ನಿಡ್ಪಳ್ಳಿ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿ ಸಭೆ- ಅಪಾಯಕಾರಿ ಸ್ಥಳ ಭೇಟಿ ನೀಡಿ ಮುಂಜಾಗ್ರತೆ ವಹಿಸಲು ನಿರ್ಧಾರ

0

ನಿಡ್ಪಳ್ಳಿ: ಪ್ರಸ್ತುತ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗುವ ಹಾನಿಗಳನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಮತ್ತು ಅದರ ನಿರ್ವಹಣೆ ಮಾಡಲು ರಚಿಸಲಾದ ವಿಪತ್ತು ನಿರ್ವಹಣಾ ಸಮಿತಿಯ ವಿಶೇಷ ಸಭೆ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಭಾವನದಲ್ಲಿ ಜೂ.29ರಂದು ನಡೆಯಿತು.

ಸಮಿತಿಯ ನೊಡೆಲ್ ಅಧಿಕಾರಿ ಡಾ.ಅಮಿತ್ ಕುಮಾರ್ ಮಾತನಾಡಿ ವಿಪರೀತ ಮಳೆಯಿಂದ ಗ್ರಾಮದಲ್ಲಿ ಹಾನಿ ಸಂಭವಿಸುವ ಲಕ್ಷಣ ಇದ್ದಲ್ಲಿ ಆ ಬಗ್ಗೆ ಪಂಚಾಯತ್ ಗೆ ತಿಳಿಸಿ ಅದನ್ನು ನಿರ್ವಹಣೆ ಮಾಡಲು ಸಮಿತಿಯ ಮೂಲಕ ಕ್ರಮ ಕೈಗೊಳ್ಳಲಾಗುವುದು. ಜೀವ ಹಾನಿಯಂತಹ ಘಟನೆಗಳು ಸಂಭವಿಸದಂತೆ ನಾವು ಮುನ್ನೆಚ್ಚರಿಕೆ ವಹಿಸುವುದು ಮತ್ತು ಅದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳ ಬೇಕಾಗಿದೆ ಎಂದು ಹೇಳಿದರು.ಗ್ರಾಮದಲ್ಲಿ ವಹಿಸ ಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಪಾಯಕಾರಿ ಮರಗಳು ಮತ್ತು ವಿದ್ಯುತ್ ಕಂಬಗಳು ಇದ್ದಲ್ಲಿ ಗುರುತಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅವರು ಸೂಚಿಸಿದರು.   

ಕೆಲವು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೈಗೊಂಡ ನಿರ್ಣಯಗಳು;

* ಕೂಟೇಲು ಸೇತುವೆ ಮುಂದೆ ಬರೆ ಎಂಬಲ್ಲಿ  ರಸ್ತೆ ಬದಿ ಕುಸಿದಿದ್ದು ಆ ರಸ್ತೆಯಲ್ಲಿ ವಾಹನ ಸಂಚಾರ ನಿಷೇದಿಸಿ ಅಲ್ಲಿ ಸೂಚನಾ ಫಲಕ ಅಳವಡಿಸುವುದು.
*ಪೆಲತ್ತಡ್ಕ ಎಂಬಲ್ಲಿ ಹೊಳೆಗೆ ಕಟ್ಟಿರುವ ಕಿಂಡಿ ಅಣೆಕಟ್ಟಿನ ಮೇಲೆ ನೀರು ಬರುವಾಗ ನಡೆದಾಡುವುದು  ಅಪಾಯಕಾರಿಯಾದುದರಿಂದ ಮಳೆಗಾಲದಲ್ಲಿ ಸಂಚಾರ ನಿಷೇದಿಸಿ ಅಲ್ಲಿ ಸೂಚನಾ ಫಲಕ ಅಳವಡಿಸುವುದು.
*ಕುಕ್ಕುಪುಣಿಯಿಂದ ಶ್ರೀ ಶಾಂತದುರ್ಗಾ ದೇವಸ್ಥಾನ ಹೋಗುವ ರಸ್ತೆಯ ಪಟ್ಟೆ ಜೋಗಿಯವರ ಮನೆಯ ಮುಂದೆ ರಸ್ತೆ ಬದಿ ಇರುವ ಅಪಾಯಕಾರಿ ಮರವನ್ನು ಅರಣ್ಯ ಇಲಾಖೆಯ ಮುಖಾಂತರ ತೆರವು ಗೊಳಿಸುವುದು.
* ರೆಂಜ ಚೂರಿಪದವು ರಸ್ತೆಯ ನೀರುಕ್ಕು ಎಂಬಲ್ಲಿ ರಸ್ತೆ ಬದಿ ಕುಸಿದಿರುವ ಕಾರಣ ಅಲ್ಲಿ ತಡೆಗೋಡೆ ರಚನೆಗೆ ಇಂಜಿನಿಯರಿಂಗ್ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.
* ನಾಕುಡೇಲು ದೇವಸ್ಯ ರಸ್ತೆಯಲ್ಲಿ ಸಂಚರಿಸುವಾಗ ತೋಡಿನ ಮೂಲಕ ದಾಟ ಬೇಕಾದ ಕಾರಣ ವಿಪರೀತ ನೀರು ಬರುವುದರಿಂದ ಅಲ್ಲಿಯೂ ಸಂಚಾರ ನಿಷೇದಿಸಿ ಸೂಚನಾ ಫಲಕ ಅಳವಡಿಸಲು ನಿರ್ಣಯಿಸಲಾಯಿತು.
* ಮುಂಡೂರು ಅಂಗನವಾಡಿ ಕೇಂದ್ರದ ಸುತ್ತ ಕಟ್ಟಿದ ಕಾಂಪೌಂಡ್  ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದ ಕಾರಣ ದುರಸ್ತಿಗಾಗಿ ಸಿಡಿಪಿಒ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.
* ಚೂರಿಪದವು ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಬಾಗಿದ್ದು ನೀರು ಒಳಗೆ ಸೋರುತ್ತಿದ್ದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದೆಂದು ನಿರ್ಣಯಿಸಲಾಯಿತು.
*ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಯಿಂದ  ಸ್ಥಳಾಂತರಕ್ಕೆ ಸೂಚನೆ; ಸಭೆ ಮುಗಿದ ಬಳಿಕ ಅಪಾಯಕಾರಿ ಸ್ಥಳಗಳಿಗೆ ಸಮಿತಿ ಬೇಟಿ ನೀಡಿ ಪರಿಶೀಲಿಸಲಾಯಿತು. ಕುಕ್ಕುಪುಣಿ ಸಮೀಪ ಬಾಜೋಳಿ ಬಾಬು ನಾಯ್ಕ ಎಂಬವರ ಮನೆ ಹತ್ತಿರವೇ ಇರುವ ಗುಡ್ಡ ಸ್ವಲ್ಪ ಕುಸಿದಿದ್ದು ಇನ್ನಷ್ಟು ಕುಸಿದು ಬೀಳುವ ಸ್ಥಿತಿಯಲ್ಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮನೆಯವರನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನೋಟೀಸು ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಯಿತು
.

ಅರಣ್ಯ ಇಲಾಖೆಯ ಅಧಿಕಾರಿ ನಿಂಗರಾಜು, ಮೆಸ್ಕಾಂನ ಬೆಟ್ಟಂಪಾಡಿ ಶಾಖಾಧಿಕಾರಿ ಪುತ್ತು.ಜೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಎ.ಎಸೈ ಕೆ.ಪರಮೇಶ್ವರ ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಪಂಚಾಯತ್ ಉಪಾಧ್ಯಕ್ಷೆ ಸೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ಸದಸ್ಯರಾದ ಅವಿನಾಶ್ ರೈ, ಸತೀಶ್ ಶೆಟ್ಟಿ, ಬಾಲಚಂದ್ರ ನಾಯ್ಕ, ಗೀತಾ.ಡಿ, ಗ್ರಾಮ ಆಡಳಿತ ಅಧಿಕಾರಿ ಸುನೀತಾ ಕುಮಾರಿ.ಕೆ, ಕಿರಿಯ ಆರೋಗ್ಯ ಸಹಾಯಕಿ ಎ.ವಿ ಕುಸುಮಾವತಿ, ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಪಾಲ್ಗೊಂಡರು. ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ ಸಹಕರಿಸಿದರು.

LEAVE A REPLY

Please enter your comment!
Please enter your name here