ಪುತ್ತೂರು: ಇಡ್ಕಿದು ಕುಳದಲ್ಲಿ ಅಂಗನಾಡಿ ಸಮೀಪ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿದ್ದು, ಎರಡು ಮೂರು ಬೀದಿ ನಾಯಿಗಳು ಕೂಡಾ ನಾಪತ್ತೆಯಾಗಿದೆ ಎಂದು ಸಾರ್ವಜನಿಕ ವಲಯದಿಂದ ಮಾಹಿತಿ ಲಭ್ಯವಾಗಿದೆ.
ಇಡ್ಕಿದು ಕುಳದಲ್ಲಿ ಅಂಗನವಾಡಿ ಸಮೀಪ ಕೆಸರು ಮಣ್ಣಿನಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಆ ಪರಿಸರದಲ್ಲಿದ್ದ ಎರಡು ಮೂರು ಬೀದಿ ನಾಯಿಗಳು ಕೂಡಾ ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ ಗಂಟೆ 11ರ ಸುಮಾರಿಗೆ ಅಂಗನವಾಡಿಯ ಪಕ್ಕದಿಂದ ನಾಯಿಗಳು ಬೊಗಳುವುದನ್ನು ಗಮನಿಸಿದ ರಸ್ತೆ ಆಚೆ ಬದಿಯಲ್ಲಿನ ಪ್ಲಾಟ್‌ವೊಂದರ ಮೇಲಿನಿಂದ ಮಹಿಳೆಯೊಬ್ಬರು ನೋಡಿದಾಗ ಚಿರತೆಯೊಂದು ಅಂಗನವಾಡಿ ಪಕ್ಕದಲ್ಲಿ ಹಾದು ಹೋಗುವುದು ನೋಡಿದ್ದಾರೆ. ತಕ್ಷಣ ಕೆಳಗಡೆಯ ಬ್ಯೂಟೀಷಿಯನ್‌ವೊಬ್ಬರಿಗೆ ಕರೆ ಮಾಡಿ ಮನೆಯಿಂದ ಹೊರ ಬಾರದಂತೆ ತಿಳಿಸಿದ್ದಾರೆ. ಬೆಳಗ್ಗೆ ಅಂಗನವಾಡಿ ಬಂದು ನೋಡಿದಾಗ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಆ ಪರಿಸರದ ಎರಡು ಮೂರು ಬೀದಿನಾಯಿಗಳು ಕೂಡಾ ನಾಪತ್ತೆಯಾಗಿದೆ. ಚಿರತೆ ನಾಯಿಯನ್ನು ಹಿಡಿದು ಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ.
ನಮ್ಮ ವ್ಯಾಪ್ತಿ ಬರುವುದಿಲ್ಲ !
ಕಾಡು ಪ್ರಾಣಿ ನಾಡಿಗೆ ಬಂದಿರುವ ಮತ್ತು ಅದರಲ್ಲೂ ಚಿರತೆ ಬಂದಿದೆ ಎಂದು ವಿಟ್ಲ ಅರಣ್ಯ ಇಲಾಖೆಗೆ ತಿಳಿಸಿದಾಗ ಅದು ಪುತ್ತೂರು ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ. ಹಾಗೆಂದು ಪುತ್ತೂರು ಅರಣ್ಯ ಇಲಾಖೆಗೆ ತಿಳಿಸಿದಾಗ ಅದು ವಿಟ್ಲಕ್ಕೆ ಬರುತ್ತದೆ ಎಂದು ಹೇಳಿ ತಮ್ಮ ಕೆಲಸದಿಂದ ನುಣುಚಿಕೊಳ್ಳುತ್ತಿರುವುದನ್ನು ನೋಡಿ ನೇರ ಶಾಸಕರಿಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿದ್ದಾರೆ. ಶಾಸಕರ ಸೂಚನೆಯಂತೆ ಅರಣ್ಯ ಇಲಾಖೆಯಿಂದ ಅಧಿಕಾರಿಗಳು ಬರುತ್ತಿದ್ದಾರೆಂದು ತಿಳಿದುಬಂದಿದೆ.