ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕರ್ತವ್ಯ ನಿರ್ವಹಿಸಿದ್ದ ಸೀತಾರಾಮ ಗೌಡ ಕೆ.ಯವರು ಜು.31ರಂದು ನಿವೃತ್ತಿಹೊಂದಲಿದ್ದಾರೆ.
ಬಲ್ನಾಡು ಗ್ರಾಮ ಕಾಂತಿಲ ಬಾಬು ಗೌಡ ಮತ್ತು ಉಮ್ಮಕ್ಕ ದಂಪತಿ ಪುತ್ರನಾಗಿರುವ ಸೀತಾರಾಮ ಗೌಡರವರು 1983ರಲ್ಲಿ ಸಂಘದ ಉಜ್ರುಪಾದೆ ಶಾಖೆಗೆ ಸೇಲ್ಸ್‌ಮೆನ್ ಆಗಿ ನೇಮಕಗೊಂಡಿದ್ದರು. 1994ರಲ್ಲಿ ಪದೋನ್ನತಿ ಪಡೆದು ಕೇಂದ್ರ ಕಚೇರಿಯಲ್ಲಿ ಗುಮಾಸ್ತರಾಗಿ, ಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸಿದ್ದರು. 2014ರಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಮುಂಭಡ್ತಿ ಪಡೆದು 10 ವರ್ಷಗಳ ಕಾಲ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸೇರಿದಂತೆ ಒಟ್ಟು 41 ವರ್ಷಗಳ ಕಾಲ ಸಹಕಾರಿ ಸಂಘದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಗರೀಷ್ಠ ಸಾಲ ವಸೂಲಾತಿಯೊಂದಿಗೆ ಸಂಘವು ಅತ್ಯಧಿಕ ಲಾಭಗಳಿಸಿ, ಸತತವಾಗಿ ಎ ಶ್ರೇಣಿಯಲ್ಲಿ ಮುನ್ನಡೆಯುವಲ್ಲಿ ಕೊಡುಗೆ ನೀಡಿರುತ್ತಾರೆ. ಇವರ ಅವಧಿಯಲ್ಲಿ ಎರಡು ಬಾರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಗಳಿಸಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘದ ಉಜ್ರುಪಾದೆ ಶಾಖೆಗೆ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಾಣ, ಸಂಘದ ಕೇಂದ್ರ ಕಚೇರಿಗೆ ಜಾಗ ಖರೀದಿಸಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ.
ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ, ಬಲ್ನಾಡು ಉಜ್ರುಪಾದೆ ಯುವಕ ಮಂಡಲದ ಅಧ್ಯಕ್ಷರಾಗಿ, ಬಲ್ನಾಡು ಹಿ.ಪ್ರಾ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿರುವ ಇವರು ಪ್ರಸ್ತುತ ಒಕ್ಕಲಿಗ ಸ್ವ ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾಗಿರುತ್ತಾರೆ. ನಾಟಕ ಕಲಾವಿದರಾಗಿ, ನಾಟಕ ರಚನೆ ಮಾಡುತ್ತಿದ್ದ ಸೀತಾರಾಮ ಗೌಡರವರು ‘ಪ್ರೀತಿ ವಾ ರೀತಿ’ ಹಾಗೂ ‘ನೆತ್ತೆರ‍್ದ ಪೊರ್ತು’ ಎಂಬ ತುಳು ನಾಟಕಗಳನ್ನು ರಚಿಸಿ, ನಿರ್ದೇಶಿಸಿರುತ್ತಾರೆ. ಹಲವು ತುಳು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ.
ಪತ್ನಿ ದೇವಿಕಾ, ಪುತ್ರಿಯರಾದ ಬೆಂಗಳೂರಿನಲ್ಲಿ ರಿಸರ್ಚ್ ಎಸೋಸಿಯೇಟ್ ಆಗಿರುವ ಸ್ಪರ್ಶಾ ಕೆ.ಎಸ್., ಮಂಗಳೂರು ಶ್ರೀನಿವಾಸ ಕಾಲೇಜಿನಲ್ಲಿ ಏವಿಯೇಷನ್ ಕೋರ್ಸ್ ಮಾಡುತ್ತಿರುವ ಪ್ರಾಪ್ತಿ ಕೆ.ಎಸ್.ರವರೊಂದಿಗೆ ಬಲ್ನಾಡು ಕಾಂತಿಲದಲ್ಲಿ ವಾಸ್ತವ್ಯವಿದ್ದಾರೆ.
ಜು.31ರಂದು ಬೀಳ್ಕೊಡುಗೆ
ಬೆಳಿಯೂರುಕಟ್ಟೆಯಲ್ಲಿರುವ ಸಂಘದ ನೂತನ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಜು.31ರಂದು ನಡೆಯಲಿರುವ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಸೀತಾರಾಮ ಗೌಡರವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆಯು ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.