ಸಂಶೋಧನೆ ಮತ್ತು ಪರ್ಯಾಯ ಬಳಕೆಯಾದರೆ ಮಾತ್ರ ಅಡಿಕೆಗೆ ಭವಿಷ್ಯ-ಅಶೋಕ್ ಕುಮಾರ್ ರೈ
ಕಾವು: ದ.ಕ ಜಿಲ್ಲೆಗೆ ಅಡಿಕೆಯೇ ಆಧಾರಸ್ತಂಭವಾಗಿದೆ, ಅಡಿಕೆ ಇಲ್ಲದಿದ್ರೆ ಜಿಲ್ಲೆಯ ಆರ್ಥಿಕ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಲಿದೆ, ಪ್ರಸ್ತುತ ಅನೇಕ ಕಾರಣಗಳಿಂದ ಅಡಿಕೆ ಕೃಷಿಕರು ಸಂಕಷ್ಟದಲ್ಲಿದ್ದಾರೆ ಹಾಗಾಗಿ ಅಡಿಕೆಯ ಬಗ್ಗೆ ಸಂಶೋಧನೆ ಮತ್ತು ಅಡಿಕೆಯ ಪರ್ಯಾಯ ಬಳಕೆಯಾದ್ರೆ ಮಾತ್ರ ಅಡಿಕೆಗೆ ಭವಿಷ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಜು.9ರಂದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳೂರು ಕೃಷಿಕರ ಸಹಕಾರಿ ಸಂಘ ‘ಮಾಸ್’ ಇವರಿಂದ ಆರಂಭಗೊಂಡ ಅಡಿಕೆ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಅಡಿಕೆ ಕಮರ್ಷಿಯಲ್ ಕ್ರಾಪ್ ಆಗಿರುವುದರಿಂದ ಪರಿಹಾರ ಸಿಗುತ್ತಿಲ್ಲ:
ಅಡಿಕೆ ಕೃಷಿ ಉತ್ಪನ್ನವಾಗದೇ ಕಮರ್ಷಿಯಲ್ ಕ್ರಾಪ್ ಆಗಿ ವಿಭಾಗವಾಗಿರುವುದರಿಂದ ಅಡಿಕೆ ಹಳದಿ ರೋಗ ಇನ್ನಿತರ ಸಮಸ್ಯೆಗಳಿಗೆ ಸರಕಾರದಿಂದ ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ನಮ್ಮ ರಾಜ್ಯದಲ್ಲಿರುವ 26 ಕಮರ್ಷಿಯಲ್ ಬೆಳೆಗಳನ್ನು ಕೃಷಿ ಉತ್ಪನ್ನವಾಗಿ ಪರಿವರ್ತಿಸುವಂತೆ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಡಿಕೆ ಕೃಷಿ ಉತ್ಪನ್ನವಾದಲ್ಲಿ ಸಾಕಷ್ಟು ಅನುದಾನ, ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಶೋಕ್ ಕುಮಾರ್ ರೈ ಯವರು ಹೇಳಿದರು.
ಅಡಿಕೆಗೆ ಒತ್ತು ಕೊಡದಿದ್ರೆ ಸಿಪಿಸಿಆರ್‌ಐ ರಿನಿವಲ್ ಇಲ್ಲ:
ನೆಟ್ಟಣದಲ್ಲಿರುವ ಸಿಪಿಸಿಆರ್‌ಐ ಅಡಿಕೆ ಮತ್ತು ತೆಂಗು ಸಂಶೋಧನೆಗೆಂದು ಇರುವ ಸಂಸ್ಥೆಯಾದ್ರೂ ಕೃಷಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲಿರುವ ವಿಜ್ಞಾನಿಗಳು ತಿಂಗಳಿಗೆ ೨ ಲಕ್ಷ ಸಂಬಳ ಪಡೆಯುವುದು ಮಾತ್ರವೇ ಹೊರತು ಏನೂ ಸಂಶೋಧನೆ ಮಾಡುತ್ತಿಲ್ಲ, ಹಾಗಾಗಿ ಅಡಿಕೆಗೆ ಒತ್ತುಕೊಟ್ರೆ ಮಾತ್ರ ನೆಟ್ಟಣದಲ್ಲಿರುವ ಜಾಗಕ್ಕೆ ರಿನಿವಲ್‌ಗೆ ಅವಕಾಶ ಕೊಡುತ್ತೇವೆ ಇಲ್ಲದಿದ್ರೆ ಆ ಜಾಗವನ್ನು ಕೃಷಿ ಇಲಾಖೆಗೆ ಕೊಡಿಸುತ್ತೇವೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಅಡಿಕೆ ಖರೀದಿ ದ್ವಿಗುಣಗೊಂಡಿದೆ-ಸೀತಾರಾಮ ರೈ ಸವಣೂರು:
ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಮಾಸ್ ಅಧ್ಯಕ್ಷ ಸೀತಾರಾಮ ರೈ ಸವಣೂರುರವರು ಮಾತನಾಡಿ 1970ರಲ್ಲಿ ಅಡಿಕೆಗೆ ರೂ.3 ಆದಾಗ ವಾರಣಾಸಿ ಸುಬ್ರಾಯ ಭಟ್ಟರ ಮೂಲಕ ಕ್ಯಾಂಪ್ಕೋ ಆರಂಭಗೊಂಡಿತು, 2011ರಲ್ಲಿ ಮತ್ತೆ ಅಡಿಕೆ ಧಾರಣೆ ರೂ.30ಕ್ಕೆ ಕುಸಿದಾಗ ಮಾಸ್ ಸಂಸ್ಥೆ ಆರಂಭವಾಗಿ ಪ್ರಸ್ತುತ 9 ಖರೀದಿ ಕೇಂದ್ರಗಳ ಮೂಲಕ ವಾರ್ಷಿಕ ರೂ.167ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುತ್ತಿದೆ. ಬೈಕಂಪಾಡಿಯಲ್ಲಿ ಪ್ರಧಾನ ಕಛೇರಿ ಹೊಂದಿದ್ದು ಒಟ್ಟು 48 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ, ಸುಳ್ಯದಲ್ಲಿ ಅಡಿಕೆ ಗಾರ್ಬಲಿಂಗ್ ತೆರೆಯಲು ಉದ್ದೇಶಿಸಿದ್ದು, ಕಡಬ-ಸುಳ್ಯದಲ್ಲಿ ಅಡಿಕೆ ಖರೀದಿ ಕೇಂದ್ರ ತೆರೆಯಲು ಬೇಡಿಕೆ ಬಂದಿದೆ. ಪರಿಷ್ಕರಿಸಿದ ಅಡಿಕೆಯನ್ನು ನೇರವಾಗಿ ಮಹಾರಾಷ್ಟ್ರ, ಗುಜರಾತ್‌ಗೆ ಮಾರಾಟ ಮಾಡಿ ಹೆಚ್ಚು ಲಾಭಗಳಿಸುವ ಯೋಜನೆಯನ್ನು ಹೊಂದಿದೆ ಎಂದು ಹೇಳಿದರು.
5ಕೋಟಿ ಷೇರು ಬಂಡವಾಳಕ್ಕೆ ಮನವಿ:
ಮಾಸ್‌ನಲ್ಲಿ ಪ್ರಸ್ತುತ ಅಡಿಕೆ ಖರೀದಿ ದ್ವಿಗುಣಗೊಂಡಿದ್ದು, ಈ ಆರ್ಥಿಕ ವರ್ಷದ 3 ತಿಂಗಳಲ್ಲಿ ಈಗಾಗಲೇ 510 ಕ್ವಿಂಟಾಲ್ ಅಡಿಕೆ ಕಳೆದ ಬಾರಿಗಿಂತ ಜಾಸ್ತಿ ಖರೀದಿ ಆಗಿದೆ, ಸಂಸ್ಥೆಯ ಆರ್ಥಿಕ ಸದೃಢತೆ ಮತ್ತು ಹಣಕಾಸಿನ ಪೂರೈಕೆಗಾಗಿ ರಾಜ್ಯ ಸರಕಾರದಿಂದ 5 ಕೋಟಿ ರೂ. ಷೇರು ಬಂಡವಾಳ ಪಡೆದುಕೊಳ್ಳಲು ಶಾಸಕರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದು ಸೀತಾರಾಮ ರೈ ಸವಣೂರುರವರು ಹೇಳಿದರು.
ಮಾಸ್ ಅಭಿವೃದ್ಧಿಗೆ ಸೀತಾರಾಮ ರೈಯವರ ಶ್ರಮ ಶ್ಲಾಘನೀಯ -ಬಾಲ್ಯೊಟ್ಟು:
ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಸೀತಾರಾಮ ರೈಯವರು ಮಾಸ್‌ನ ಅಧ್ಯಕ್ಷರಾದ ಬಳಿಕ ಮಾಸ್ ವೇಗವಾಗಿ ಬೆಳೆಯುತ್ತಿದೆ, ಅಡಿಕೆ ದಾಸ್ತಾನಿಗೆ ಗೋದಾಮು ಇಲ್ಲದಷ್ಟು ಅಡಿಕೆ ಖರೀದಿಯಾಗುತ್ತಿದೆ, ಮಾಸ್‌ನ ಹಣಕಾಸು ಕೊರತೆಯನ್ನು ನೀಗಿಸಿದ್ದಾರೆ, ತನ್ನ ನಾಯಕತ್ವ ಗುಣದಿಂದ ಮಾಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ, ಸೀತಾರಾಮ ರೈಯವರು ಜವಾಬ್ದಾರಿ ವಹಿಸಿದ ಸಂಸ್ಥೆ ಯಾವುದು ಕೂಡ ಅವನತಿ ಆಗದೇ ಪದೋನ್ನತಿ ಹೊಂದಿದೆ ಎಂದು ಹೇಳಿದರು.
ಮಾಸ್ ಅಂತರ್‌ರಾಜ್ಯ ಸಂಸ್ಥೆಯಾಗಿ ಬೆಳೆಯಲಿ:
ಮಾರುಕಟ್ಟೆ ಬೆಳವಣಿಗೆಗೆ ಸ್ಪರ್ಧೆ ಅಗತ್ಯವಿದೆ, ಮುಂದಿನ ದಿನದಲ್ಲಿ ಪುತ್ತೂರು ಎಪಿಎಂಸಿಯಲ್ಲೂ ಮಾಸ್‌ನ ಅಡಿಕೆ ಗಾರ್ಬಲಿಂಗ್ ಆರಂಭವಾಗಿ ಕ್ಯಾಂಪ್ಕೋ ಮಾದರಿಯಲ್ಲಿ ಅಂತರ್‌ರಾಜ್ಯ ಸಂಸ್ಥೆಯಾಗಿ ಬೆಳೆಯಲಿ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟುರವರು ಹೇಳಿದರು.
ರಾಜ್ಯ-ಕೇಂದ್ರ ಸರಕಾರದಿಂದ ಪರಿಹಾರ ಸಿಗಬೇಕು-ಬಳಜ್ಜ:
ಮುಖ್ಯ ಅತಿಥಿಯಾಗಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳಜ್ಜರವರು ಮಾತನಾಡಿ ಒಂದು ಕಾಲದಲ್ಲಿ ಸುಳ್ಯ ಅಡಿಕೆ ಬೆಳೆಯಲ್ಲಿ ನಂ.1 ಆಗಿತ್ತು ಆದರೆ ಪ್ರಸ್ತುತ ದಿನದಲ್ಲಿ ಹಳದಿರೋಗ ಬಾಧೆಯಿಂದ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ, ಇಂತಹ ಸಮಸ್ಯೆಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಶಾಶ್ವತ ಪರಿಹಾರ ನೀಡಿ ಅಡಿಕೆ ಕೃಷಿಕರನ್ನು ಕಾಪಾಡಬೇಕು, ಅಡಿಕೆ ಬೆಳೆಗಾರರಿಗೆ ಸ್ಪರ್ಧಾತ್ಮ ದರ ನೀಡಲು ಕಾವು ಗ್ರಾಮಾಂತರ ಭಾಗದಲ್ಲಿ ಆರಂಭಗೊಂಡ ಮಾಸ್ ಅಡಿಕೆ ಖರೀದಿ ಕೇಂದ್ರ ಯಶಸ್ಸು ಕಾಣಲಿ, ಸೀತಾರಾಮ ರೈಯವರ ನೇತೃತ್ವದಲ್ಲಿ ಮಾಸ್ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಅವಽಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಲಿ ಎಂದು ಶುಭಹಾರೈಸಿದರು.
ಕಾವು ಸಹಕಾರ ಸಂಘದಲ್ಲಿ ರೈತರಿಗೆ ಸಕಲ ವ್ಯವಸ್ಥೆ-ಸಂತೋಷ್ ಮಣಿಯಾಣಿ:
ಮುಖ್ಯ ಅತಿಥಿಯಾಗಿದ್ದ ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ಮಾತನಾಡಿ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಾವು ಸಹಕಾರ ಸಂಘದಲ್ಲಿ ರೈತರಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಉತ್ತಮ ರೀತಿಯಲ್ಲಿ ಸಿಗುತ್ತಿದೆ, ಬ್ಯಾಂಕಿಂಗ್ ವ್ಯವಸ್ಥೆ, ಸಾಲ ಸೌಲಭ್ಯ, ರಸಗೊಬ್ಬರ ಪೂರೈಕೆ, ರಬ್ಬರ್ ಖರೀದಿ ಸೇರಿದಂತೆ ಅನೇಕ ಸೇವೆಗಳು ಸಿಗುತ್ತಿದೆ, ಇದೀಗ ಮತ್ತೆ ಮಾಸ್ ಮುಖಾಂತರ ಅಡಿಕೆ ಖರೀದಿ ಆರಂಭಗೊಂಡಿರುವುದು ಅಡಿಕೆ ಕೃಷಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಹೇಳಿದರು.
ನಂ.1 ಖರೀದಿ ಕೇಂದ್ರ ಆಗಲಿ-ನಿತ್ಯಾನಂದ ಮುಂಡೋಡಿ: ಮಾಸ್‌ನ ನಿರ್ದೇಶಕ ನಿತ್ಯಾನಂದ ಮುಂಡೋಡಿಯವರು ಮಾತನಾಡಿ ಅಡಿಕೆ ಕೃಷಿಕರಿಗೆ ಒಳ್ಳೆಯ ಧಾರಣೆ ನೀಡುವುದೇ ಮಾಸ್‌ನ ಮುಖ್ಯ ಉದ್ದೇಶವಾಗಿದ್ದು, ಬೇರೆ ಯಾವುದಕ್ಕೂ ಪೈಪೋಟಿ ಇಲ್ಲ, ಕಾವುನಲ್ಲಿ ಆರಂಭವಾಗಿರುವ ಮಾಸ್ ಅಡಿಕೆ ಖರೀದಿ ಕೇಂದ್ರವನ್ನು ಕೃಷಿಕರು ಸದುಪಯೋಗಪಡಿಸಿಕೊಂಡು ಮಾಸ್‌ನ ನಂ.1 ಅಡಿಕೆ ಖರೀದಿ ಕೇಂದ್ರವಾಗಿ ಬೆಳೆಯಲಿ ಶುಭ ಹಾರೈಸಿದರು.
ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ-ನನ್ಯ:
ಸಭಾಧ್ಯಕ್ಷತೆ ವಹಿಸಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ನಮ್ಮ ಸಂಘದಲ್ಲಿ 1990ರಲ್ಲಿ ಕ್ಯಾಂಪ್ಕೋ ಮೂಲಕ ಅಡಿಕೆ ಖರೀದಿ ಕೇಂದ್ರವನ್ನು ವಾರಣಾಸಿ ಸುಬ್ರಾಯ ಭಟ್‌ರವರು ಉದ್ಘಾಟಿಸಿ 2022ರವರೆಗೆ ಅಡಿಕೆ ಖರೀದಿ ನಡೆಯುತ್ತಿತ್ತು, 2022ರಲ್ಲಿ ಕ್ಯಾಂಪ್ಕೋದವರು ಕಾವುನಲ್ಲೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಆದ ಕಾರಣ ನಮ್ಮ ಸಂಘದಲ್ಲಿ ಅಡಿಕೆ ಖರೀದಿ ಕೇಂದ್ರ ನಿಂತಿತು, ಆದರೆ ನಮ್ಮ ಸಂಘದ ಸದಸ್ಯರು, ಗ್ರಾಹಕರು ನಮ್ಮ ಸಂಘದಲ್ಲೇ ಅಡಿಕೆ ಖರೀದಿ ಬೇಕೆಂದು ಬೇಡಿಕೆ ಇಟ್ಟ ಸಂದರ್ಭದಲ್ಲಿ ನಾವು ಮಾಸ್ ಸಂಸ್ಥೆಯವರಲ್ಲಿ ಮನವಿ ಮಾಡಿಕೊಂಡಿದ್ದೆವು, ಸೀತಾರಾಮ ರೈಯವರು ಅಧ್ಯಕ್ಷರಾದ ಬಳಿಕ ನಮ್ಮ ಮನವಿಗೆ ಸ್ಪಂದನೆ ಸಿಕ್ಕಿ ಇದೀಗ ಮತ್ತೆ ನಮ್ಮ ಸಂಘದಲ್ಲಿ ಅಡಿಕೆ ಖರೀದಿ ಉದ್ಘಾಟನೆಗೊಂಡಿದೆ, ಹಾಗಾಗಿ ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಪ್ರಥಮ ಗ್ರಾಹಕರಿಗೆ ಬಿಲ್ ವಿತರಣೆ:
ಮಾಸ್‌ನ ಕಾವು ಅಡಿಕೆ ಖರೀದಿ ಕೇಂದ್ರದಲ್ಲಿ ಪ್ರಥಮ ಗ್ರಾಹಕರಾಗಿ ಅಡಿಕೆ ಮಾರಾಟ ಮಾಡಿದ ಶ್ರೀಪತಿ ಮೂಡೆತ್ತಾಯ ನನ್ಯ, ವೆಂಕಟಕೃಷ್ಣ ಭಟ್ ಮಳಿ, ಸತ್ಯನಾರಾಯಣ ಕಡಂಬಳಿಕೆಯವರಿಗೆ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾರಾಟ ಬಿಲ್ ವಿತರಣೆ ಮಾಡಿದರು.
ಮಾಸ್‌ನ ನಿರ್ದೇಶಕರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬೆಳ್ಳೆ ಶಿವಾಜಿ ಸುವರ್ಣ, ಸುಧಾ ಎಸ್ ರೈ, ಪುಷ್ಪರಾಜ ಅಡ್ಯಂತಾಯ, ಸಿಇಓ ಟಿ ಮಹಾಬಲೇಶ್ವರ ಭಟ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೀತಿಕಾ ಚಾಕೋಟೆ ಪ್ರಾರ್ಥಿಸಿದರು. ಕಾವು ಪಿಎಸಿಎಸ್‌ನ ಸಿಇಓ ಕೇಶವಮೂರ್ತಿ ಪಿ.ಜಿ. ವಂದಿಸಿದರು. ಸವಣೂರು ಪಿಎಸಿಎಸ್‌ನ ಸಿಇಓ ಚಂದ್ರಶೇಖರ್ ಮತ್ತು ಕಾವು ಪಿಎಸಿಎಸ್‌ನ ಸಿಬ್ಬಂದಿ ಸುನೀಲ್ ನಿಽಮುಂಡರವರು ಕಾರ್ಯಕ್ರಮ ನಿರ್ವಹಿಸಿದರು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಪ್ರವೀಣ್ ರೈ ಮೇನಾಲ, ಲೋಕೇಶ್ ಚಾಕೋಟೆ, ರಾಮಣ್ಣ ನಾಯ್ಕ ಕುದ್ರೋಳಿ, ಶ್ರೀಧರ್ ರಾವ್ ನಿಽಮುಂಡ, ಶಿವಪ್ರಸಾದ್ ಕೊಚ್ಚಿ, ಲೋಹಿತ್ ಅಮ್ಚಿನಡ್ಕ, ಹೇಮಾವತಿ ಚಾಕೋಟೆ, ಮೋಹನಾಂಗಿ ಬೀಜಂತ್ತಡ್ಕರವರು ಅತಿಥಿಗಳನ್ನು ಗೌರವಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.
ಪ್ರಥಮ ದಿನವೇ 5.3 ಟನ್ ಅಡಿಕೆ ಖರೀದಿ
ಮಾಸ್‌ನ ಕಾವು ಅಡಿಕೆ ಖರೀದಿ ಕೇಂದ್ರದಲ್ಲಿ ಉದ್ಘಾಟನಾ ದಿನದಂದೇ ಅಡಿಕೆ ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಉದ್ಘಾಟನಾ ದಿನದ ಸಲುವಾಗಿ ಪ್ರತಿ ಕೆ.ಜಿ ಅಡಿಕೆಗೆ ರೂ.2 ಹೆಚ್ಚಳ ದರ ನೀಡಲಾಗಿತ್ತು, ಪ್ರಥಮ ದಿನದಂದು 76 ಗ್ರಾಹಕರಿಂದ ಸುಮಾರು 5.3 ಟನ್‌ನಷ್ಟು ಅಡಿಕೆ ಖರೀದಿ ಆಗಿದೆ, ಹೊಸ ಅಡಿಕೆ ರೂ.387, ಹಳೆ ಅಡಿಕೆ ರೂ.465ಕ್ಕೆ ಖರೀದಿ ಆಗಿದೆ ಎಂದು ಮಾಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ ಲೋಕೇಶ್‌ರವರು ಮಾಹಿತಿ ನೀಡಿದ್ದಾರೆ.