ಪುಣಚ: ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ ಪುಣಚ ತಂಡವು ಯಶಸ್ವಿ 2ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜು.13ರಂದು ನಡೆಯಿತು.
ಸಾಯಂಕಾಲ 6ರಿಂದ ಪುಣಚ ನಾರಾಯಣ ಬನ್ನಿಂತಾಯರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಸಭಾ ಕಾರ್ಯಕ್ರಮ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಮಾತನಾಡಿ ಯುವಕರ ತಂಡ ಕಳೆದ ಒಂದು ವರ್ಷದಲ್ಲಿ ನಾನಾ ಕಡೆಗಳಲ್ಲಿ ಉತ್ತಮ ಸೇವೆಯನ್ನು ನೀಡಿ ಹೆಸರು ಗಳಿಸಿದೆ. ಯುವಕರ ಶ್ರಮ ಹಾಗೂ ಸೇವೆಯಿಂದ ಸಮಾಜಕ್ಕೆ ಒಂದು ಶಕ್ತಿ ನೀಡುವ ಕಾರ್ಯಕ್ರಮ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ಪಡೆದು ಸಮಾಜದಲ್ಲಿ ಇನ್ನೂ ಉತ್ತಮ ಸೇವೆ ನೀಡುವಂತಾಗಲಿ. ತಾಯಿ ದೇವಿಯ ಅನುಗ್ರಹ ಸದಾ ಇರಲಿ ಎಂದು ಶುಭ ಹಾರೈಸಿದರು.
ಪ್ರಧಾನ ಕಾರ್ಯದರ್ಶಿ ಶ್ರೀಧರ್ ಶೆಟ್ಟಿ ದೇವರಗುಂಡಿ, ಕೋಶಾಧಿಕಾರಿ ಶಂಕರನಾರಾಯಣ ಭಟ್ ಮಲ್ಯ, ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಶ್ರೀದೇವಿ ವಿದ್ಯಾ ಕೇಂದ್ರದ ಆಡಳಿತ ಸಮಿತಿ ಸಂಚಾಲಕ ರವೀಶ್ ಪೊಸವಳಿಕೆ, ಮೇಳದ ಮುಖ್ಯಗುರು ಚಂದ್ರಹಾಸ ಬೆಳ್ಳಾರೆ, ಸಿಂಗಾರಿ ಮೇಳದ ಅಧ್ಯಕ್ಷ ಕಿರಣ್’ರಾಜ್ ಕೆಲ್ಲಾಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೇಳದ ಸದಸ್ಯರಾದ ವಂಶಿಕ್ ಸ್ವಾಗತಿಸಿದರು. ಸೃಜೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದ ಪದಾಧಿಕಾರಿಗಳು ಹಾಗೂ ಸದಸ್ಯರು ಭಕ್ತಾದಿಗಳನ್ನು ಸ್ವಾಗತಿಸಿ, ಸಹಕರಿಸಿದರು.