ಸ್ಥಳೀಯ ಮನೆಯವರು ಆತಂಕದಲ್ಲಿ
ಕ್ರಮ ವಹಿಸುವಂತೆ ಸುಪ್ರೀತ್ ಕಣ್ಣರಾಯರಿಂದ ತಹಶೀಲ್ದಾರ್, ತಾ.ಪಂಗೆ ಮನವಿ
ಪುತ್ತೂರು: ಮುಂಡೂರು ಗ್ರಾಮದ ಕಂಪ-ಹಿಂದಾರು ರಸ್ತೆ ಬದಿಯ ಗುಡ್ಡದ ಮೇಲೆ ಇರುವ ಕುಡಿಯುವ ನೀರಿನ ಟ್ಯಾಂಕ್ ಅಪಾಯಕಾರಿ ಸ್ಥಿತಿಯಲ್ಲಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಸದ್ರಿ ಟ್ಯಾಂಕ್ ನ ಸಮೀಪ ಸುಮಾರು 20 ಮನೆಗಳಿದ್ದು ಪ್ರಾಕೃತಿಕ ವಿಕೋಪದಿಂದ ಅಲ್ಲಲ್ಲಿ ಅನಾಹುತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಮನೆಯವರು ಭಯಭೀತಗೊಂಡಿದ್ದಾರೆ. ಟ್ಯಾಂಕ್ ನ್ನು ತಕ್ಷಣವೇ ತೆರವು ಮಾಡಬೇಕು ಎನ್ನುವ ಆಗ್ರಹ ಸ್ಥಳೀಯವಾಗಿ ಕೇಳಿ ಬಂದಿದೆ.
ಈ ಬಗ್ಗೆ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಪ್ರೀತ್ ಕಣ್ಣರಾಯ ಅವರು ತಾಪಂ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅನೇಕ ಕಡೆಗಳಲ್ಲಿ ಗುಡ್ಡ ಕುಸಿದು ಅನೇಕ ಅನಾಹುತಗಳು ಸಂಭವಿಸಿದ್ದು ನಮ್ಮ ಕಣ್ಣಮುಂದೆಯೇ ಇದೆ. ಹಾಗಿರುವಾಗ ಇಲ್ಲಿನ ನೀರಿನ ಟ್ಯಾಂಕನ್ನು ಸಂಭಾವ್ಯ ಅಪಾಯ ಸಂಭವಿಸುವ ಮುನ್ನ ಇಲ್ಲಿಂದ ಸ್ಥಳಾಂತರಿಸುವುದು ಅಗತ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ತುರ್ತು ಕ್ರಮ ವಹಿಸಬೇಕೆಂದು ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಪ್ರೀತ್ ಕಣ್ಣರಾಯ ಆಗ್ರಹಿಸಿದ್ದಾರೆ
ಗ್ರಾಮ ಆಡಳಿತಾಧಿಕಾರಿ ಭೇಟಿ:
ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮುಂಡೂರು ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.