ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ವಿದ್ಯುತ್ ಪರಿವರ್ತಕದ ಬೇಡಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈಯವರು ಈಡೇರಿಸಿದ್ದರೂ, ಬಳಿಕ ಅದನ್ನು ಅಳವಡಿಸುವುವಲ್ಲಿ ಎದುರಾದ ಹಲವು ವಿಘ್ನಗಳು ಕೂಡಾ ಈಗ ಪರಿಹಾರದ ಹಂತ ತಲುಪಿದೆ. ಇನ್ನು ವಿದ್ಯುತ್ ಪರಿವರ್ತಕಕ್ಕೆ ವಿದ್ಯುತ್ ಸಂಪರ್ಕ ಮಾತ್ರ ಬಾಕಿಯಿದ್ದು, ಅದು ಆದಾಗ ಇಲ್ಲಿನವರ ಬಹುಕಾಲದ ಕನಸು ನನಸಾಗುವುದರೊಂದಿಗೆ ಲೋ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಈ ಹಿಂದೆ ಮೆಸ್ಕಾಂನ ಮಾಣಿ ಶಾಖೆಯವರು ಬಿಳಿಯೂರು ಗ್ರಾಮದಲ್ಲಿ ಅಳವಡಿಸಿದ 63 ಕೆ.ವಿ. ವಿದ್ಯುತ್ ಪರಿವರ್ತಕದಿಂದ ಬಿಳಿಯೂರು ಮತ್ತು ನೆಕ್ಕಿಲಾಡಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿತ್ತು. ಈ ವಿದ್ಯುತ್ ಪರಿವರ್ತಕದಲ್ಲಿ ಲೋಡ್ ಹೆಚ್ಚಾದುದರಿಂದ ಬೇಸಿಗೆಯಲ್ಲಿ ಲೋ ವೋಲ್ಟೇಜ್‌ನ ಸಮಸ್ಯೆ ಎದುರಾಗಿತ್ತು. ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ಇದಾಗಿದ್ದು, ಕರ್ವೇಲು ಪರಿಸರದಲ್ಲಿ ಬೇಸಿಗೆ ಕಾಲದಲ್ಲಿ 135 ರಿಂದ 120 ವೋಲ್ಟೇಜ್ ಮಾತ್ರ ಸಿಗುತ್ತಿತ್ತು. ಲೋ ವೋಲ್ಟೆಜ್ ಸಂದರ್ಭ ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್‌ಗಳೂ ಆನ್ ಆಗದ ಸ್ಥಿತಿಯಿತ್ತು.
ಟಿ.ಸಿಗೆ ಬೇಡಿಕೆ:
ಹಲವಾರು ವರ್ಷಗಳಿಂದ ಕರ್ವೇಲು ಭಾಗದವರು ಇಲ್ಲಿಗೆ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕಕ್ಕೆ ಬೇಡಿಕೆ ಸಲ್ಲಿಸುತ್ತಲೇ ಇದ್ದರು. ಇಲ್ಲಿನವರು ಎದುರಿಸುತ್ತಿರುವ ಲೋ ವೋಲ್ಟೇಜ್ ಸಮಸ್ಯೆಯನ್ನು ಹಾಗೂ ಇಲ್ಲಿಗೊಂದು ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ಮಂಜೂರುಗೊಳಿಸಲು 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಅವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಮಾಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಉಪ್ಪಿನಂಗಡಿ ಮೆಸ್ಕಾಂನ ಮೂಲಕ ನೆಕ್ಕಿಲಾಡಿ ಗ್ರಾಮದ ಕರ್ವೇಲಿಗೆ 63 ಕೆ.ವಿ.ಯ ವಿದ್ಯುತ್ ಪರಿವರ್ತಕವನ್ನು ಮಂಜೂರುಗೊಳಿಸಿದರು.
ಹತ್ತಾರು ವಿಘ್ನ:
ತಿಂಗಳುಗಳ ಹಿಂದೆ ವಿದ್ಯುತ್ ಪರಿವರ್ತಕವೇನೋ ಮಂಜೂರಾದರೂ ಅದನ್ನು ಅಳವಡಿಸುವಲ್ಲಿ ಹತ್ತಾರು ವಿಘ್ನಗಳು ಎದುರಾಯಿತು. ವಿದ್ಯುತ್ ಪರಿವರ್ತಕ ಅಳವಡಿಸಲು ಜಾಗ ನೋಡಿದ್ದಲ್ಲೆಲ್ಲಾ ಅಲ್ಲಿರುವ ಮನೆಯವರ ಆಕ್ಷೇಪಗಳು ಮೆಸ್ಕಾಂಗೆ ಎದುರಾಯಿತು. ಹೀಗಾಗಿ ನಾಲ್ಕು ಕಡೆ ಜಾಗ ಬದಲಾಯಿಸಲಾಯಿತು. ಗುತ್ತಿಗೆದಾರರು ಕಂಬ ಹಾಕುವ ಕಾಮಗಾರಿ ನಡೆಸಲು ಕೆಲಸಗಾರರನ್ನು ಕರೆದುಕೊಂಡು ಬರೋದು. ಆಕ್ಷೇಪಗಳು ಎದುರಾಗಿ, ಅವರನ್ನು ಒಪ್ಪಿಸುವ ಪ್ರಯತ್ನ ವಿಫಲವಾದಾಗ ವಾಪಸ್ ಹೋಗೋದು ಇದೇ ಆಗುತ್ತಿತ್ತು. ಇದರಿಂದಾಗಿ ಕಾಮಗಾರಿ ಗುತ್ತಿಗೆದಾರರು, ಮೆಸ್ಕಾಂ ಅಧಿಕಾರಿಗಳು ಬೇಸತ್ತು ಹೋಗುವಂತಾಗಿತ್ತು. ಬಳಿಕ ಮಧ್ಯಸ್ಥಿಕೆ ವಹಿಸಿದ ಅನಿ ಮಿನೇಜಸ್ ಅವರು ಸ್ಥಳೀಯರೊಂದಿಗೆ ಮಾತನಾಡಿ ಎಲ್ಲರಿಗೂ ಒಪ್ಪಿಗೆಯಾಗುವ ಜಾಗವನ್ನು ಗುರುತಿಸಿದ್ದು, ಸ್ಥಳೀಯರೇ ಸೇರಿಕೊಂಡು ಆ ಜಾಗವನ್ನು ಸಮತಟ್ಟುಗೊಳಿಸಿ ಕೊಟ್ಟಿದ್ದರು. ಮೆಸ್ಕಾಂನವರು ಬಂದು ಕಂಬಗಳನ್ನು ಹಾಕಿ ವಿದ್ಯುತ್ ಪರಿವರ್ತಕವನ್ನೂ ಅಳವಡಿಸಿದ್ದರು. ಇದರೊಂದಿಗೆ ಇಲ್ಲಿಯ ವಿದ್ಯುತ್ ಲೈನ್‌ಗಳು ಹಲವು ವರ್ಷಗಳ ಹಿಂದೆ ಅಳವಡಿಸಿರುವುದಾಗಿದ್ದು, ಅ ತಂತಿಗಳು ನಂ.4 ತಂತಿಗಳಾಗಿತ್ತು. ಅವುಗಳಲ್ಲಿ ತೀರಾ ಶಿಥಿಲಗೊಂಡ ವಿದ್ಯುತ್ ತಂತಿಗಳನ್ನು ತೆಗೆದು ನಂ.1ನ ರ‍್ಯಾಬೀಟ್ ವಯರ್‌ಗಳನ್ನು ಅಳವಡಿಸುವ ಕಾಮಗಾರಿಗೆ ಮುಂದಾದರು. ದೂರ ದೂರ ಇರುವ ಕಂಬದಿಂದಾಗಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದರಿಂದ ಕರ್ವೇಲ್‌ನಲ್ಲಿ ಒಂದು ವಿದ್ಯುತ್ ಕಂಬದ ಅವಶ್ಯಕತೆ ಇರುವುದರಿಂದ ಆ.7ರಂದು ಸಾರ್ವಜನಿಕ ರಸ್ತೆ ಬದಿ ಅದನ್ನು ಅಳವಡಿಸಲು ಮೆಸ್ಕಾಂನವರು ಮುಂದಾದರು.
ಆದರೆ ಅಲ್ಲೇ ಇರುವ ಮನೆಯವರಿಂದ ಅದಕ್ಕೆ ವಿರೋಧ ವ್ಯಕ್ತವಾಯಿತು. ಇಲ್ಲಿ ನಮ್ಮ ತೆಂಗಿನ ಮರಗಳಿವೆ. ರಸ್ತೆ ಎತ್ತರದ ಪ್ರದೇಶದಲ್ಲಿದ್ದು, ಅದರ ಕೆಳಗಡೆ ಗುಂಡಿ ಪ್ರದೇಶದಲ್ಲಿ ನಮ್ಮ ಮನೆಯಿದೆ. ರಸ್ತೆ ಬದಿಯಲ್ಲಿ ಇನ್ನೊಂದು ಕಂಬ ಹಾಕಿದರೆ ಅದು ಕೆಳಗಡೆ ಕುಸಿದು ಬೀಳುವ ಸಂಭವವಿದೆ ಹೀಗೆ ನಾನಾ ಕಾರಣಗಳೊಂದಿಗೆ ವಿದ್ಯುತ್ ಕಂಬ ಅಳವಡಿಸಲು ವಿರೋಧ ವ್ಯಕ್ತಪಡಿಸಿದರು. ಆಗ ಉಪ್ಪಿನಂಗಡಿ ಮೆಸ್ಕಾಂನ ಸಹಾಯಕ ಎಂಜಿನಿಯರ್ ನಿತಿನ್ ಕುಮಾರ್ ಅವರು ಸ್ಥಳಕ್ಕೆ ಪೊಲೀಸರನ್ನು ಕರೆಯಬೇಕಾಯಿತು. ಉಪ್ಪಿನಂಗಡಿ ಪೊಲೀಸರು, 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಸತೀಶ್ ಡಿ. ಬಂಗೇರ, ಮೆಸ್ಕಾಂ ಎಇ ನಿತಿನ್ ಕುಮಾರ್, ಮೆಸ್ಕಾಂ ಪವರ್‌ಮ್ಯಾನ್ ಅಕ್ಬರ್, ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಬೂತ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್ ಅವರೆಲ್ಲಾ ಇಲ್ಲಿ ಹೊಸದಾಗಿ ಕಂಬ ಅಳವಡಿಸಿದರೆ ನಿಮ್ಮ ಜಾಗದ ಮೇಲಿನಿಂದ ಹಾದು ಹೋಗಿರುವ ವಿದ್ಯುತ್ ತಂತಿಗಳು ರಸ್ತೆ ಬದಿಯೇ ಬರುತ್ತದೆ. ಅಲ್ಲದೇ, ಈಗಾಗಲೇ ಇಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಇದರಿಂದ ಮುಂದಕ್ಕೆ ಅಪಾಯವುಂಟಾಗುವ ಸಾಧ್ಯತೆ ಇದೆ. ಇಲ್ಲಿ ವಿದ್ಯುತ್ ಕಂಬ ಅಳವಡಿಸುವುದರಿಂದ ನಿಮಗೆ ಸಮಸ್ಯೆಯಾಗುವುದಕ್ಕಿಂತ ಪ್ರಯೋಜನವೇ ಜಾಸ್ತಿ ಎಂದು ಪರಿಪರಿಯಾಗಿ ಅವರಲ್ಲಿ ವಸ್ತು ಸ್ಥಿತಿ ವಿವರಿಸಿದರೂ, ಅವರು ಕಂಬ ಅಳವಡಿಸಲು ಒಪ್ಪಿರಲಿಲ್ಲ. ಮಧ್ಯಾಹ್ನವಾಗುತ್ತಲೇ ವಿದ್ಯುತ್ ಕಂಬ ಅಳವಡಿಸುವುದರಿಂದ ಅವರಿಗೆ ಆಗುವ ಪ್ರಯೋಜನಗಳನ್ನು ಮನದಟ್ಟು ಮಾಡುವಲ್ಲಿ ಮೆಸ್ಕಾಂ ಅಧಿಕಾರಿಗಳು ಯಶಸ್ವಿಯಾಗಿದ್ದು, ಬಳಿಕ ಆ ಮನೆಯವರು ವಿದ್ಯುತ್ ಕಂಬ ಅಳವಡಿಸಲು ಒಪ್ಪಿಗೆ ನೀಡಿದರು. ಬಳಿಕ ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ತಂತಿಗಳನ್ನು ಎಳೆಯುವುದರೊಂದಿಗೆ ಈ ಸಮಸ್ಯೆಯೂ ಸುಖಾಂತ್ಯ ಕಂಡಿತು. ಹೀಗೆ ಹಲವು ತಿಂಗಳುಗಳಿಂದ ಹಲವಾರು ವಿಘ್ನಗಳನ್ನು ದಾಟಿ ಬಂದ ಈ ವಿದ್ಯುತ್ ಪರಿವರ್ತಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾತ್ರ ಇನ್ನು ಬಾಕಿಯಿದ್ದು, ಅದು ಆದ ಬಳಿಕ ಕರ್ವೇಲ್‌ನವರ ಲೋ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇದರೊಂದಿಗೆ ಬಿಳಿಯೂರು ಗ್ರಾಮದಲ್ಲಿರುವ ವಿದ್ಯುತ್ ಪರಿವರ್ತಕಕ್ಕೂ ಲೋಡ್ ಕಡಿಮೆಯಾಗಿ ಅಲ್ಲಿನವರಿಗೂ ಪ್ರಯೋಜನವಾಗಲಿದೆ.
34 ನೆಕ್ಕಿಲಾಡಿ ಗ್ರಾಮದ ಕರ್ವೇಲು ನಿವಾಸಿಗಳಿಗೆ ಬೇಸಿಗೆಯಲ್ಲಿ ವಿಪರೀತ ಲೋವೋಲ್ಟೇಜ್ ಸಮಸ್ಯೆಯಿತ್ತು. ಅಲ್ಲಿಗೊಂದು ಪ್ರತ್ಯೇಕ ವಿದ್ಯುತ್ ಪರಿವರ್ತಕದ ಬೇಡಿಕೆ ಬಂದಿತ್ತು. ಅದಕ್ಕೆ ಅಂದಾಜುಪಟ್ಟಿ ತಯಾರಿಸಿ ಕರ್ವೇಲಿಗೆ 63 ಕೆ.ವಿ.ಯ ವಿದ್ಯುತ್ ಪರಿವರ್ತಕ ಮಂಜೂರು ಮಾಡಲಾಗಿದೆ. ಅದನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಅದರಿಂದ ವಿದ್ಯುತ್ ಸಂಪರ್ಕ ಕೊಡುವುದು ಮಾತ್ರ ಬಾಕಿಯಿದೆ. ಇದು ಪೂರ್ಣಗೊಂಡ ಬಳಿಕ ಇಲ್ಲಿನವರ ಲೋವೋಲ್ಟೇಜ್ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ. ಅಲ್ಲದೇ, ಕರ್ವೇಲಿನಲ್ಲಿ 110 ಕೆ.ವಿ. 110 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ ಜಾಗ ಮಂಜೂರಾಗಿದ್ದು, ಡಿ.ಪಿ.ಆರ್. ಅನುಮೋದನೆಗೆ ಬಾಕಿ ಇದೆ. ಇದು ಆದ ಬಳಿಕ ಇಡೀ ನೆಕ್ಕಿಲಾಡಿ ಗ್ರಾಮದ ವೋಲ್ಟೇಜ್ ಸಮಸ್ಯೆ ಪರಿಹಾರವಾಗಲಿದೆ.
ನಿತಿನ್ ಕುಮಾರ್
ಸಹಾಯಕ ಎಂಜಿನಿಯರ್
ಮೆಸ್ಕಾಂ ಉಪ್ಪಿನಂಗಡಿ ಶಾಖೆ