ಉಪ್ಪಿನಂಗಡಿ: ಬಿಜೆಪಿ ಕಾರ್ಯಕರ್ತನೋರ್ವನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಪ್ರವೀಣ (26) ಹಲ್ಲೆಗೊಳಗಾದವರು. ಇವರು ಜು.28ರಂದು ಕಣಿಯೂರು ಕಸಬಾ ಎಂಬಲ್ಲಿರುವ ಅಂಗಡಿಯ ಸಿಟೌಟ್‌ನಲ್ಲಿ ಕುಳಿತ್ತಿದ್ದ ಸಂದರ್ಭ ಅಲ್ಲಿಗೆ ಮಾರುತಿ ಶಿಫ್ಟ್ ಕಾರಿನಲ್ಲಿ ಬಂದ ಅವರ ಪರಿಚಯದ ರಾಧಾಕೃಷ್ಣ, ಪ್ರಜ್ವಲ್, ಕಿರಣ್ ಶಿಶಿಲ ಹಾಗೂ ಪರಿಚಯವಿಲ್ಲದ 5 ಜನರ ತಂಡ ಬಂದಿದ್ದು, ಈ ಪೈಕಿ ಪ್ರಜ್ವಲ್ ಎಂಬಾತ ಪ್ರವೀಣ್ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು, ಮತ್ತೋರ್ವ ಆರೋಪಿ ಕಿರಣ್ ಎಂಬಾತ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ ಆತನೊಂದಿಗೆ ಇತರ ಆರೋಪಿಗಳಾದ ಪ್ರಜ್ವಲ್, ರಾಧಾಕೃಷ್ಣ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಇನ್ನಿಬ್ಬರು ಕೈಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಹಲ್ಲೆಗೊಳಗಾದ ಪ್ರವೀಣ್ ಅವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಕಲಂ: 189(2), 191(2), 191(3),, 352,115(2), 118(1), 329(4), 351(2) ಜೊತೆಗೆ 190 ಬಿಎನ್‌ಎಸ್ 2023ರಂತೆ ಪ್ರಕರಣ ದಾಖಲಿಸಲಾಗಿದೆ.
ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ರಾಧಾಕೃಷ್ಣ ಎಂಬವರ ಪತ್ನಿ ಕಣಿಯೂರು ಗ್ರಾಮದ ಬರಮೇಲು ನಿವಾಸಿ ಪ್ರಿಯಾಂಕ ಪ್ರತಿ ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದ್ದು, ಆರೋಪಿ ಪ್ರವೀಣ್ ಹಾಗೂ ಇತರ ಐದು ಜನರ ತಂಡ ಜು.27ರಂದು ರಾತ್ರಿ 8 ಗಂಟೆಯ ಸುಮಾರಿಗೆ ಪ್ರಿಯಾಂಕ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿದ್ದು, ಪ್ರವೀಣ ಎಂಬಾತ ಅವ್ಯಾಚ್ಯ ಶಬ್ದಗಳಿಂದ ಬೈದು ತನ್ನ ಗಂಡನನ್ನು ಮನೆಯ ಹೊರಗೆ ಕರೆದಿದ್ದಾನೆ. ಈ ಸಂದರ್ಭ ತನ್ನ ಗಂಡ ಯಾಕೆ ನನಗೆ ಬೈಯುತ್ತಿದ್ದೀರಿ ಎಂದು ಕೇಳಿದ್ದಕ್ಕೆ ನೀನು ಯಾರು ಕೇಳಲು ಎಂದು ಪ್ರವೀಣ ನನ್ನ ಗಂಡನಿಗೆ ಬೈದು ನನ್ನ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾನೆ. ಇದಕ್ಕೆ ನಾನು ಆಕ್ಷೇಪಿಸಿದಾಗ ಆತ ನನ್ನ ಬಲ ತೋಳಿಗೆ ಕೈ ಹಾಕಿ ಹಿಡಿದು ನನ್ನನ್ನು ಎಳೆದಿದ್ದಾನೆ. ಆಗ ನನ್ನ ಗಂಡ ರಾಧಾಕೃಷ್ಣ ಅವರು ತಡೆದಿದ್ದು, ಆಗ ಪ್ರವೀಣ ಹಾಗೂ ಆತನ ಜೊತೆಗಿದ್ದ ಇತರರು ಸೇರಿ ನನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮ ಬೊಬ್ಬೆ ಕೇಳಿ ನೆರೆಯ ರತ್ನರವರು ಓಡಿ ಬಂದಾಗ ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಹೋಗಿದ್ದಾರೆ. ಹಲ್ಲೆಯಿಂದ ನೋವು ಉಲ್ಭಣಗೊಂಡ ಹಿನ್ನೆಲೆಯಲ್ಲಿ ಜು.28ರಂದು ನಾನು ಹಾಗೂ ನನ್ನ ಗಂಡ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ ಎಂದು ಜು.29ರಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 189(2),191(1),329(3),74,115(2), 351(2), ಜೊತೆಗೆ 190 ಬಿಎನ್‌ಎಸ್ 2023ರಡಿ ಪ್ರಕರಣ ದಾಖಲಾಗಿದೆ.