ಉಪ್ಪಿನಂಗಡಿ: ಹಳೇ ಸೇತುವೆಯಲ್ಲಿದ್ದ ಟೆಲಿಕಾಂ ಕೇಬಲ್‌ ಕಳವು

0

ಉಪ್ಪಿನಂಗಡಿ : ಇಲ್ಲಿನ ಕುಮಾರಧಾರಾ ನದಿಗೆ ಆಂಗ್ಲಾಡಳಿತದ ಅವಧಿಯಲ್ಲಿ ನಿರ್ಮಿಸಲಾಗಿದ್ದ ಹಳೇ ಸೇತುವೆಯಲ್ಲಿ ಟೆಲಿಕಾಂ ಸಂಸ್ಥೆಗಳಿಂದ ಅಳವಡಿಸಲಾಗಿದ್ದ ಕೇಬಲ್ ಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.


ಸೇತುವೆಯ ಇಕ್ಕೆಲಗಳಲ್ಲಿ ಕೇಬಲ್ ಅಳವಡಿಸಿದ್ದ ಟೆಲಿಕಾಂ ಸಂಸ್ಥೆಗಳು, ಅದರ ಸುರಕ್ಷತೆಗಾಗಿ ಸಿಮೆಂಟ್ ಕಾಂಕ್ರೀಟ್ ಹಾಕಿದ್ದರು. ಹೀಗೆ ಅಳವಡಿಸಲಾದ ಕೇಬಲ್ ಗಳಲ್ಲಿ ತಾಮ್ರದ ಕೇಬಲ್ ಗಳು ಇರುವುದನ್ನು ಕಂಡುಕೊಂಡ ಕಳ್ಳರು ಸಿಮೆಂಟ್ ಕಾಂಕ್ರೀಟ್ ನ್ನು ಒಡೆದು ಕೇಬಲ್ ಗಳನ್ನು ಕಿತ್ತು ಕತ್ತರಿಸಿ ಕದ್ದೊಯ್ದಿದ್ದಾರೆ.
ಬಿ ಎಸ್ ಎನ್ ಎಲ್ ಸಂಸ್ಥೆಯದ್ದು ಎನ್ನಲಾದ ಈ ಕಾಪರ್ ಕೇಬಲ್ ಪ್ರಸಕ್ತ ಬಳಕೆಯಲ್ಲಿ ಇಲ್ಲವಾಗಿದೆ. ಬದಲಾದ ತಂತ್ರಜ್ಞಾನದಲ್ಲಿ ಪೈಬರ್ ಕೇಬಲ್ ಬಳಕೆಯಲ್ಲಿರುವ ಕಾರಣ ಹಳೇಯ ಕಾಪರ್ ಕೇಬಲ್ ಗಳು ಭೂಮಿಯಲ್ಲಿ ಅಳವಡಿಸಿರುವುದು ಹಾಗೆಯೇ ಉಳಿದಿರುತ್ತದೆ. ಇಂತಹ ಕೇಬಲ್ ಗಳು ಹೆದ್ದಾರಿ ಅಗಲೀಕರಣ ಕಾಮಗಾರಿಯ ವೇಳೆ ತೆರವುಗೊಂಡಿರುತ್ತದೆ. ಹೀಗೆ ತೆರವುಗೊಂಡ ಕೇಬಲ್ ಗಳನ್ನು ಪುನರಪಿ ಸಂಗ್ರಹಿಸುವ ವ್ಯವಸ್ಥೆ ಬಿಎಸ್ ಎನ್ ಎಲ್ ಸಂಸ್ಥೆಯಲ್ಲಿ ಇಲ್ಲದ ಕಾರಣ ಕಂಡವರು ಅದನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಲಭಿಸುವ ಕಾಪರ್ ಕೇಬಲ್ ಗಳ ಲಾಭವನ್ನು ಅರಿತಿರುವ ಮಂದಿ ಉಪ್ಪಿನಂಗಡಿಯ ಕುಮಾರಧಾರಾ ಸೇತುವೆಯಲ್ಲಿ ಅಳವಡಿಸಲಾದ ಕೇಬಲ್ ಗಳನ್ನು ಕಾಂಕ್ರೀಟ್ ಪಟ್ಟಿಯಿಂದ ಹೊರತೆಗೆದು ಕದ್ದೊಯ್ದಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.


ಸರಕಾರಿ ಸೊತ್ತಾಗಿರುವ ಈ ಬೆಲೆಬಾಳುವ ಕಾಪರ್ ಕೇಬಲ್ ಗಳನ್ನು ರಕ್ಷಿಸುವ ಬಗ್ಗೆ ಬಿಎಸ್ ಎನ್ ಎಲ್ ಇಲಾಖೆ ಗಮನ ಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here