ವಿದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಭರತ್ ಡೆತ್ ಸರ್ಟಿಫಿಕೇಟ್‌ನಲ್ಲಿ ಮರಣೋತ್ತರ ಪರೀಕ್ಷೆ ವರದಿಯಿಲ್ಲ-ಮನೆ ಮಂದಿ ಆರೋಪ

0

ಪುತ್ತೂರು: 3 ತಿಂಗಳ ಹಿಂದೆ ಉದ್ಯೋಗ ನಿಮಿತ ವಿದೇಶಕ್ಕೆ ತೆರಳಿದ ಕಲ್ಲೇಗ ಅಜೇಯನಗರ ನಿವಾಸಿ ಸುಲೋಚನಾ ಅವರ ಪುತ್ರ ಭರತ್ ಕುಮಾರ್(44ವ)ರವರು ಜು.11ರಂದು ವಿದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮೃತದೇಹ ಜು.26ರಂದು ಪುತ್ತೂರು ಕಲ್ಲೇಗದ ಅಜೇಯನಗರ ಮನೆಗೆ ಬಂದಿದೆ. ಅದೇ ದಿನ ಸಂಜೆ ಪುತ್ತೂರು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರ ಡೆತ್ ಸರ್ಟಿಫಿಕೇಟ್‌ನಲ್ಲಿ ಮರಣೋತ್ತರ ಪರೀಕ್ಷೆ ವರದಿಯಿಲ್ಲ ಎಂದು ಮೃತರ ಮನೆ ಮಂದಿ ಆರೋಪಿಸಿದ್ದಾರೆ.


ಭರತ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಇದೊಂದು ಸಂಶಯಾಸ್ಪದ ಸಾವು. ನನಗೆ ನ್ಯಾಯ ಒದಗಿಸಿಕೊಂಡುವಂತೆ ಮತ್ತು ಭರತ್ ಅವರ ಮೃತ ದೇಹವನ್ನು ಸ್ವದೇಶಕ್ಕೆ ಕಳುಹಿಸಿಕೊಡುವಂತೆ ಭರತ್ ಅವರ ತಾಯಿ ಸುಲೋಚನಾ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದಂತೆ ಜು.26ಕ್ಕೆ ಅವರ ಮೃತ ದೇಹವನ್ನು ವಿಮಾನದಲ್ಲಿ ಮಂಗಳೂರಿಗೆ ಕಳುಹಿಸಿ ಅಲ್ಲಿಂದ ಆಂಬುಲೆನ್ಸ್ ಮೂಲಕ ಪುತ್ತೂರಿಗೆ ಕರೆತರಲಾಯಿತು. ಬಳಿಕ ಪುತ್ತೂರು ಚಿಕ್ಕಪುತ್ತೂರು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.


ಡೆತ್ ಸರ್ಟಿಫಿಕೇಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ವರದಿ !
ಮೃತರ ಡೆತ್ ಸರ್ಟಿಫಿಕೇಟ್‌ನಲ್ಲಿ ಭರತ್ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಡಿರುವ ವರದಿ ನೀಡಲಾಗಿದೆ ಹೊರತು ಕಾರಣ ನೀಡಿಲ್ಲ. ಈ ಕುರಿತು ಮರಣೋತ್ತರ ಪರೀಕ್ಷೆ ವರದಿ ಬರಬೇಕಾಗಿದೆ. ಆದರೂ ಭರತ್ ಅವರ ಆತ್ಮಹತ್ಯೆ ಸಂಶಯಾಸ್ಪದವಾಗಿದ್ದು, ಈ ಕುರಿತು ಭರತ್ ಅವರನ್ನು ವಿದೇಶಕ್ಕೆ ಜೊತೆಯಲ್ಲಿ ಕರೆದೊಯ್ದವರ ವಿರುದ್ಧ ದೂರು ನೀಡಲಾಗುವುದು ಎಂದು ಭರತ್ ಸಹೋದರಿ ತಿಳಿಸಿದ್ದಾರೆ.


ಕೆಲಸದಲ್ಲಿ ವಂಚನೆ ಆರೋಪ:
ಅಜೇಯ ನಗರ ನಿವಾಸಿ ಭರತ್ ಅವರು ಪಡುಬಿದ್ರೆಯ ಸಂಸ್ಥೆಯೊಂದರಲ್ಲಿ ಮರದ ಕೆತ್ತನೆ ಕೆಲಸದ ಕುರಿತು ಕಂಪ್ಯೂಟರ್ ಡಿಸೈನಿಂಗ್ ಆಗಿದ್ದರು. ಇದೇ ವಿಷಯದಲ್ಲಿ ವಿದೇಶಕ್ಕೆ ಹೋಗುವ ಅವಕಾಶವನ್ನು ಕಲ್ಪಿಸಿಕೊಂಡ ಅವರು ಮಾ.20ಕ್ಕೆ ಸಾರ್ಜದಲ್ಲಿರುವ ಟಚ್‌ವುಡ್ ಡೆಕೋರ್ ಆಂಡ್ ಪರ್ನಿಶಿಂಗ್ ಎಂಬ ಕಂಪೆನಿಯಲ್ಲಿ ಕೆಲಸಕ್ಕೆ ಮಂಗಳೂರು ಮೂಲದ ಮೋಹನ್ ಎಂಬವರ ಜೊತೆ ತೆರಳಿದ್ದರು. ಆದರೆ ಅಲ್ಲಿ ಅವರಿಗೆ ತಾನು ಕಲಿತ ಕೆಲಸ ಕೊಡದೆ ದೊಡ್ಡ ದೊಡ್ಡ ಮರವನ್ನು ಲೋಡ್ ಮಾಡುವಂತಹ ಕೂಲಿ ಕೆಲಸ ಕೊಟ್ಟಿದ್ದಾರೆಂದು ಆರೋಪಿಸಲಾಗಿದೆ. ಇದೇ ವಿಚಾರವಾಗಿ ಅವರಿಗೆ ಅಲ್ಲಿ ಮಾನಸಿಕ ಮತ್ತು ದೈಹಿಕವಾಗಿ ತೊಂದರೆ ಕೊಟ್ಟಿದ್ದರಿಂದ ಅವರು ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಿರಬಹುದು ಎಂದು ಹೇಳಲಾಗಿದೆ. ಮೃತ ಭರತ್ ಅವರು ತಾಯಿ ಸುಲೋಚನಾ, ಪತ್ನಿ ನಯನ, ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here