ಮನವಿಗೆ ಪೂರಕವಾಗಿ ಸ್ಪಂದಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್
‘ಸುದ್ದಿ’ ವಿಶೇಷ ವರದಿಗೆ ಸ್ಪಂದನೆ
ಪುತ್ತೂರು: ನೆ.ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಪೊಲೀಸ್ ಹೊರಠಾಣೆ ಕಟ್ಟಡ ಮತ್ತು ವಸತಿ ಗೃಹಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿ ಶಾಸಕ ಅಶೋಕ್ ಕುಮಾರ್ ರೈ ಅವರು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ನೆ.ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಪೊಲೀಸ್ ಹೊರಠಾಣೆಯು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಠಾಣಾ ಕಟ್ಟಡ ನಿರ್ಮಾಣಕ್ಕೆ 50 ಸೆಂಟ್ಸ್ ಜಮೀನು ಮಂಜೂರುಗೊಂಡಿರುತ್ತದೆ. ನೆ.ಮುಡ್ನೂರು ಗ್ರಾಮವಿ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು ಜನಸಂಖ್ಯೆ ಮತ್ತು ಹೆಚ್ಚು ವ್ಯಾಪಾರ ವಾಣಿಜ್ಯ ವ್ಯವಹಾರಗಳನ್ನು ಹೊಂದಿರುವ ಪ್ರದೇಶವಾಗಿದೆ. ಅಲ್ಲದೇ ಅಲ್ಲಿ ಪಂಚಮುಖಿ ಆಂಜನೇಯ ದೇವಾಲಯವಿದ್ದು ಹೆಚ್ಚಿನ ಪ್ರವಾಸಿಗರು ದೇಶ ವಿದೇಶಗಳಿಂದ ಆಗಮಿಸುತ್ತಿರುತ್ತಾರೆ. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿರುವ ಪೊಲೀಸ್ ಹೊರ ಠಾಣೆಯು ತೀರಾ ಸಣ್ಣದಾಗಿದ್ದು ಪೊಲೀಸರಿಗೆ ಕಾರ್ಯ ಚಟುವಟಿಕೆಗೆ ಸ್ಥಳಾವಕಾಶ ಇಲ್ಲದೇ ತೊಂದರೆಯುಂಟಾಗಿದೆ. ಆದ್ದರಿಂದ ಹೊರಠಾಣಾ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗದಲ್ಲಿ ಹೊಸ ಪೊಲೀಸ್ ಹೊರಠಾಣೆ ಕಟ್ಟಡ ಮತ್ತು ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿರುವ ಮನವಿಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಹೃಹ ಸಚಿವರಿಗೆ ಸಲ್ಲಿಸಿದ್ದಾರೆ. ಮನವಿಗೆ ಸಕಾರಾತ್ಮಕವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸ್ಪಂದಿಸಿದ್ದಾರೆ.
ಈಶ್ವರಮಂಗಲ ಪೊಲೀಸ್ ಹೊರಠಾಣೆಯ ಅವ್ಯವಸ್ಥೆ ಬಗ್ಗೆ ಜು.22ರ ಸುದ್ದಿ ಪತ್ರಿಕೆ ಮತ್ತು ವೆಬ್‌ಸೈಟ್ ‘ಸ್ವಂತ ಜಾಗವಿದ್ದರೂ ಕಟ್ಟಡ ಭಾಗ್ಯವಿಲ್ಲ, ಅತಂತ್ರ ಸ್ಥಿತಿಯಲ್ಲಿ ಈಶ್ವರಮಂಗಲ ಪೊಲೀಸ್ ಹೊರಠಾಣೆ’ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಅಲ್ಲಿನ ಹೊರಠಾಣೆಗೆ ಹೊಸ ಕಟ್ಟಡ ವಿಚಾರವಾಗಿ ಗೃಹ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಆ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ‘ಸುದ್ದಿ’ಗೆ ಹೇಳಿಕೆಯನ್ನೂ ನೀಡಿದ್ದರು. ಅದರಂತೆ ಇದೀಗ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಈಶ್ವರಮಂಗಲದಲ್ಲಿ ಪೊಲೀಸ್ ಹೊರಠಾಣೆಗೆ ನೂತನ ಕಟ್ಟಡ ಮತ್ತು ವಸತಿ ಗೃಹ ನಿರ್ಮಾಣವಾಗುವ ಆಶಾಭಾವನೆ ಮೂಡಿದೆ.