗ್ಗೆಯಾಗಲಿ ಚರ್ಚೆ ಮಾಡಬೇಡಿ ಎಂದು ಮನವಿ ಮಾಡಿದ ಶಾಸಕರು ಈ ರೀತಿ ಚರ್ಚೆ ಮಾಡಿದರೆ ಅದು ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂಬುದನ್ನು ನಾವು ಪ್ರತೀಯೊಬ್ಬರೂ ಅರಿತುಕೊಳ್ಳಬೇಕು. ಯಾರಾದರೂ ಅರಿವಿನ ಕೊರತೆಯಿಂದ ವ್ಯಾಟ್ಸಪ್ ಸಂದೇಶ ಹಾಕಿದರೆ ಅವರನ್ನು ತಿದ್ದುವ ಕೆಲಸವನ್ನು ಇತರೆ ಕಾರ್ಯಕರ್ತರು ಮಾಡಬೇಕು ಎಂದು ಶಾಸಕರು ಹೇಳಿದರು. ಅನಗತ್ಯವಾಗಿ ಪಕ್ಷದ ವಿಚಾರವನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಬೇಡಿ ಎಂದು ಹೇಳಿದರು.
ಲಂಚ ಪಡೆದರೆ ಪೊಲೀಸ್ ಕೇಸು ದಾಖಲಿಸುವೆ
ಅಕ್ರಮ ಸಕ್ರಮದಲ್ಲಿ ಅಧಿಕಾರಿಗಳು ಯಾರಾದ್ರು ಲಂಚ ಪಡೆದಿದ್ದಾರೆ ಎಂಬುದಕ್ಕೆ ಪೂರ್ಣ ದಾಖಲೆ ಸಿಕ್ಕಿದರೆ ಅವರ ವಿರುದ್ದ ಪೊಲೀಸ್ ಕೇಸು ದಾಖಲಿಸಲಾಗುವುದು. ಕೆಲವೊಂದು ಗ್ರಾಮಕರಣಿಕರು ಅಕ್ರಮ ಸಕ್ರಮ ಮತ್ತು 94 ಸಿ ಗೆ 50 ರಿಂದ 60 ಸಾವಿರ ಲಂಚ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಿದೆ. ಯಾರೂ ಲಂಚದ ಹಣಕ್ಕೆ ಕೈ ಒಡ್ಡಬೇಡಿ ಯಾರೇ ಆಗಲಿ ಲಂಚ ಪಡೆದುಕೊಂಡರೆ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಬಡವರಿಗೆ ತೊಂದರೆ ನೀಡಿದರೆ ನಾನು ಸುಮ್ಮನೆ ಕೂರುವುದಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು, ಅವರಿಂದ ನಾನು ಏನೂ ಅಪೇಕ್ಷೆ ಪಡುವುದಿಲ್ಲ ಬಡವರ ಕೆಲಸವನ್ನು ಸರಿಯಾಗಿ ಮಾಡಬೇಕು ಎಂಬುದೇ ನನ್ನ ಉದ್ದೇಶವಾಗಿದೆ. ಕೆಲಸ ಮಾಡದ ಅಧಿಕಾರಿಗಳಿಗೆ ಏನು ಮಾಡಬೇಕು ಎಂದೂ ನನಗೆ ಗೊತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ವೇದಿಕೆಯಲ್ಲಿ ತುಳು ಕೂಟದ ರಾಜ್ಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ಗ್ಯಾರಂಟಿ ತಾಲೂಕು ಸಮಿತಿ ಅಧ್ಯಕ್ಷರಾದ ಉಮನಾಥ ಶೆಟ್ಟಿ ಪೆನೆ, ಪುಡಾ ಅಧ್ಯಕ್ಷರಾದ ಭಾಸ್ಕರ ಗೌಡ ಕೋಡಿಂಬಾಳ, ಪಕ್ಷದ ಹಿರಿಯ ಮುಖಂಡರಾದ ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.