*ಶಾಲೆಯ ಅಭಿವೃದ್ಧಿಯಲ್ಲಿ ಸರ್ವರ ಸಹಕಾರ ಗಣನೀಯವಾದದ್ದು: ಪ್ರಹ್ಲಾದ ಶೆಟ್ಟಿ ಜೆ.
*ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಲೋಕಸೇವಾ ಕಾರ್ಯಕ್ರಮಗಳು ಸಮಾಜದ ಉನ್ನತಿಯ ಗುರಿಯನ್ನು ಹೊಂದಿರುತ್ತದೆ: ರವೀಂದ್ರ ದರ್ಬೆ
*ಬಾಲವಿಕಾಸ ಶಾಲೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ಧಾರೆಯೆರೆಯುತ್ತದೆ: ಪ್ರಸನ್ನ ಎನ್ ಭಟ್
ವಿಟ್ಲ: ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳ ವತಿಯಿಂದ “ಪ್ರೇಮತರು-ಗೋ ಗ್ರೀನ್” ಎಂಬ ಹೆಸರಿನಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜೆ ದೀಪ ಬೆಳಗಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಯಲ್ಲಿ ಸರ್ವರ ಸಹಕಾರ ಗಣನೀಯವಾದದ್ದು. ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಭಕ್ತರು ವನಮಹೋತ್ಸವದ ಮೂಲಕ ಬಾಲವಿಕಾಸ ಪರಿಸರದಲ್ಲಿ ಗಿಡನೆಟ್ಟು ಅರ್ಥಪೂರ್ಣವಾದ ಸೇವೆಯನ್ನು ನೀಡಿದ್ದಾರೆ. ತಮ್ಮ ಈ ಮಹತ್ಕಾರ್ಯಕ್ಕೆ ನಾವು ಚಿರಋಣಿ. ಇದಕ್ಕೆ ಪ್ರತಿಯಾಗಿ ಗಿಡಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಬಾಲವಿಕಾಸ ಸಂಸ್ಥೆ ಮಾಡುತ್ತದೆ ಎಂದರು.
ಸಂಸ್ಥೆಯ ಪ್ರಾಂಶುಪಾಲರಾದ ರವೀಂದ್ರ ದರ್ಬೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕೈಗೊಳ್ಳುವ ಲೋಕಸೇವಾ ಕಾರ್ಯಕ್ರಮಗಳು ಸಮಾಜದ ಉನ್ನತಿಯ ಗುರಿಯನ್ನು ಹೊಂದಿರುತ್ತದೆ. ತಮ್ಮ ಸೇವೆಯನ್ನು ಭಗವಂತನ ಸೇವೆಯೆಂದು ಭಾವಿಸುವ ಚಿಂತನೆ ಅಭಿನಂದನಾರ್ಹ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ರವರು ಮಾತಮಾಡಿ ಬಾಲವಿಕಾಸ ಶಾಲೆ ಮಕ್ಕಳಿಗೆ ಶಿಕ್ಷಣವನ್ನು ಮಾತ್ರವಲ್ಲದೆ ಸಂಸ್ಕೃತಿಯನ್ನು ಕೂಡ ಧಾರೆಯೆರೆಯುತ್ತದೆ. ಇಂತಹ ಶಾಲೆಯಲ್ಲಿ ಕಲಿಯುವ ಮಕ್ಕಳು ಭಾಗ್ಯವಂತರು.ಇಂತಹ ಪುಣ್ಯಭೂಮಿಯಲ್ಲಿ ಸೇವೆ ಕೊಡಲು ಅವಕಾಶ ದೊರಕಿದ್ದು ನಮ್ಮ ಭಾಗ್ಯ.ನಾವು ಮಾಡುವ ಸೇವಾಕಾರ್ಯಗಳ ಮೂಲಕ ಭಗವಂತನ ಇರುವಿಕೆಯನ್ನು ಕಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಸತ್ಯಸಾಯಿ ಲೋಕಸೇವಾ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಶ್ರೀ ಸತ್ಯ ಸಾಯಿಬಾಬರ ಭಾವಚಿತ್ರಕ್ಕೆ ಆರತಿಗೈದು,ಶಾಲೆಯ ಆವರಣದಲ್ಲಿ 380 ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಸಂಸ್ಥೆಯ ಸಹ ಶಿಕ್ಷಕಿ ಅನಿತಾ ಗೌರಿ ಕಾರ್ಯಕ್ರಮ ನಿರೂಪಿಸಿದರು.