ಪುತ್ತೂರು: ಪುತ್ತೂರು ಮುಖ್ಯರಸ್ತೆ ಬೋನಂತಾಯ ಆಸ್ಪತ್ರೆ ಕಟ್ಟಡ ಮತ್ತು ಸೇತುವೆಯ ನಡುವೆ ಇರುವ ಸುಮಾರು 40 ವರ್ಷ ಇತಿಹಾಸ ಇರುವ ನ್ಯೂ ಗಣೇಶ್‌ಪ್ರಸಾದ್ ಹೊಟೇಲ್ ಜೂ.28ರ ಬಳಿಕ ಖಾಯಂ ಸ್ಥಗಿತಗೊಳ್ಳಲಿದೆ.
1954ರ ಫೆಬ್ರುವರಿ 12ರಂದು ದಿ.ರಾಮ ಭಟ್ ಅವರು ಉದ್ಘಾಟಿಸಿದ ಈ ಹೋಟೆಲ್ ಇದುವರೆಗೆ ಪುತ್ತೂರಿಗರಷ್ಟೇ ಅಲ್ಲ ಹೊರ ಊರಿನಿಂದ ಬಂದವರ ಹಸಿವನ್ನು ತಣಿಸಿದ್ದು ಮಾತ್ರವಲ್ಲ, ತನ್ನ ಸ್ವಾದಕ್ಕೆ ಮಾರು ಹೋಗುವಂತೆ ಮಾಡಿತು.
ಶ್ರೀ ಗಣೇಶ್ ಪ್ರಸಾದ್ ಹೊಟೇಲ್ ಮೊದಲ ಬಾರಿಗೆ ಪುತ್ತೂರಿನಲ್ಲಿ ಪರಿಚಯಿಸಿದ ಕೀರ್ತಿ ನರಸಿಂಹ ಹೇರಳೆ ಅವರಿಗೆ ಸಲ್ಲುತ್ತದೆ. ಸಂಗೀತ ವಿದ್ವಾನ್ ಆಗಿದ್ದ ನರಸಿಂಹ ಹೇರಳೆ ಅವರು, ಹೋಟೆಲ್ ಉದ್ಯಮವನ್ನು ಅರಗಿಸಿಕೊಂಡದ್ದು ಮದ್ರಾಸಿನಲ್ಲಿ. ಬಳಿಕ ಕಾಂಞಿಗಾಡ್, ಕಣ್ಣನೂರಿನಲ್ಲಿ ಹೋಟೆಲ್ ಉದ್ಯಮ ನಡೆಸಿದರು.
1979ರಲ್ಲಿ ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳದ ಕೆರೆ ಪಕ್ಕದಲ್ಲಿದ್ದ ದೇವಸ್ಥಾನದ ಕಟ್ಟಡದಲ್ಲಿ ಗಣೇಶ್ ಪ್ರಸಾದ್ ಹೋಟೆಲ್ ಪರಿಚಯಿಸಲ್ಪಟ್ಟಿತು. 1984ರ ಫೆಬ್ರುವರಿ 12ರಂದು ಅಲ್ಲೇ ಎದುರಿನ ಕಟ್ಟಡದಲ್ಲಿ ನ್ಯೂ ಗಣೇಶ್ ಪ್ರಸಾದ್ ಎಂಬ ಹೆಸರಿನಲ್ಲಿ ಹೋಟೆಲ್ ಉದ್ಯಮದ ಇನ್ನೊಂದು ಶಾಖೆಯನ್ನು ತೆರೆದರು. ತಂದೆಯ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿದ ಗೋಪಾಲಕೃಷ್ಣ ಹೇರಳೆಯವರು 1989ರಲ್ಲಿ ಜಿ.ಎಲ್. ಕಾಂಪ್ಲೆಕ್ಸ್ ನಲ್ಲಿ ಶ್ರೀ ಗಣೇಶ್ ಪ್ರಸಾದ್ ಹೋಟೆಲ್ ಅನ್ನು ಅದ್ದೂರಿಯಾಗಿ ಆರಂಭಿಸಿದರು.
ಇದೀಗ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ತೆರೆ ಮರೆಗೆ ಸರಿಯುತ್ತಿದೆ. ಕಾರಣ ಪಕ್ಕದ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ನ್ಯೂ ಗಣೇಶ್ ಪ್ರಸಾದ್ ಕಟ್ಟಡವೂ ನೆಲಸಮಗೊಳ್ಳುತ್ತಿದೆ.
ಖಾಯಂ ಮುಚ್ಚಲಿದ್ದೇವೆ:
ಮುಖ್ಯರಸ್ತೆ ಸೇತುವೆ ಬಳಿಯ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ಅನ್ನು ಖಾಯಂ ಮುಚ್ಚುತ್ತಿದ್ದೇವೆ. ಕಟ್ಟಡ ನೆಲಸಮ ಆಗುತ್ತಿರುವುದೇ ಇದಕ್ಕೆ ಕಾರಣ. ಸ್ಥಳಾಂತರದ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಸುಮಾರು 40 ವರ್ಷದ ಹಿಂದೆ ಆರಂಭಗೊಂಡ ಹೊಟೇಲ್. ಆಗ ನಮಗೆ ನಾಯಕರು ಎನಿಸಿಕೊಂಡ ಉರಿಮಜಲು ರಾಮ ಭಟ್ ಅವರು ಹೊಟೇಲ್‌ನ್ನು ಬೆಳಿಗ್ಗೆ ಉದ್ಘಾಟಿಸಿದರು. ಇದೀಗ ಅದನ್ನು ಮುಚ್ಚುತ್ತಿದ್ದೇವೆ.
ಗೋಪಾಲಕೃಷ್ಣ ಹೇರಳೆ, ಮಾಲಕರು