ರಾಮಕುಂಜ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ, ಎನ್‌ಎಂಎಂಎಸ್ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ವಿದ್ಯಾರ್ಥಿಗಳು ಉತ್ತಮ ಸಾಧನೆ ಮೂಲಕ ಸಮಾಜದ ಋಣ ಪರಿಹಾರ ಮಾಡಬೇಕು: ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ

ರಾಮಕುಂಜ:2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಮತ್ತು ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೂ.17ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಗ್ರಾಮೀಣ ಪ್ರದೇಶವಾದ ರಾಮಕುಂಜದಲ್ಲಿ ಇಂತಹ ದೊಡ್ಡ ವಿದ್ಯಾ ಸಂಸ್ಥೆಯನ್ನು ಬೆಳೆಸುವಲ್ಲಿ ದೃಢಸಂಕಲ್ಪ, ದೈವಾನುಗ್ರಹದ ಜೊತೆಗೆ ಸಮಾಜದ ಎಲ್ಲರ ಸಹಕಾರದ ಅಗತ್ಯವಿದೆ. ಸಮಾಜದ ಎಲ್ಲಾ ವರ್ಗದ ಜನ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರ ನೀಡುತ್ತಿದ್ದಾರೆ. ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದವರ ಋಣ ವಿದ್ಯಾರ್ಥಿಗಳ ಮೇಲಿದೆ. ಆದ್ದರಿಂದ ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಉತ್ತಮ ಸಾಧನೆ ಮಾಡುವ ಮೂಲಕ ಸಮಾಜದ ಋಣ ಪರಿಹಾರ ಮಾಡಬೇಕೆಂದು ಹೇಳಿದರು.


ಈ ವರ್ಷದ ವಿದ್ಯಾರ್ಥಿಗಳ ಸಾಧನೆಯಿಂದ ತುಂಬಾ ಸಂತೋಷವಾಗಿದೆ. ಶಿಕ್ಷಕರು ಬಯಸಿದಂತೆ ನನ್ನ 60ನೇ ವರ್ಷಕ್ಕೆ ದೊಡ್ಡ ಗುರುಕಾಣಿಕೆ ನೀಡಿದ್ದಾರೆ. 61ನೇ ವರ್ಷಕ್ಕೆ ಇನ್ನಷ್ಟೂ ದೊಡ್ಡ ಗುರುಕಾಣಿಕೆ ಸಿಗಬೇಕೆಂಬ ಬಯಕೆ ನಮ್ಮದು ಎಂದು ಹೇಳಿದ ಸ್ವಾಮೀಜಿ, ವಿದ್ಯಾರ್ಥಿಗಳ ಸಾಧನೆಯ ಹಿಂದೆ ಅಧ್ಯಾಪಕರ, ಆಡಳಿತ ಮಂಡಳಿಯ ಶ್ರಮವಿದೆ. ಇಲ್ಲಿನ ಆಡಳಿತ ಮಂಡಳಿ ಗುರುಗಳು ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಹೊಸ ಸಂಸ್ಥೆಯ ಉದಯಕ್ಕೂ ಕಾರಣರಾಗುತ್ತಿದ್ದಾರೆ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ದ.ಕ.ಜಿಲ್ಲಾ ಸೆಕ್ಷನ್ ಆಫೀಸರ್ ಆಗಿರುವ ನಿತಿನ್ ಶೆಟ್ಟಿ ಅವರು ಮಾತನಾಡಿ, ಪ್ರತಿಭಾ ಪುರಸ್ಕಾರ ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆಯ ಸಮಾರಂಭವಾಗಿದೆ. ವಿದ್ಯಾರ್ಥಿಗಳು ಛಲ, ದೃಢಸಂಕಲ್ಪ, ಆತ್ಮವಿಶ್ವಾಸದಿಂದ ಮುನ್ನಡೆದಲ್ಲಿ ಯಶಸ್ಸು ಸಿಗಲಿದೆ. ದೂರದೃಷ್ಟಿ, ಮಾನವೀಯ ಮೌಲ್ಯ ಬೆಳೆಸಿಕೊಂಡಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯವಿದೆ. ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಬೇಕು ಎಂದು ಹೇಳಿದ ಅವರು, ಮುಂದಿನ ವರ್ಷ ರಾಜ್ಯದ ಟಾಪ್ 10 ರ‍್ಯಾಂಕ್‌ಗಳ ಪಟ್ಟಿಯಲ್ಲಿ ರಾಮಕುಂಜದ ವಿದ್ಯಾರ್ಥಿಗಳೂ ಇರಬೇಕೆಂದು ಹೇಳಿದರು.


ಇನ್ನೋರ್ವ ಅತಿಥಿ ಕೆಪಿಟಿಸಿಎಲ್‌ನ ನಿವೃತ್ತ ಹಿರಿಯ ಕಾರ್ಯನಿರ್ವಾಹಕ ಇಂಜಿನಿಯರ್ ರಘು ಎಸ್.ವಿ.ಅವರು ಮಾತನಾಡಿ, ರಾಮಕುಂಜದ ವಿದ್ಯಾಸಂಸ್ಥೆಯೊಂದಿಗೆ ನನಗೆ ಹಲವು ವರ್ಷಗಳ ಒಡನಾಟವಿದೆ. ಇಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಇದೆ. ವಿದ್ಯಾರ್ಥಿಗಳು ಅನ್ಯ ಮಾರ್ಗವನ್ನು ಪ್ರವೇಶಿಸುವ ಪ್ರಮೇಯವೂ ಇಲ್ಲ. ಇಲ್ಲಿನ ಶಿಕ್ಷಕವೃಂದ, ಆಡಳಿತ ಮಂಡಳಿಯೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತಿದೆ ಎಂದು ಹೇಳಿದ ಅವರು, ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ ಉಂಟು ಮಾಡುತ್ತದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಅವರು, 2023-24ನೇ ಸಾಲಿನಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಸಂಸ್ಥೆ ಉತ್ತಮ ಫಲಿತಾಂಶ ಪಡೆಯುವಲ್ಲಿ ಪ್ರಾಂಶುಪಾಲರ, ಉಪನ್ಯಾಸಕರ, ಮುಖ್ಯಶಿಕ್ಷಕರ, ಶಿಕ್ಷಕರ ಶ್ರಮವಿದೆ. ಈ ಫಲಿತಾಂಶ ಈ ವರ್ಷದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕೆಂಬ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದೇವೆ. ವರ್ಷದಿಂದ ವರ್ಷಕ್ಕೆ ಶಿಕ್ಷಣ ಸಂಸ್ಥೆಯ ಫಲಿತಾಂಶದಲ್ಲಿ ಹೆಚ್ಚಳ ಆಗಬೇಕು. ಇದಕ್ಕೆ ಮಕ್ಕಳ ಶ್ರಮ, ಪೋಷಕರು ಸಹಕಾರ ನೀಡಬೇಕು ಎಂದು ಹೇಳಿದ ಅವರು, ಗ್ರಾಮೀಣ ಪ್ರದೇಶದ ಈ ವಿದ್ಯಾಸಂಸ್ಥೆಯ ಇನ್ನಷ್ಟೂ ಬೆಳವಣಿಗೆಗೆ ಎಲ್ಲರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಎಂದರು.

ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡ 15 ವಿದ್ಯಾರ್ಥಿಗಳಿಗೆ ಸ್ವಾಮೀಜಿಯವರು ಶಾಲು ಹಾಕಿ, ಮಂತ್ರಾಕ್ಷತೆ ನೀಡಿ ಗೌರವಿಸಿದರು. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಹಾಗೂ ೪೦೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವಾಮೀಜಿಯವರು ಶಾಲು ಹಾಕಿ, ಪ್ರಮಾಣಪತ್ರ ನೀಡಿ, ಮಂತ್ರಾಕ್ಷತೆ ನೀಡಿ ಗೌರವಿಸಿದರು. ಕಲಿಕೆಯಲ್ಲಿ ಹಿಂದುಳಿದು ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ತೋರಿದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಕೃತದಲ್ಲಿ 125 ಪೂರ್ಣ ಅಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ದ್ವಿತೀಯ ಪಿಯುಸಿ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ 94 ವಿದ್ಯಾರ್ಥಿಗಳಿಗೆ ಸ್ವಾಮೀಜಿಯವರು ಶಾಲು ಹಾಕಿ, ಪ್ರಮಾಣಪತ್ರ, ಮಂತ್ರಾಕ್ಷತೆ ನೀಡಿ ಹರಸಿದರು. ಪ್ರಾಂಶುಪಾಲ ಚಂದ್ರಶೇಖರ ಕೆ., ಶಿಕ್ಷಕರಾದ ವೆಂಕಟೇಶ್ ದಾಮ್ಲೆ, ಪ್ರವೀಣ್‌ಕುಮಾರ್ ಅವರು ಕಾರ್ಯಕ್ರಮ ನಿರ್ವಹಿಸಿದರು.


ಪುಸ್ತಕ ವಿತರಣೆ:
ಕೃಷಿಕ ಉದಯಕಶ್ಯಪ್ ಅವರು ಆರ್ಥಿಕವಾಗಿ ಹಿಂದುಳಿದ ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ಸುಮಾರು 35,600 ರೂ.ವೆಚ್ಚದಲ್ಲಿ ನೀಡಿರುವ ಪುಸ್ತಕಗಳನ್ನು ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಶಿಕ್ಷಕ ದಿನೇಶ್ ಬಿ. ಅವರು ಉದಯ ಕಶ್ಯಪ್ ಅವರನ್ನು ಸಭೆಗೆ ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು.


ಶಿಕ್ಷಕರಿಗೆ ಗೌರವಾರ್ಪಣೆ:
ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸಿ ತೆರಳಿದ ಉಪನ್ಯಾಸಕಿ ಮಲ್ಲಿಕಾ, ಕಳೆದ ಸಾಲಿನಲ್ಲಿ ಪಿಯುಸಿಯಲ್ಲಿ ಶೇ.100 ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 149 ವಿದ್ಯಾರ್ಥಿಗಳ ಪೈಕಿ 148 ವಿದ್ಯಾರ್ಥಿಗಗಳು ತೇರ್ಗಡೆಗೊಳಿಸುವಲ್ಲಿ ಶ್ರಮಿಸಿದ ಉಪನ್ಯಾಸಕರ ಪರವಾಗಿ ಪ್ರಾಂಶುಪಾಲ ಚಂದ್ರಶೇಖರ, ಶಿಕ್ಷಕರ ಪರವಾಗಿ ಮುಖ್ಯಶಿಕ್ಷಕ ಸತೀಶ್ ಭಟ್ ಹಾಗೂ ಎನ್‌ಎಂಎಂಎಸ್ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶಿಕ್ಷಕರನ್ನು ಆಡಳಿತ ಮಂಡಳಿ ಪರವಾಗಿ ಸ್ವಾಮೀಜಿಯವರು ಸನ್ಮಾನಿಸಿ ಗೌರವಿಸಿದರು.


ವಿದ್ಯಾರ್ಥಿ ವೇತನ:
ಬಂಟ್ವಾಳ ಕಸ್ತೂರಿಬಾಯಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರು ನೀಡುವ ವಿದ್ಯಾರ್ಥಿ ವೇತನವನ್ನು ಅತಿಥಿ ಎಸ್.ಜಿ.ರಘು ಅವರು ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಯಿತು. ಶಿಕ್ಷಕಿ ನಿಶ್ಮಿತಾ ಎಸ್.ಜಿ.,ಅವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು.
ಅತಿಥಿಗಳಿಗೆ ಸಂಸ್ಥೆಯ ಪರವಾಗಿ ಗೌರವಾರ್ಪಣೆ ಮಾಡಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಸದಸ್ಯರಾದ ಲಕ್ಷ್ಮೀನಾರಾಯಣ ರಾವ್ ಆತೂರು, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಶೇಖರ್, ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ವತಿಯಿಂದ ಸ್ವಾಮೀಜಿಯವರಿಗೆ ಫಲ ತಾಂಬೂಲ ನೀಡಿ ಗೌರವಾರ್ಪಣೆ ಮಾಡಲಾಯಿತು. ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಅವರು ಸ್ವಾಗತಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಕಾರಂತ್ ವಂದಿಸಿದರು. ಜಯಶ್ರೀ ಕೆ. ನಿರೂಪಿಸಿದರು. ಹರ್ಷಿತಾ ಮತ್ತು ಬಗಳದವರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here