ಪುತ್ತೂರು: ರಾಜ್ಯದಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕಲರ್ ಡಿಸ್ಟ್ರಾಪಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಲೆರಾಸಿಸ್ ಇತ್ಯಾದಿ ಖಾಯಿಲೆಗಳಿಂದಾಗಿ ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1 ಸಾವಿರ ರು. ಪ್ರೋತ್ಸಾಹಧನ ನೀಡಲು ತಕ್ಷಣ ಫಲಾನುಭವಿಗಳ ಆಯ್ಕೆ ಮಾಡುವಂತೆ ರಾಜ್ಯ ಸರಕಾರವು ಜೂ.26, 2024 ರಂದು ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಬಾಲ್ಯದಲ್ಲಿ ಕಂಡುಬರುವ ಚಲನೆಯ ಅಸ್ವಸ್ಥತೆ (ಸೆರೆಬ್ರಲ್ ಪಾಲ್ಸಿ), ಅನುವಂಶಿಕ ಸ್ನಾಯು ದೌರ್ಬಲ್ಯ, ಮಲ್ಟಿಪಲ್ ಸ್ಪೆರಾಸಿಸ್ ಹಾಗೂ ಪಾರ್ಕಿನ್‌ಸನ್ ಖಾಯಿಲೆಯಿಂದ ಬಳಲುತ್ತಿರುವವರ ಆರೈಕೆದಾರರಿಗೆ ಪ್ರತಿ ತಿಂಗಳು 1 ಸಾವಿರ ರುಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದರು. ಇದರ ಜತೆಗೆ ಹೊಸ ಯೋಜನೆಯಲ್ಲಿ ಬೆನ್ನು ಹುರಿ ಅಪಘಾತದ ಅಂಗವಿಕಲರು, ಬುದ್ದಿ ಮಾಂದ್ಯತೆ 2 ಬಗೆಯನ್ನು ಸೇರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಬೆನ್ನುಹುರಿ ಅಪಘಾತ ಅಂಗವಿಕಲರು ಹಾಗೂ ಬುದ್ದಿ ಮಾಂದ್ಯತೆ ಕುರಿತ ಪ್ರಸ್ತಾವನೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಈ ನಿಟ್ಟಿನಲ್ಲಿ ವಿವಿದೋದ್ದೇಶ ಪುನರ್‌ವಸತಿ ಕಾರ್ಯಕರ್ತರು (ಎಮ್‌ಆರ್‌ಡಬ್ಲ್ಯೂ) ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತರು ರಾಜ್ಯಾದಾದ್ಯಂತ ಅಂತಹ ಆರೈಕೆದಾರರ ಪಟ್ಟಿಯನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ವೈದ್ಯಕೀಯ ಮಂಡಳಿ ನೀಡಿರುವ ಪ್ರಮಾಣಪತ್ರದ ಆಧಾರದ ಮೇಲೆ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಲಬಲೀಕರಣ ಇಲಾಖೆಯ ಮೂಲಕ ರಾಜ್ಯ ಸರಕಾರವು ಪ್ರೋತ್ಸಾಹ ಧನ 4 ಕೋಟಿ ರೂಪಾಯಿಗಳು ಆರೈಕೆದಾರರಿಗೆ ನೀಡಲು ಮೀಸಲಿಟ್ಟಿದೆ. ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ನಿರ್ದೇಶಕರು ಈ ವರ್ಷದ ಮೇ ತಿಂಗಳಿನಿಂದಲೇ ಆರೈಕೆದಾರರಿಗೆ ಪ್ರೋತ್ಸಾಹ ಧನ ನೀಡುವ ಅಗತ್ಯವನ್ನು ಸರಕಾರಕ್ಕೆ ಶಿಫಾರಸ್ಸು ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ನೇತೃತ್ವದಲ್ಲಿ 4 ಸದಸ್ಯರ ಸಮಿತಿ ಇರುತ್ತದೆ. ಯೋಜನೆಯಿಂದ ಪ್ರಯೋಜನ ಪಡೆಯುವ ಆರೈಕೆದಾರರ ಪಟ್ಟಿಯ ಕಡತವನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಮೂಲಕ ರಚಿಸಲಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವ್ಯಕ್ತಿಗಳು ಪ್ರಮಾಣಪತ್ರ ಅಥವಾ ಯುಡಿಐಡಿ ಕಾರ್ಡ್ ಅನ್ನು ಹೊಂದಿರಬೇಕು. ಈ ಯೋಜನೆಯನ್ನು ಪಡೆಯಲು ವಯಸ್ಸು ಮತ್ತು ಆದಾಯದ ಮಿತಿ ಇರುವುದಿಲ್ಲ. ಈ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸಂಬಂಧಿಸಿದ ವಿಕಲತೆಯನ್ನು ಹೊಂದಿರುವ ವ್ಯಕ್ತಿಗಳ ಪೋಷಕರು ಆಯಾ ಗ್ರಾಮದ ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕುಂಬ್ರ ವಿಕಲಚೇತನರ ವಿಕಾಸ ಗ್ರೂಪ್‌ನ ಮುಖ್ಯಸ್ಥರಾದ ಶಿವು ರಾಥೋಡ್‌ರವರು ತಿಳಿಸಿದ್ದಾರೆ.
ಬೆನ್ನುಹುರಿ ಅಪಘಾತ ಅಂಗವಿಕಲರು ಹಾಗೂ ಬುದ್ದಿ ಮಾಂದ್ಯತೆ ಕುರಿತ ಪ್ರಸ್ತಾವನೆಗೆ ಸರಕಾರ ತಾತ್ಕಾಲಿಕ ತಡೆ ಹಿಡಿದಿರುವುದು ಸರಿಯಲ್ಲ ಬೆನ್ನುಹುರಿ ಅಪಘಾತ ಮತ್ತು ಬುದ್ದಿಮಾಂದ್ಯತೆ ವಿಕಲಚೇತನರ ಪರಿಸ್ಥಿತಿ ಶೋಚನೀಯವಾಗಿದ್ದು ಸಮಾಜದಲ್ಲಿ ಅವರನ್ನು ಕೂಡ ಕಡೆಗಣಿಸದೆ ಪರಿಗಣಿಸಿ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಆಶಯದಂತೆ ಸರಕಾರ ಈ ಕೂಡಲೇ ಎರಡೂ ಬಗೆಯ ವಿಕಲಚೇತನರ ಆರೈಕೆದಾರರಿಗೆ ಪೋಷಣ ಭತ್ಯೆಯನ್ನು ಮಂಜೂರು ಮಾಡುವಂತೆ ಕುಂಬ್ರ ವಿಕಲಚೇತನ ವಿಕಾಸ ಗ್ರೂಪ್‌ನ ಮುಖ್ಯಸ್ಥ ಶಿವು ರಾಥೋಡ್ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.