ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನುಬಾಹಿರ: ಸಂಗೀತಾ ಎಸ್. ಎಂ.
ಪುತ್ತೂರು: ಬಾಲ್ಯದಲ್ಲಿ ಆಟವಾಡುತ್ತ, ತನ್ನ ಜೊತೆಗಾರರೊಂದಿಗೆ ಶಾಲೆಗೆ ಹೋಗಿ ಕಲಿಯಬೇಕಾದ ಮಕ್ಕಳು ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅರ್ಹತೆಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನುಬಾಹಿರ. ಆದರೂ ಕಾನೂನಿನ ಕಣ್ಣು ತಪ್ಪಿಸಿ ಚಿಕ್ಕ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಂಗೀತಾ ಎಸ್.ಎಂ. ಹೇಳಿದರು.
ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಶಿಕ್ಷಣವನ್ನು ಆರಂಭ ಮಾಡಬೇಕಾದ ಮಕ್ಕಳು ಗಾರ್ಮೆಂಟ್ಸ್‌ಗಳಲ್ಲಿ, ಕಟ್ಟಡಗಳ ಕೆಲಸಗಳಲ್ಲಿ, ಅಂಗಡಿಗಳಲ್ಲಿ, ಗ್ಯಾರೇಜ್, ಹೊಟೇಲ್, ಕಾರ್ಖಾನೆಗಳಲ್ಲಿ, ಬೇಕರಿ, ದೊಡ್ಡ ದೊಡ್ಡ ಮನೆಗಳಲ್ಲಿ ಕೆಲಸದಾಳುಗಳಾಗಿ ಇನ್ನಿತರ ಸ್ಥಳಗಳಲ್ಲಿ ದೈಹಿಕವಾಗಿಯೂ ಹಾಗೂ ಮಾನಸಿಕವಾಗಿಯೂ ಕಷ್ಟವಾಗುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಇದೆಲ್ಲದನ್ನು ತಡೆಯುವ ಉದ್ದೇಶದಿಂದ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಜೊತೆಗೆ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂ.12ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಾಲ ಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತದೆ ಎಂದರು. ಕಾನೂನು ವಿದ್ಯಾರ್ಥಿಗಳಾಗಿ ನೀವು ಈ ವಿಷಯದಲ್ಲಿ ಜಾಗರೂಕರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕ ಲಕ್ಷ್ಮೀಕಾಂತ ಎ. ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಾನೂನು ಸಹಾಯಕ ಪ್ರಾಧ್ಯಾಪಕಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕಿ ಶ್ರೀರಕ್ಷಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಶ್ವಿತಾ ಸ್ವಾಗತಿಸಿ, ವಿದ್ಯಾರ್ಥಿ ಲಿಖಿತ್ ಪ್ರಸಾದ್ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ದೀಪಿಕಾ ಪಿ. ಎಸ್. ನಿರೂಪಿಸಿದರು.