ಕಾಣಿಯೂರು: ವಿದ್ಯಾರ್ಥಿಗಳು ಒಳ್ಳೆಯ ಗೆಳೆಯರೊಂದಿಗೆ ಬೆಳೆಯುವುದರ ಜೊತೆಗೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸ್ವಾಸ್ಥ್ಯ ಸದೃಡ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಹೇಳಿದರು. ಅವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಇವುಗಳ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಆದರ್ಶ ವ್ಯಕ್ತಿತ್ವದೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣರವರು ಮಾತನಾಡಿ, ವಿದ್ಯಾರ್ಥಿಗಳು ಕುಟುಂಬದ ಕಣ್ಮಣಿಗಳಾಗಿದ್ದು, ಹಿರಿಯರ ಅಭಿಲಾಷೆಯಂತೆ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಚಟ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಮಾತನಾಡಿ, ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದರು. ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರು, ನ್ಯಾಯವಾದಿ ಮಹೇಶ್ ಕೆ. ಸವಣೂರು ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಆಂಗ್ಲ ಮಾಧ್ಯ ವಿಭಾಗದ ಮುಖ್ಯಗುರು ನಾರಾಯಣ್ ಭಟ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯಗುರು ವಿನಯ ವಿ ಶೆಟ್ಟಿ ಶುಭಹಾರೈಸಿದರು. ಸೇವಾಪ್ರತಿನಿಧಿಗಳಾದ ಕಾವ್ಯ ಕಾಣಿಯೂರು, ಕಾವ್ಯ ಚಾರ್ವಾಕ, ಹಾಗೂ ಸಂಸ್ಥೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಾಶಿ ಕೆ.ಸಿ ಪ್ರಾರ್ಥಿಸಿದರು. ಸೇವಾಪ್ರತಿನಿಧಿ ಮನೋರಮಾ ವಂದಿಸಿದರು. ಶಿಕ್ಷಕಿ ಸುಶ್ಮಾ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಭವಾನಿ ಸಿ ಸಹಕರಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಪ್ರತಿಜ್ಞಾ ವಿಧಿ ಸ್ವೀಕಾರ:
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ ಅವರು ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.