





ಆಂಗ್ಲ ಮಾಧ್ಯಮ ತರಗತಿ ಪ್ರಾರಂಭ ಊರಿಗೇ ಸಂತಸ ತರುವ ವಿಚಾರ: ಜಗನ್ನಾಥ ಚೌಟ ಬದಿಗುಡ್ಡೆ


ನಮ್ಮ ಸಾಧನೆಗೆ ಈ ಶಾಲೆಯ ಶಿಕ್ಷಣವೇ ಬುನಾದಿ: ಬಾಲಕೃಷ್ಣ ಆಳ್ವ ಕೊಡಾಜೆ





ವಿಟ್ಲ: ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಿನ ಮಕ್ಕಳು ಮುಂದಿನ ಜೀವನದಲ್ಲಿ ವ್ಯವಹರೀಸಬೇಕಾದರೆ ಆಂಗ್ಲ ಶಿಕ್ಷಣ ಅತೀ ಅಗತ್ಯ ಎಂದು ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಹೇಳಿದರು.

ಅವರು ಮಾಣಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಅನುಮೋದನೆಯಂತೆ ನೂತನವಾಗಿ ಆರಂಭಗೊಂಡ ಒಂದನೇ ತರಗತಿಯ ಆಂಗ್ಲ ಮಾಧ್ಯಮ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಣಿ ಸರ್ಕಾರಿ ಶಾಲೆಯು ನೂರು ವರ್ಷಗಳನ್ನು ಮೀರಿದ ಸಂಸ್ಥೆ. ಇಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ, ಜೀವನದಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿ ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಈ ಸಂಸ್ಥೆಯಲ್ಲಿ ನೂತನವಾಗಿ ಆಂಗ್ಲ ಮಾಧ್ಯಮ ಆರಂಭಗೊಂಡಿರುವುದು ಊರಿಗೇ ಸಂತಸವನ್ನು ತಂದಿದೆ ಎಂದು ಹೇಳಿದರು.ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ರವರು ಮಾತನಾಡಿ ನಾವು ನಮ್ಮ ಜೀವನದಲ್ಲಿ ಸಾಮಾಜಿಕವಾಗಿ ಅಲ್ಪಸ್ವಲ್ಪ ಸಾಧನೆಗಳನ್ನು ಮಾಡಿದ್ದರೆ, ಈ ಶಾಲೆಯಲ್ಲಿ ಸಿಕ್ಕಿದ ಪ್ರಾಥಮಿಕ ಶಿಕ್ಷಣದ ಭದ್ರ ಬುನಾದಿಯಿಂದ ಸಾಧ್ಯವಾಗಿದೆ. ಈ ಶಾಲೆಯಲ್ಲಿ ನೂತನವಾಗಿ ಆಂಗ್ಲ ಮಾಧ್ಯಮ ಆರಂಭಗೊಂಡಿದ್ದು, ಸರಕಾರ ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರವನ್ನು ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಮಾಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಶಿಕ್ಷಣ ಇಲಾಖೆಯಿಂದ ಆಗಮಿಸಿದ್ದ ಸರೇಖಾ, ಸತೀಶ್ ರಾವ್, ವಿದ್ಯಾ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪೀರೇರಾ, ಸದಸ್ಯೆ ರಮಣಿ.ಡಿ.ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ, ಉಪಾಧ್ಯಕ್ಷೆ ಆಶಾಲತಾ, ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಅಮೃತಾ ಜೋಷಿ ಸ್ವಾಗತಿಸಿ, ಶೀಲಾವತಿ ವಂದಿಸಿದರು. ಚಿತ್ರಾಕ್ಷಿ ಕಾರ್ಯಕ್ರಮ ನಿರೂಪಿಸಿದರು.









