ಸರ್ಪ ಸಂಚಾರ ಪ್ರದೇಶ ಗುರುತಿಸುವ ಕಾರ್ಯಕ್ಕೆ ಆಗ್ರಹ
ಕಾಣಿಯೂರು: ಕಾಡು ಪ್ರದೇಶದಿಂದ ಕೂಡಿರುವ ನಾಗಾರಾಧನೆಯ ಪುಣ್ಯತಾಣ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇಂದು ಅಭಿವದ್ಧಿ ಹೊಂದುತ್ತಾ ಪಟ್ಟಣವಾಗಿ ಬೆಳೆದುದರಿಂದ ಇಲ್ಲಿ ನಾಗಗಳ ರಕ್ಷಣೆಗೆ ಕ್ಷೇತ್ರದ ವತಿಯಿಂದ ಆದ್ಯತೆ ನೀಡಬೇಕಾದ ಅಗತ್ಯವಿದೆ. ನಾಗ ಸಂಚಾರ ಇರುವ ಪ್ರದೇಶದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಬೀಳಬೇಕಿದೆ ಎನ್ನುವ ಕೂಗು ಕೇಳಿಸಲಾರಂಭಿಸಿದೆ. ಇಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ಕಾಂಕ್ರೀಟ್ ಕಾಮಗಾರಿಗಳು ನಡೆದಿದ್ದು ಎಲ್ಲ ಕಡೆಗಳಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಇದರಿಂದಾಗಿ ಕ್ಷೇತ್ರದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ವೇಗವಾಗಿ ಸಂಚರಿಸುವಾಗ ಕೆಲವು ಸಂದರ್ಭಗಳಲ್ಲಿ ಸರ್ಪಗಳೂ ಅದರಡಿ ಬಿದ್ದು ಸಾವನ್ನಪ್ಪಿದ ಕಾರಣ ಕ್ಷೇತ್ರಗಳಲ್ಲಿ ವಾಹನಗಳ ವೇಗದ ಸಂಚಾರಕ್ಕೆ ಕಡಿವಾಣವನ್ನು ಅಗತ್ಯವಾಗಿ ಹಾಕಬೇಕಿದೆ ಎಂಬ ಭಕ್ತರ ಆಗ್ರಹ ಮುನ್ನಲೆಗೆ ಬಂದಿದೆ. ಕ್ಷೇತ್ರದಲ್ಲಿ ಸರ್ಪಗಳು ಹೆಚ್ಚಾಗಿ ಸಂಚರಿಸುವ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ವಾಹನ ಸಂಚಾರ ನಿರ್ಬಂಧ ಅಥವಾ ಸರ್ಪ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಜತೆಗೆ ಕ್ಷೇತ್ರದ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಿ ಸರ್ಪಗಳ ಸಂಚಾರಗಳನ್ನು ಜನತೆಗೆ ತಿಳಿಸಿ ವಾಹನಗಳ ವೇಗವನ್ನು ನಿಯಂತ್ರಿಸಲು ಸೂಚಿಸುವುದು ಅಗತ್ಯವಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಆದಿ ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಆದಿಶೇಷ ಗೆಸ್ಟ್ ಹೌಸ್ ಪ್ರದೇಶ ಹೆಚ್ಚಿನ ಸರ್ಪ ಸಂಚಾರದ ಸ್ಥಳಗಳು ಎಂದು ಈಗ ಗುರುತಿಸಿಕೊಂಡಿದೆ.
ಸ್ಪಂದಿಸಲು ಆಗ್ರಹ…:
ವಿವಿಧ ಕಾರಣಗಳಿಂದ ಗಾಯಗೊಳ್ಳುವ ಸರ್ಪಗಳಿಗೆ ಸುಬ್ರಹ್ಮಣ್ಯದಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಅಗತ್ಯದ ಆಗ್ರಹವೂ ಕೇಳಿ ಬಂದಿದೆ. ವಿವಿಧ ಕಾರಣಗಳಿಂದ ಸರ್ಪಗಳು ಸಾವನ್ನಪ್ಪಿದ ಸಂದರ್ಭ ದೇಗುಲ ಸಿಬಂದಿ ಸ್ಪಂದಿಸಿ ಅದಕ್ಕೆ ಅಂತಿಮ ಕಾರ್ಯಗಳನ್ನು ಸಂಪ್ರದಾಯದಂತೆ ನೆರವೇರಿಸಲು ಮುಂದಾಗಬೇಕು ಎಂಬ ಆಗ್ರಹವೂ ಇದೆ.
ಸರ್ಪ ಸಂಚಾರದ ಹಾಟ್ ಸ್ಪಾಟ್‌ಗಳನ್ನು ಗುರುತಿಸುವ ಹಾಗೂ ಕ್ಷೇತ್ರದ ಎಲ್ಲ ಕಡೆಗಳಲ್ಲೂ ಸರ್ಪ ಸಂಚಾರದ ಫಲಕ ಅಳವಡಿಸಿ ವಾಹನಗಳ ವೇಗದ ಸಂಚಾರಕ್ಕೆ ಕಡಿವಾಣ ಹಾಕಿ ಸರ್ಪ ಮಾತ್ರವಲ್ಲದೆ ಜಾನುವಾರು, ಪಶು ಪಕ್ಷಿಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಸರ್ಪಗಳ ಚಿಕಿತ್ಸೆಗಳಿಗೂ ಕುಕ್ಕೆಯಲ್ಲೇ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಮನ ಹರಿಸುತ್ತೇವೆ.
-ಜುಬಿನ್ ಮೊಹಪಾತ್ರ
ಆಡಳಿತಾಧಿಕಾರಿ,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ