ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಹೊಸ ಹೆಜ್ಜೆ – ಸುದಾನ ಪದವಿ ಪೂರ್ವ ಕಾಲೇಜು ಉದ್ಘಾಟನೆ

0

ಪುತ್ತೂರು: ನಮಗೆ ಒಗ್ಗಟ್ಟು, ಏಕತೆ, ಪ್ರೀತಿ, ವಿಶ್ವಾಸದ ಸಮಾಜ ಬೇಕೇ ವಿನಹ ಕೋಪದ, ದ್ವೇಷದ ಸಮಾಜ ಬೇಡ. ಎಲ್ಲಾ ಕ್ಷೇತ್ರಗಳನ್ನು ಸುಧಾರಿಸಲು ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಬೇಕಾದರೆ ಅವರಲ್ಲಿ ಶಿಕ್ಷಣದ ಜೊತೆಗೆ, ಉತ್ತಮ ವ್ಯಕ್ತಿತ್ವ, ದೇವರ ಭಯ ಜೊತೆಗೆ ತಾಳ್ಮೆಯನ್ನು ಮೈಗೂಡಿಸುವಂತಾಗಬೇಕು ಎಂದು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.

ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಹೊಸ ಹೆಜ್ಜೆಯನ್ನಿರಿಸಿದ ಸುದಾನ ಸಮೂಹ ಶಿಕ್ಷಣ ಸಂಸ್ಥೆಯು ಸುದಾನ ಕ್ಯಾಂಪಸ್ಸಿನಲ್ಲಿ ‘ಸುದಾನ ಪದವಿ ಪೂರ್ವ ಕಾಲೇಜ್’ ಅನ್ನು ಪ್ರಾರಂಭಿಸಿದ್ದು, ಜು.27 ರಂದು ಸಂಸ್ಥೆಯ ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ಜರಗಿದ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ, ಹಿಂಗಾರ ಅರಳಿಸಿ ಮಾತನಾಡಿದರು. ನಮ್ಮನ್ನು ಬೈದಾಗ ಕೂಡಲೇ ಅವರನ್ನು ಬೈಯ್ಯುವುದು ವ್ಯಕ್ತಿತ್ವವಲ್ಲ. ಆದರೆ ಬೈದವರ ಬೆನ್ನು ತಟ್ಟಿ ಒಳ್ಳೆಯವರಾಗು ಎಂದು ಹೇಳಿ ಮುಂದೆ ಹೋಗುವುದೇ ನಿಜವಾದ ವ್ಯಕ್ತಿತ್ವ. ಕೇವಲ ಬುದ್ಧಿವಂತ ಎನಿಸಿಕೊಂಡರೆ ಯಶಸ್ಸು ಲಭಿಸದು. ನಮ್ಮಲ್ಲಿ ಐಕ್ಯೂ ಜೊತೆಗೆ ಮಾನವೀಯತೆ, ಸೋದರತೆ, ಸಮಾನತೆಯನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಸೆಲಿ ಪೊಟೋ ತೆಗೆದು ಸೆಲಿಶ್ ಎನಿಸಿಕೊಳ್ಳುವ ಬದಲು ಮತ್ತೊಬ್ಬರ ಕಷ್ಟ-ಸುಖದಲ್ಲಿ ಭಾಗಿಗಳಾಗೋಣ ಎಂದರು. ಪಿಯುಸಿ ಶಿಕ್ಷಣ ಎಂಬುದು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ ಕಾಲಘಟ್ಟವಾಗಿದ್ದು, ಪ್ರಾಮಾಣಿಕತೆಯಿಂದ, ಬದ್ಧತೆಯಿಂದ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಕಂಡುಕೊಳ್ಳುವಂತಾಗಬೇಕು. ಹೆತ್ತವರು ತಮ್ಮ ಅಮೂಲ್ಯ ಸಮಯವನ್ನು ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಮೀಸಲಿಡಬೇಕು. ಶಿಕ್ಷಣದೊಂದಿಗೆ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ವಿದ್ಯಾರ್ಥಿಗಳು ಹೊಂದುವಂತಾಗಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿ ಶುಭ ಹಾರೈಸಿದರು.

ಒಳ್ಳೆಯ ಶಿಕ್ಷಣ ಕೊಡುವುದೇ ವಿದ್ಯಾಸಂಸ್ಥೆಯ ಉದ್ಧೇಶ-ಜಯಣ್ಣ: ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಗುರಿ ಇದ್ದಾಗ ಸಾಧನೆ ಮಾಡಲು ಸಾಧ್ಯ. ಸೋಲು ನಮ್ಮ ಮುಂದಿದ್ದರೂ ಧೃತಿಗೆಡದೆ ಗೆಲುವು ಕಾಣುವ ಪ್ರಯತ್ನ ವಿದ್ಯಾರ್ಥಿಗಳಲ್ಲಿರಬೇಕು. ನಾವು ಪರಸ್ಪರರನ್ನು ಗೌರವದಿಂದ ಕಂಡಾಗ ನಮಗೆ ಗೌರವ ಪ್ರಾಪ್ತಿಯಾಗುವುದು. ನಮ್ಮಲ್ಲಿ ಮನಸ್ಸು ಒಳ್ಳೆದಿದ್ದರೆ ಯಾವುದೇ ಶಾಪವು ಆಶೀರ್ವಾದವಾಗಿ ಮಾರ್ಪಡುವುದು. ಶಿಕ್ಷಣ ಸಂಸ್ಥೆ ಎನ್ನುವುದು ದೇವಸ್ಥಾನವಿದ್ದಾಗೆ. ಇಲ್ಲಿ ಬಡವ, ಬಲ್ಲಿದ ಯಾರೂ ಇಲ್ಲ. ಒಳ್ಳೆಯ ಶಿಕ್ಷಣ ಕೊಡುವುದೇ ವಿದ್ಯಾಸಂಸ್ಥೆಯ ಉದ್ಧೇಶವಾಗಿದೆ ಎಂದರು.

ಮಕ್ಕಳನ್ನು ನೈತಿಕವಾಗಿ, ಮಾನವೀಯತೆಯ ಪ್ರತೀಕವಾಗಿ ಬೆಳೆಸಬೇಕು-ರೆ|ವಿಜಯ ಹಾರ್ವಿನ್: ಅಧ್ಯಕ್ಷತೆ ವಹಿಸಿದ್ದ ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಅಧ್ಯಕ್ಷ ರೆ|ವಿಜಯ ಹಾರ್ವಿನ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಸುದಾನದಲ್ಲಿ ಪಿಯು ಕಾಲೇಜು ಆರಂಭಿಸಬೇಕು ಎನ್ನುವ ಅಭಿಪ್ರಾಯ ಪೋಷಕರಿಂದ ವ್ಯಕ್ತವಾಗಿತ್ತು. ಮಾನವೀಯತೆಯ ಸ್ವರೂಪ ಸ್ಪೀಕರ್ ಖಾದರ್‌ರವರಾಗಿದ್ದಾರೆ ಎಂಬುದಕ್ಕೆ ಇಂದಿನ ಅವರ ಅರ್ಥಗರ್ಭಿತ ಮಾತುಗಳೇ ಸಾಕ್ಷಿ. ಮಕ್ಕಳನ್ನು ನಾವು ನೈತಿಕವಾಗಿ, ಮಾನವೀಯತೆಯ ಪ್ರತೀಕವಾಗಿ ಬೆಳೆಸಬೇಕು. ಮಕ್ಕಳು ದೇವರು ಕೊಟ್ಟ ವರ. ಆ ವರವನ್ನು ಅರಳಿಸಿದಾಗ ಸಮಾಜವನ್ನು ಅರಳಿಸುವಂತೆ ಮಾಡುತ್ತದೆ ಎಂದರು.

ಹಣ ಮಾಡುವುದು ಮುಖ್ಯವಲ್ಲ, ಪರಸ್ಪರರನ್ನು ಪ್ರೀತಿಸುವುದು ಮುಖ್ಯ-ಶಕುಂತಳಾ ಶೆಟ್ಟಿ: ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ ಮಾತನಾಡಿ, ನಾನು ಶಾಸಕಿಯಾಗಿದ್ದ ಸಂದರ್ಭದಲ್ಲಿ ಮೂವರು ಸ್ಪೀಕರುಗಳನ್ನು ಕಂಡಿದ್ದೇನೆ. ಅದರಲ್ಲಿ ಅಽವೇಶನದಲ್ಲಿ ಹೊಸ ರೂಪವನ್ನು ಕೊಟ್ಟವರು ಸ್ಪೀಕರ್ ಖಾದರ್‌ರವರು. ಯಾರೇ ವ್ಯಕ್ತಿಯಾಗಲಿ, ಅವರನ್ನು ತಾಳ್ಮೆಯಿಂದ ಮಾತನಾಡಿಸುವ ಗುಣ ಖಾದರ್‌ರವರದ್ದು. ಸುದಾನ ಶಾಲೆಯು ಎಲ್ಲರನ್ನು ಒಂದು ಎಂಬ ಭಾವನೆಯಂತೆ ಒಗ್ಗೂಡಿಸುತ್ತದೆ. ರಾಷ್ಟ್ರದಲ್ಲಿಯೇ ಒಳ್ಳೆಯ ವ್ಯವಸ್ಥೆಯಿರುವ ಈ ವಿದ್ಯಾದೇಗುಲದಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯವಿದೆ. ಹಣ ಮಾಡುವುದು ಮುಖ್ಯವಲ್ಲ, ಪರಸ್ಪರರನ್ನು ಪ್ರೀತಿಸುವುದು ಮುಖ್ಯ. ವಿದ್ಯಾರ್ಥಿಗಳು ಕಲಿತು ಉನ್ನತ ಹುದ್ದೆಯನ್ನು ಸಂಪಾದಿಸಿ ಸಮಾಜಕ್ಕೆ ಹಾಗೂ ಸಂಸ್ಥೆಗೆ ಹೆಸರನ್ನು ತರುವವರಾಗಿ ಎಂದರು.

ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪಿಯುಸಿ ಉತ್ತಮ ಕಾಲಘಟ್ಟವಾಗಿದೆ-ಸವಣೂರು ಸೀತಾರಾಮ ರೈ: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಪುತ್ತೂರು ಬೆಳೆಯುತ್ತಿರುವ ನಗರಕ್ಕೆ ಮೆಡಿಕಲ್ ಕಾಲೇಜು ಹಾಗೂ ಗ್ರಾಮೀಣ ಜಿಲ್ಲೆಯಾಗಬೇಕು ಎನ್ನುವ ಎರಡು ವ್ಯವಸ್ಥೆಗಳು ಆಗಬೇಕಾದರೆ ಇಲ್ಲಿನ ವಿದ್ಯಾಸಂಸ್ಥೆಗಳು ಬೆಳೆಯುವುದೂ ಅಗತ್ಯ. ಸ್ಪೀಕರ್ ಖಾದರ್‌ರವರ ಮಾತುಗಳು ವಿದ್ಯಾರ್ಥಿಯಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪಿಸಲು ಪಿಯುಸಿ ಉತ್ತಮ ಕಾಲಘಟ್ಟವಾಗಿದೆ. ಪ್ರಥಮ ಪಿಯುಸಿಯ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತೀರ್ಣಗೊಂಡಾಗ ಇದು ಮುಂದೆ ಬರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ ಎಂದರು.
ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಹಾಗೂ ಕಾಲೇಜು ಸಂಚಾಲಕ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿ, ಪ್ರಾಂಶುಪಾಲ ಸುಪ್ರೀತ್ ಕೆ.ಸಿ ವಂದಿಸಿದರು. ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕೋಶಾಽಕಾರಿ ಆಸ್ಕರ್ ಆನಂದ್, ಉಪನ್ಯಾಸಕರಾದ ಮುಕುಂದಕೃಷ್ಣ, ರಮ್ಯ, ಕಸ್ತೂರಿರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಉಪನ್ಯಾಸಕರಾದ ಆಂಗ್ಲ ವಿಭಾಗದ ಕ್ಯಾರಲ್ -ರ್ನಾಂಡೀಸ್ ಹಾಗೂ ಗಣಕ ವಿಜ್ಞಾನ ವಿಭಾಗದ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಆಡಳಿತ ಸಿಬ್ಬಂದಿ ಸಹಕರಿಸಿದರು.

ಭಾರತ ದೇಶವು ಮಾನವೀಯತೆ, ಕರುಣೆಯಿಂದ ನಡೆಯುವ ದೇಶವಾಗಿದೆ..

ಭಾರತ ದೇಶದ ಸಂವಿಧಾನ ವಿಶ್ವದ ಯಾವುದೇ ದೇಶದಲ್ಲಿ ಸಿಗಲು ಸಾಧ್ಯವಿಲ್ಲ. ಎಲ್ಲಾ ಜಾತಿ, ಮತ, ವರ್ಗದವರೊಂದಿಗೆ ಒಂದೇ ಜಾತಿಯ ಮಕ್ಕಳಂತೆ ಬಾಳುವ ದೇಶ ನಮ್ಮ ಭಾರತ. ಭಾರತ ದೇಶ ವಿಶ್ವದಲ್ಲಿ ನಂಬರ್ ವನ್ ಎನಿಸಿಕೊಳ್ಳಬೇಕಾದರೆ ವಿಧಾನಸಭೆಯಲ್ಲಿ, ಪಾರ್ಲಿಮೆಂಟಿನಲ್ಲಿ, ಎ.ಸಿ ರೂಮಲ್ಲಿ ಕುಳಿತು ಮಾತನಾಡಿದರೆ ಸಾಧ್ಯವಾಗುವುದಿಲ್ಲ. ಅದು ಸಾಧ್ಯವಾಗಬೇಕಾದರೆ ಶಿಕ್ಷಣ ಸಂಸ್ಥೆಗಳಿಂದ ಸಿಗುವ ಮೌಲ್ಯಯುತ ಶಿಕ್ಷಣದಿಂದ ಮಾತ್ರ. ಅದುವೇ ನಿಜವಾದ ದೇಶಪ್ರೇಮ. ಅಮೇರಿಕದಂತಹ ದೇಶಗಳು ರೆವಿನ್ಯೂ, ಟ್ಯಾಕ್ಸ್‌ನಲ್ಲಿ ನಡೆಯುವಂತಹ ದೇಶಗಳಾದರೆ ಭಾರತ ದೇಶವು ಮಾನವೀಯತೆಯ, ಕರುಣೆಯಿಂದ ನಡೆಯುವ ದೇಶವಾಗಿದೆ. ಭಾರತ ದೇಶವು ವಿಶ್ವಕ್ಕೇ ಮಾದರಿಯಾಗಬೇಕಾದರೆ ಯುವಜನಾಂಗ ಸಮಾಜದಲ್ಲಿ ಮುಂದೆ ಬರಬೇಕು.
-ಯು.ಟಿ ಖಾದರ್, ಸ್ಪೀಕರ್, ಕರ್ನಾಟಕ ವಿಧಾನಸಭೆ

LEAVE A REPLY

Please enter your comment!
Please enter your name here