ಉಪ್ಪಿನಂಗಡಿ: ಇಲ್ಲಿಗೆ ಸಮೀಪ ಓಡ್ಲ ಎಂಬಲ್ಲಿ ಮಳೆನೀರು ಚರಂಡಿಯ ಬದಲಾಗಿ ರಸ್ತೆಯಲ್ಲೇ ಹರಿಯುತ್ತಿದ್ದು ವಾಹನ ಚಾಲಕರು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೋರ್ವರು ಅಕ್ರಮವಾಗಿ ಅಗೆದು, ಮಣ್ಣನ್ನು ಚರಂಡಿ ಮೇಲೆ ಹಾಕಿದ ಕಾರಣ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯಲಾಗದೆ ರಸ್ತೆಯಲ್ಲೇ ಹರಿಯುತ್ತಿದೆ.
ಪೈಪ್ ಲೈನ್ ಅಳವಡಿಸುವ ಸಲುವಾಗಿ ಭಾನುವಾರ ಮಧ್ಯಾಹ್ನ ರಸ್ತೆಯನ್ನು ಅಗೆದಿದ್ದು, ನಿರಂತರವಾಗಿ ಸುರಿಯುವ ಮಳೆಯಿಂದಾಗಿ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿಯುತ್ತಿದೆ. ರಸ್ತೆ ತೋಡಿನಂತಾಗಿದ್ದು, ಮುಂದೆ ಅಪಾಯಕಾರಿ ತಿರುವು ಇದ್ದು, ಅಪಾಯ ಸಂಭವಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಕುರಿತು ವಾಹನ ಚಾಲಕರು ಮತ್ತು ಸಾರ್ವಜನಿಕರು ಮಾದ್ಯಮ ಪ್ರತಿನಿಧಿಗಳಿಗೆ ಹಾಗೂ ಪಿಡಬ್ಲ್ಯುಡಿ. ಇಂಜಿನಿಯರ್ಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಮೌಕಿಕ ದೂರು ಸಲ್ಲಿಸಿ, ರಸ್ತೆ ಅಗೆತ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರೀಯಿಸಿರುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕಾನಿಷ್ಕ , ʼರಸ್ತೆ ಅಗೆಯುವುದಕ್ಕೆ ಯಾರಿಗೂ ಅನುಮತಿ ನೀಡಿರುವುದಿಲ್ಲ. ರಸ್ತೆ ಅಗೆದು ಸಮಸ್ಯೆ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.