ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಜು.31ರಂದು ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪುತ್ತೂರಿನ ಅನುರಾಗ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೊರವೆ ರಾಮಾಯಣ ಮಹಾಕಾವ್ಯದಿಂದ ಪಾದುಕಾ ಪ್ರದಾನ ಎಂಬ ಕಥಾ ಭಾಗವನ್ನು ಆಯ್ದುಕೊಳ್ಳಲಾಯಿತು. ಗಮಕಿ ಜಯಂತಿ ಹೆಬ್ಬಾರ್ ಗಮಕ ವಾಚನಗೈದರು. ಜಯಲಕ್ಷ್ಮಿ ವಿ.ಭಟ್ ಗಮಕ ನಿರೂಪಣಾ ವ್ಯಾಖ್ಯಾನಗೈದರು.
ಕರ್ನಾಟಕ ಸಂಘದ ಅಧ್ಯಕ್ಷ, ನ್ಯಾಯವಾದಿ ಪುರಂದರ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ಪ್ರೊ. ವೇದವ್ಯಾಸ ಸ್ವಾಗತಿಸಿದರು. ಕಿರು ಕಾಣಿಕೆ ನೀಡಿ,ಶಾಲು ಹೊದಿಸಿ ಕಲಾವಿದರನ್ನು ಗೌರವಿಸಲಾಯಿತು. ಗೌರವಾಧ್ಯಕ್ಷ ಭಾಸ್ಕರ ಬಾರ್ಯ, ಖಜಾಂಚಿ ವೀಣಾ ಸರಸ್ವತಿ, ಸದಸ್ಯೆ ಪ್ರೇಮಾ ನೂರಿತ್ತಾಯ ಉಪಸ್ಥಿತರಿದ್ದರು.ನಿವೃತ್ತ ಪ್ರಾಂಶುಪಾಲ ಮಹಾಲಿಂಗ ಭಟ್,ವಂದಿಸಿದರು. ಕಾರ್ಯದರ್ಶಿ ಶಂಕರಿ ಶರ್ಮ ಕಾರ್ಯಕ್ರಮ ನಿರೂಪಿಸಿದರು.