ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿದರ್ಖಾಸು ನಿವಾಸಿ ಹೇಮಾವತಿ (37ವ.) ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಖಚಿತಪಡಿಸಿಕೊಂಡಿರುವ ಪೊಲೀಸರು ಆರೋಪಿಯಾಗಿರುವ, ಮೃತರ ಅಕ್ಕನ ಮಗ ಅಪ್ತಾಪ್ತ ಬಾಲಕನನ್ನು ಬಂಧಿಸಿದ್ದಾರೆ.
ಜೂ.16ರ ರಾತ್ರಿಯಿಂದ 17ರ ಬೆಳಿಗ್ಗಿನ ಅವಧಿಯಲ್ಲಿ ಹೇಮಾವತಿ ಅವರನ್ನು ಕೊಲೆ ಮಾಡಲಾಗಿತ್ತು.ಜೂ.16ರಂದು ರಾತ್ರಿ ಹೇಮಾವತಿ ಅವರ ಮನೆಯಲ್ಲಿ ತಂಗಿದ್ದ ಆಕೆಯ ಅಕ್ಕನ ಮಗ, ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಅಪ್ರಾಪ್ತ ಬಾಲಕ ತಡರಾತ್ರಿ ಹೇಮಾವತಿಯವರು ಮಲಗಿದ್ದಲ್ಲಿಗೆ ಹೋಗಿ ದೇಹ ಸುಖ ಬಯಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದಕ್ಕೆ ಹೇಮಾವತಿಯವರು ಪ್ರತಿರೋಧ ವ್ಯಕ್ತಪಡಿಸಿ ಆರೋಪಿಗೆ ಬೈದು ಬಳಿಕ ನಿದ್ದೆಗೆ ಜಾರಿದ್ದರು. ತಾನು ಮಾಡಿರುವ ಕೃತ್ಯವನ್ನು ಚಿಕ್ಕಮ್ಮ ಹೇಮಾವತಿಯವರು ಬಹಿರಂಗಪಡಿಸಿಯಾರು ಎಂದು ಹೆದರಿ ಆರೋಪಿ ಬಾಲಕ ತನ್ನ ಚಿಕ್ಕಮ್ಮ ಹೇಮಾವತಿಯವರ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆ ವೇಳೆ ಬಾಯಿ ಬಿಟ್ಟರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ದ:
ಹೇಮಾವತಿಯವರು ಸಾವಿಗೀಡಾದ ಬಳಿಕ, ಹೃದಯಾಘಾತದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಬಿಂಬಿಸಲು ನೋಡಿದ್ದ ಆರೋಪಿ, ಈ ಕುರಿತು ತನ್ನ ತಂದೆ ಸಹಿತ ಇತರರಿಗೆ ಮಾಹಿತಿ ನೀಡಿದ್ದ. ಆದರೆ ಈ ಬಗ್ಗೆ ಅನುಮಾನಗಳು ಮೂಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ, ಆರೋಪಿ ಬಾಲಕ ಮತ್ತಾತನ ತಂದೆ ಶಂಕರ ಹಾಗೂ ಶಂಕರ ಅವರ ಇನ್ನಿಬ್ಬರು ಮಕ್ಕಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದರು. ಆರೋಪಿ ಮೇಲಿನ ಬಲವಾದ ಸಂಶಯದೊಂದಿಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ತಾನು ಚಿಕ್ಕಮ್ಮನ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಅಪ್ರಾಪ್ತ ಬಾಲಕ ಪೊಲೀಸರೆದುರು ಒಪ್ಪಿಕೊಂಡಿದ್ದ.
ಘಟನೆ ಬಗ್ಗೆ ಮೃತ ಹೇಮಾವತಿ ಅವರ ಪತಿ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ವಿಠಲ ಪೈ ಯಾನೆ ಶೈಲೇಶ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ನನ್ನ ಪತ್ನಿ ಹೇಮಾವತಿ ಆಕೆಯ ತಾಯಿ ಮನೆಯಲ್ಲಿ ವಾಸ್ತವ್ಯ ಇದ್ದು, ಆಕೆ ಮಲಗಿದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಜೂ.17ರಂದು ಬೆಳಿಗ್ಗೆ ತನಗೆ ಮಾಹಿತಿ ಬಂದಿತ್ತು. ಆ ಬಳಿಕ ನಾನು ಹೆಂಡತಿಯ ಮನೆಯಾದ ಬಂಟ್ವಾಳ ತಾಲೂಕು, ಬಿಳಿಯೂರು ಗ್ರಾಮದ ದರ್ಖಾಸ್ತು ಎಂಬಲ್ಲಿಗೆ ಹೋಗಿ ನೋಡಿದಾಗ, ಹೆಂಡತಿಯ ಮೃತ ದೇಹದಲ್ಲಿದ್ದ ಗಾಯದ ಗುರುತು ಬಗ್ಗೆ ಸಂಶಯ ಬಂದಿರುತ್ತದೆ, ಜೂ.16ರಂದು ರಾತ್ರಿ ಹೆಂಡತಿಯ ಅಕ್ಕನ ಮಗ ಹೆಂಡತಿಯ ಮನೆಗೆ ಬಂದಿದ್ದ. ಹೆಂಡತಿಯ ತಾಯಿ, ಹೆಂಡತಿಯ ಅಕ್ಕನ ಮಗ ಮತ್ತು ಹೆಂಡತಿ ರಾತ್ರಿ ಊಟ ಮಾಡಿ ಮಲಗಿದ್ದರು. ಆ ಬಳಿಕ ರಾತ್ರಿಯಿಂದ 17ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಯಾರೋ ವ್ಯಕ್ತಿಗಳು ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿದೆ ಎಂದು ದೂರಿನಲ್ಲಿ ಆಪಾದಿಸಿದ್ದರು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿ ಬಂಧನ:
ಮೃತ ಹೇಮಾವತಿ ಅವರ ಪತಿ ವಿಠಲ ಪೈ ಯಾನೆ ಶೈಲೇಶ್ – ಅವರ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ ವೇಳೆ, ತಾನೇ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದರಿಂದ ಆರೋಪಿ ಬಾಲಕನನ್ನು ಬಂಧಿಸಿ ಆತನ ವಿರುದ್ದ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿಯಾಗಿರುವ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ತಿಳಿಸಿದ್ದಾರೆ.
ಶಮೀಮಾ ಕೊಲೆ ಪ್ರಕರಣದ ನೆನಪು
ಕೆಲ ವರ್ಷಗಳ ಹಿಂದೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ರಾಮಕುಂಜ ಕುಂಡಾಜೆಯ ಗೃಹಿಣಿ ಶಮೀಮಾ ಕೊಲೆ ಆ ಪ್ರಕರಣದ ಮಾದರಿಯಲ್ಲಿಯೇ ಹೇಮಾವತಿಯವರ ಕೊಲೆ ನಡೆದಿದೆ.ಶಮೀಮಾ ಅವರನ್ನು ಯಾರೋ ಅಪರಿಚಿತರು ಕೊಲೆ ಮಾಡಿದ್ದಾರೆಂದು ಹೇಳಿಕೊಂಡು,ಆರೋಪಿಗಳ ಪತ್ತೆಗೆ ಆಗ್ರಹಿಸಿ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆದಿತ್ತು.ಅಂದು ಬಿಜೆಪಿ ಮಹಿಳಾ ಮೋರ್ಚಾ ನಾಯಕಿಯಾಗಿದ್ದ ಶಕುಂತಳಾ ಟಿ.ಶೆಟ್ಟಿಯವರ ನೇತೃತ್ವದಲ್ಲಿ ಈ ಭಾಗದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಪಕ್ಷಭೇದವಿಲ್ಲದೆ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿತ್ತು.ಶಕುಂತಳಾ ಶೆಟ್ಟಿಯವರಿಗೆ ರಾಜಕೀಯವಾಗಿ ಉತ್ತಮ ಅವಕಾಶ ದೊರೆಯಲು ಈ ಪ್ರತಿಭಟನೆಯೂ ಒಂದು ರೀತಿ ಕಾರಣವಾಗಿತ್ತು ಎಂದೇ ಹೇಳಲಾಗಿತ್ತು. ಶಮೀಮಾ ಅವರ ಮನೆಯಲ್ಲಿ ತಂಗಿದ್ದ, ಅವರ ಗಂಡನ ಅಣ್ಣನ ಮಗ, ಅಪ್ರಾಪ್ತ ಬಾಲಕ ತಾನೇ ಕೊಲೆ ಪೊಲೀಸರೆದುರು ಒಪ್ಪಿಕೊಂಡಿದ್ದ. ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆತ ಬಳಿಕ ಬಿಡುಗಡೆಗೊಂಡಿದ್ದ. ಇದೀಗ ಹೇಮಾವತಿಯವರ ಕೊಲೆಯನ್ನು ತಾನೇ ಮಾಡಿರುವುದಾಗಿ ಆಕೆಯ ಅಕ್ಕನ ಮಗನಾಗಿರುವ ಅಪ್ರಾಪ್ತ ಬಾಲಕ ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿದ್ದಾರೆ.