ಇಳಂತಿಲ: ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗೆ ಅಭಿನಂದನೆ – ಸಂಘದ ಅಭಿವೃದ್ಧಿಗೆ ಸಿಬ್ಬಂದಿ, ಆಡಳಿತ ಮಂಡಳಿ ಪಾತ್ರ ಮುಖ್ಯ: ಪದ್ಮನಾಭ ಶೆಟ್ಟಿ

0

ಉಪ್ಪಿನಂಗಡಿ: ಸಹಕಾರಿ ಸಂಘವೊಂದು ಅಭಿವೃದ್ಧಿಯಾಗಬೇಕಾದರೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಪಾತ್ರ ಬಹುಮುಖ್ಯ. ಹೈನುಗಾರಿಕೆಯೆಂಬುದು ಉದ್ದಿಮೆಯಾಗಿರದಿದ್ದ ಆ ಕಾಲದಲ್ಲಿ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿ 40 ವರ್ಷಗಳ ಕಾಲ ದುಡಿದು ಇಳಂತಿಲ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಕಟ್ಟಿ ಬೆಳೆಸಿದವರಲ್ಲಿ ಕೆ. ಮಹಾಬಲ ಶೆಟ್ಟಿ ಅವರು ಕೂಡಾ ಓರ್ವರು ಎಂದು ದ.ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ತಿಳಿಸಿದರು.

ಇಳಂತಿಲದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ. ಮಹಾಬಲ ಶೆಟ್ಟಿಯವರಿಗೆ ಸಂಘದ ವತಿಯಿಂದ ಇಳಂತಿಲದ ವಾಣಿಶ್ರೀ ಕಲಾ ಮಂದಿರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕೆ. ಮಹಾಬಲ ಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು. ಆಗಿನ ಕಾಲದಲ್ಲಿ ದನ ಸಾಕಾಣಿಕೆಯೆಂಬುದು ಮನೆಯ ಹಾಲಿಗೆ ಮಾತ್ರ ಸೀಮಿತವಾಗಿತ್ತು. ಬೀಡಿ ಉದ್ಯಮ ಕ್ಷೀಣವಾದ ಬಳಿಕ ಹೈನುಗಾರಿಕೆ ಉದ್ದಿಮೆಯಾಗಿ ಬೆಳೆದಿದೆ. ಆಗಿನ ಕಾಲದಲ್ಲಿ ರೈತರನ್ನು ಒಗ್ಗೂಡಿಸಿ ಸಂಘಕ್ಕೆ ಹಾಲು ಪೂರೈಕೆ ಮಾಡುವಂತೆ ಅವರ ಮನವೊಲಿಸಿ ಸಹಕಾರ ಸಂಘವನ್ನು ಕಟ್ಟಿ ಬೆಳೆಸಲು ಅಂದಿನ ಆಡಳಿತ ಮಂಡಳಿಯೊಂದಿಗೆ ಸಂಘದ ಕಾರ್ಯದರ್ಶಿಯವರಾದ ಕೆ. ಮಹಾಬಲ ಶೆಟ್ಟಿಯವರಿಗೂ ಮಹತ್ವದ ಜವಾಬ್ದಾರಿಯಿತ್ತು. ಅವರು ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಬಂದಿದ್ದರಿಂದ ಸಂಘ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಹೀಗಾಗಿ ಅವರು ಅಭಿನಂದನಾರ್ಹರು ಎಂದರು.
ದ.ಕ. ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ. ಪಾಣಾಜೆ ಮಾತನಾಡಿ, ಉತ್ತಮ ಕರ್ಮಕ್ಕೆ ಉತ್ತಮ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಇಂದಿನ ಸಮಾರಂಭದಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ. ಹಾಲು ಉತ್ಪಾದಕರ ಸಂಘದ ಸಿಬ್ಬಂದಿಯ ಕೆಲಸವೆಂದರೆ ರಜೆಯಿಲ್ಲದ ಕೆಲಸ. ಎಲ್ಲಿಗೆ ಹೋದರೂ, ಬೆಳಗ್ಗೆ ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಪ್ರತಿದಿನ ಸಂಘದ ಕಚೇರಿಯಲ್ಲಿ ಅವರು ಇರಲೇ ಬೇಕಾಗುತ್ತದೆ. ಕೇವಲ ದುಡ್ಡಿಗಾಗಿ ಕೆಲಸ ಮಾಡಬಾರದು. ತಾನು ಬೆಳೆಯುವುದರೊಂದಿಗೆ ಸಂಸ್ಥೆಯನ್ನು ಬೆಳೆಸಿದಾಗ ಮಾತ್ರ ಜನ ಗುರುತಿಸಲು ಸಾಧ್ಯ. ಆ ಕೆಲಸ ಕೆ. ಮಹಾಬಲ ಶೆಟ್ಟಿಯವರಿಂದಾಗಿದ್ದು, ಪ್ರಾಮಾಣಿಕ ಸೇವೆ, ಉತ್ತಮ ವ್ಯಕ್ತಿತ್ವವನ್ನು ಜನ ಗುರುತಿಸುವಂತಾಗಿದೆ ಎಂದರು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಮಾತನಾಡಿ, ತನ್ನ 40 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಕರ್ತವ್ಯ ನಿರ್ವಹಿಸಿದ ವ್ಯಕ್ತಿ ಕೆ. ಮಹಾಬಲ ಶೆಟ್ಟಿಯವರು. ಎಲ್ಲರೊಂದಿಗೆ ಉತ್ತಮ ಒಡನಾಟವನ್ನಿಟ್ಟುಕೊಂಡು, ಪ್ರಾಮಾಣಿಕ ಕರ್ತವ್ಯ ನಿಷ್ಠೆಯಿಂದ ಸಂಘದ ಬೆಳವಣಿಗೆಗೆ ಕಾರಣರಾದವರು ಎಂದರು.


ಸಂಘದ ಅಧ್ಯಕ್ಷ ಪೆಲಪ್ಪಾರು ವೆಂಕಟ್ರಮಣ ಭಟ್ ಮಾತನಾಡಿ, ಸಂಘದ ಕಾರ್ಯದರ್ಶಿಯಾಗಿದ್ದು ಕೊಂಡು ತನ್ನ ಪ್ರಾಮಾಣಿಕ ಸೇವೆಯಿಂದ ಸಂಘದ ಬೆಳವಣಿಗೆಗೆ ಕಾರಣರಾದವರು ಕೆ. ಮಹಾಬಲ ಶೆಟ್ಟಿಯವರು. ಉತ್ತಮ ಕೆಲಸ ಮಾಡಿದಾಗ ಮಾತ್ರ ಓರ್ವ ಜನರ ಪ್ರೀತಿಗೆ ಪಾತ್ರನಾಗಲು ಸಾಧ್ಯ. ಕೆ. ಮಹಾಬಲ ಶೆಟ್ಟಿಯವರು ಮಾಡಿದ ಪ್ರಾಮಾಣಿಕ ಕೆಲಸದಿಂದ ಇಂದು ಅವರನ್ನು ಜನರು ಗುರುತಿಸುವಂತಾಗಿದೆ ಎಂದರು.ಮುಖ್ಯ ಅತಿಥಿಗಳಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್, ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ. ಜಿತೇಂದ್ರ ಪ್ರಸಾದ್ ಮಾತನಾಡಿ ಶುಭ ಹಾರೈಸಿದರು. ಸಂಘದ ನಿರ್ದೇಶಕ ವಿಜಯ ಕುಮಾರ್ ಕಲ್ಲಳಿಕೆ ಸ್ವಾಗತಿಸಿದರು. ಪ್ರಭಾರ ಕಾರ್ಯದರ್ಶಿ ಜನಾರ್ದನ ಗೌಡ ವಂದಿಸಿದರು. ಡಾ. ಗೋವಿಂದ ಪ್ರಸಾದ ಕಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here