ವರದಿ: ದೀಪಕ್ ಉಬಾರ್
ಉಪ್ಪಿನಂಗಡಿ: ಪೂರ್ವದಿಂದ ಹಸಿರ ಸಿರಿಯ ಪಶ್ಚಿಮ ಘಟ್ಟದ ಮೂಲಕ ಹರಿದು ಬರುವ ನೇತ್ರಾವತಿ ಹಾಗೂ ದಕ್ಷಿಣದಿಂದ ವನಸಿರಿಯ ಮಧ್ಯೆ ಹರಿದು ಬರುವ ಕುಮಾರಧಾರ ನದಿಗಳು ಪರಸ್ಪರ ಸಂಗಮವಾಗುವುದರೊಂದಿಗೆ ಉಪ್ಪಿನಂಗಡಿಯನ್ನು ಪುಣ್ಯಕ್ಷೇತ್ರವನ್ನಾಗಿಸಿದೆ. ಆದರೆ ಅದೇ ಉಪ್ಪಿನಂಗಡಿಯಲ್ಲಿ ಜೀವವಾಹಿನಿಯಾಗಿರುವ ಈ ನದಿಗಳ ಒಡಲಿಗೆ ಶೌಚ, ಮಲಿನ ನೀರನ್ನು ಬಿಡುವ ಮೂಲಕ, ತ್ಯಾಜ್ಯವನ್ನು ಎಸೆಯುವ ಮೂಲಕ ಜೀವಜಲವನ್ನು ಮಲಿನಗೊಳಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಾರಿಯೂ ಬೇಸಿಗೆಯಲ್ಲಿ ನದಿಯ ಒಡಲಲ್ಲಿ ಶೇಖರಣೆಯಾಗಿರುವ ಮಲಿನ ನೀರು, ತ್ಯಾಜ್ಯಗಳು ಮಳೆಗಾಲದಲ್ಲಿ ನದಿ ನೀರಿನೊಂದಿಗೆ ಬೆರೆತು ಮುಂದೆ ಸಾಗಲು ಕಾದು ಕುಳಿತಿದೆ.
ನದಿ ಒಡಲೇ ತ್ಯಾಜ್ಯ ಗುಂಡಿ:
ಮನೆಯಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಂದು ಕೆಲವರು ತಂದು ಎಸೆಯುವುದು ನೇರ ನದಿಯ ಒಡಲಿಗೆ. ಈ ರೀತಿ ತ್ಯಾಜ್ಯವನ್ನು ಎಸೆಯುವ ಕೆಲಸ ಕೂಟೇಲು ಬಳಿ ಹಾಗೂ ಕುಮಾರಧಾರ ನದಿಯ ಸೇತುವೆ, ನೇತ್ರಾವತಿ ನದಿಯ ಸೇತುವೆಯ ಬಳಿ ನಿರಂತರ ನಡೆಯುತ್ತಿವೆ. ಯಾರೂ ತಮ್ಮನ್ನು ಗಮನಿಸುತ್ತಿಲ್ಲ ಎಂದು ಗೊತ್ತಾದ ಕೂಡಲೇ ತ್ಯಾಜ್ಯವನ್ನು ನದಿಯ ಒಡಲಿಗೆ ಎಸೆದು ಅಲ್ಲಿಂದ ಪಲಾಯನ ಮಾಡುವ ಅದೆಷ್ಟೋ ಬುದ್ಧಿವಂತರೆನಿಸಿಕೊಂಡ ಜನರು ಇಲ್ಲಿದ್ದಾರೆ. ಇನ್ನು ಇಲ್ಲಿನ ಹೆಚ್ಚಿನ ಹೋಟೇಲ್, ವಸತಿ ಸಂಕೀರ್ಣ, ವಾಣಿಜ್ಯ ಮಳಿಗೆಗಳಿಗೆ ಇಂಗು ಗುಂಡಿಗಳೇ ಇಲ್ಲ. ವಸತಿ ಸಮುಚ್ಛಯ, ವಾಣಿಜ್ಯ ಸಂಕೀರ್ಣ, ಹೊಟೇಲ್, ರೆಸ್ಟೋರೆಂಟ್ ಹೀಗೆ ಎಲ್ಲದಕ್ಕೂ ಇಂಗುಗುಂಡಿ ಇದ್ದರೆ ಮಾತ್ರ ಪರವಾನಿಗೆ ನೀಡಬೇಕೆಂಬ ನಿಯಮವಿದ್ದರೂ, ಇಲ್ಲಿನ ಪಂಚಾಯತ್ ಆಡಳಿತಗಳು ಮಾತ್ರ ಈ ನಿಯಮವನ್ನು ಗಾಳಿಗೆ ತೂರಿವೆ. ಇಂಗು ಗುಂಡಿ ಇಲ್ಲವೆಂದು ಕೆಲವು ಬಡಪಾಯಿ ಮನೆಯವರ ಕುಡಿಯುವ ನೀರಿನ ಸಂಪರ್ಕವನ್ನೇ ಕಡಿತಗೊಳಿಸುವ ಕಠಿಣ ನಿಲುವು ತೋರಿದ್ದ ಉಪ್ಪಿನಂಗಡಿ ಗ್ರಾ.ಪಂ. ತನ್ನ ತ್ಯಾಜ್ಯ ಘಟಕದ ಜಾಗದಿಂದಲೇ ಮಲಿನ ನೀರು ಹರಿದು ನೇತ್ರಾವತಿ ನದಿಯ ನೀರನ್ನು ಸೇರುತ್ತಿದ್ದರೂ ಈ ಬಗ್ಗೆ ಮೌನವಾಗಿದೆ. ಇಂಗು ಗುಂಡಿಯ ವಿಚಾರದಲ್ಲಿ ಇಲ್ಲಿ ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎಂಬಂತಿದೆ. ಗ್ರಾ.ಪಂ. ತ್ಯಾಜ್ಯ ಘಟಕದ ಬಳಿಯಿಂದಲೇ ಹರಿಯುವ ಮಲಿನ ನೀರಿಗೆ ಕೆಲವು ಕಡೆಗಳಲ್ಲಿ ಶೌಚ ನೀರು ಸೇರಿಕೊಳ್ಳುತ್ತಿದ್ದು, ಈ ನೀರು ಈಗ ನೇತ್ರಾವತಿಯ ನದಿಯ ಒಡಲಲ್ಲಿ ದೊಡ್ಡ ಕೆರೆಯಂತಹ ಜಾಗದಲ್ಲಿ ತುಂಬಿಕೊಂಡು, ದುರ್ನಾತ ಬೀರುತ್ತಿದೆ. ಮಳೆ ಬಂದು ನದಿಯಲ್ಲಿ ನೀರು ಹೆಚ್ಚಾದಾಗ ಇದು ನದಿ ನೀರನ್ನು ಸೇರಿಕೊಂಡು ಪಶ್ಚಿಮದತ್ತ ಹರಿಯಲು ಕಾದು ಕುಳಿತಿದೆ.
ನದಿ ತೀರ ಆಶ್ರಯಿಸುವ ಅಲೆಮಾರಿಗಳು:
ಮೀನು ಹಿಡಿಯುವವರು ಸೇರಿದಂತೆ ಅಲೆಮಾರಿ ಜನಾಂಗವು ಹೆಚ್ಚಾಗಿ ಇಲ್ಲಿನ ನೇತ್ರಾವತಿ, ಕುಮಾರಧಾರ ನದಿ ತೀರದಲ್ಲೇ ಬೇಸಿಗೆಯ ಮೂರ‍್ನಾಲ್ಕು ತಿಂಗಳು ಆಶ್ರಯ ಪಡೆಯುತ್ತಿವೆ. ಬಟ್ಟೆ ಒಗೆಯುವುದು, ಸ್ನಾನ ಮಾಡುವುದು ಸೇರಿದಂತೆ ತಮ್ಮೆಲ್ಲಾ ನಿತ್ಯ ಕರ್ಮಗಳಿಗಾಗಿ ಅವರು ಆಶ್ರಯಿಸುವುದು ಇದೇ ನದಿಯನ್ನು. ಹಳೆಗೇಟು ಬಳಿಯ ನೇತ್ರಾವತಿ ನದಿ ತೀರದಲ್ಲಿ ಅಲೆಮಾರಿಗಳು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕೆಲಸದವರು ಈಗಲೂ ಬಿಡಾರ ಹಾಕಿ ವಾಸ್ತವ್ಯವಿದ್ದು, ನದಿ ನೀರಿನ ಮಲಿನಕ್ಕೆ ಇವರೂ ತಮ್ಮ ಕೊಡುಗೆ ನೀಡುತ್ತಿದ್ದಾರೆ.
ಅಲ್ಲಲ್ಲಿ ತ್ಯಾಜ್ಯ ರಾಶಿ:
ಇಲ್ಲಿನ ನೇತ್ರಾವತಿ ನದಿಯ ಸಮೀಪವಿರುವ ಸಮುದಾಯ ಆರೋಗ್ಯ ಕೇಂದ್ರದ ಆವರಣದ ಹೊರಗೆ ಪ್ಲಾಸ್ಟಿಕ್, ತ್ಯಾಜ್ಯಗಳ ರಾಶಿಯೇ ಇದ್ದು, ಸಾಂಕ್ರಾಮಿಕ ರೋಗ ಉತ್ಪಾದನೆಗೆ ಅವಕಾಶ ನೀಡುತ್ತಿದೆ. ಆದರೂ ಇದನ್ನು ತೆಗೆಸುವ ಗೋಜಿಗೆ ಉಪ್ಪಿನಂಗಡಿ ಗ್ರಾ.ಪಂ. ಮುಂದಾಗಿಲ್ಲ. ಇನ್ನು ಗ್ರಾ.ಪಂ.ನ ತ್ಯಾಜ್ಯ ಘಟಕದ ಬಳಿ ನದಿ ದಂಡೆಯ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದ್ದು, ನದಿಯು ಮೈದುಂಬಿ ಹರಿದಾಗ ಇವುಗಳು ನದಿ ನೀರನ್ನು ಸೇರಿಕೊಳ್ಳುವ ಸಂಭವವಿದೆ.
ಪಾವಿತ್ರ್ಯತೆಯಲ್ಲಿ ದಕ್ಷಿಣದ ಗಂಗೆಯೆಂದೆನಿಸಿಕೊಂಡ ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯು ಮಲಿನತೆಯಲ್ಲಿಯೂ ಉತ್ತರದ ಗಂಗೆಗೆ ಸರಿಸಮಾನವಾಗುವತ್ತ ಹೊರಟಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಜೀವಜಲವನ್ನು ಕಾಪಾಡುವ ಕೆಲಸ ಪ್ರಜ್ಞಾವಂತರೆನಿಸಿಕೊಂಡ ನಾಗರಿಕರು ಹಾಗೂ ನಮ್ಮ ಆಡಳಿತ ವ್ಯವಸ್ಥೆಯಿಂದಾಗಬೇಕಿದೆ.
ಮಂಗಳೂರಿಗರೇ ಎಚ್ಚೆತ್ತುಕೊಳ್ಳಿ!
ಸಾವಿರಾರು ಎಕರೆ ಭೂ ಪ್ರದೇಶಕ್ಕೆ, ಜೀವ ಸಂಕುಲಗಳಿಗೆ ನೀರುಣಿಸುತ್ತಿರುವ ನೇತ್ರಾವತಿ ಕುಮಾರಧಾರ ನದಿಗಳ ನೀರನ್ನು ದ.ಕ. ಜಿಲ್ಲಾ ಕೇಂದ್ರವಾದ ಮಂಗಳೂರು ನಗರಕ್ಕೆ ಕುಡಿಯಲು ಸರಬರಾಜು ಮಾಡಲಾಗುತ್ತದೆ. ಆದರೆ ಈ ನೀರು ಮಂಗಳೂರಿಗೆ ತಲುಪುವ ಮುನ್ನ ಅದು ಎಷ್ಟು ಮಲಿನಗೊಳ್ಳುತ್ತಿದೆ ಎಂಬುದನ್ನು ಒಮ್ಮೆ ಮಂಗಳೂರಿನ ಜನತೆ ಉಪ್ಪಿನಂಗಡಿಗೆ ಬಂದರೆ ತಿಳಿಯಬಹುದು. ನದಿ ಮಲಿನವಾಗುತ್ತಿರುವ ಕುರಿತು ಪತ್ರಿಕೆಯು ಹಲವು ಬಾರಿ ಎಚ್ಚರಿಸುವ ಕೆಲಸ ಮಾಡಿದೆ. ಆದರೆ ನದಿ ಮಲಿನ ಮಾಡುವ ಕೆಲಸ ಮಾತ್ರ ಉಪ್ಪಿನಂಗಡಿಯಲ್ಲಿ ರಾಜಾರೋಷವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಸ್ಥಳೀಯಾಡಳಿತ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣಿದ್ದೂ ಕುರುಡಾಗಿರುವಂತಿದೆ. ನದಿ, ಪರಿಸರ ಉಳಿಸುವ ಘೋಷಣೆಯೊಂದಿಗೆ ಹಲವಾರು ಸಂಘಟನೆಗಳು ರೂಪು ತಾಳಿದ್ದರೂ, ಇಲ್ಲಿ ಜಲ ಮಾಲಿನ್ಯವಾಗುತ್ತಿರುವ ಬಗ್ಗೆ ಯಾರೂ ಧ್ವನಿಯೆತ್ತುತ್ತಿಲ್ಲ. ಈ ನೀರನ್ನು ದಿನಂಪ್ರತಿ ಕುಡಿಯುವ ಮಂಗಳೂರಿನ ಜನತೆಯಾದರೂ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನಿಮ್ಮ ಉತ್ತಮ ಆರೋಗ್ಯಕ್ಕಾಗಿಯಾದರೂ ನದಿ ಮಲಿನತೆಯ ವಿರುದ್ಧ ಬೃಹತ್ ಜನಾಂದೋಲನ ರೂಪಿಸುವ ಕಾರ್ಯವಾಗಬೇಕಾದ ಅಗತ್ಯವಿದೆ.
ನದಿಗೆ ಮಲಿನ ನೀರು ಬಿಡುವ ಹೋಟೇಲ್, ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣಗಳ ಮಾಲಕರ ಸಭೆ ಕರೆದು ಈಗಾಗಲೇ ಚರ್ಚಿಸಲಾಗಿದ್ದು, ನದಿಗೆ ಮಲಿನ ನೀರು ಹರಿಸುವುದನ್ನು ತಡೆಗಟ್ಟಲು ಎಸ್‌ಡಿಪಿ ನಿರ್ಮಿಸುವ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಮಳೆಗಾಲ ಮುಗಿದ ಕೂಡಲೇ ಇದರ ಕಾಮಗಾರಿ ನಡೆಸಲಾಗುವುದು. ಸಾರ್ವಜನಿಕ ಸ್ಥಳದಲ್ಲಿ, ನದಿಗೆ ತ್ಯಾಜ್ಯ ಹಾಕುವವರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ. ಆದರೂ ಕೆಲವರು ಕಣ್ತಪ್ಪಿಸಿ ಇಂತಹ ಕೃತ್ಯ ಮಾಡುತ್ತಲೇ ಇದ್ದಾರೆ. ಕೂಟೇಲು ಕಡೆಯೆಲ್ಲಾ ಸಾರ್ವಜನಿಕ ಸ್ಥಳದಲ್ಲಿ ರಾಶಿ ಬಿದ್ದಿರುವ ಕಸವನ್ನು ತೆಗೆಸಲಾಗಿದೆ.
ವಿದ್ಯಾಲಕ್ಷ್ಮೀ ಪ್ರಭು
ಉಪಾಧ್ಯಕ್ಷರು, ಉಪ್ಪಿನಂಗಡಿ ಗ್ರಾ.ಪಂ.