ಪುತ್ತೂರು ಬಂಟರ ಸಂಘದಿಂದ ಆಟಿಡೊಂಜಿ ಬಂಟೆರೆ ಸೇರಿಗೆ

0

ಪುತ್ತೂರು: ನಮ್ಮಲ್ಲಿ ಅನೇಕ ಮಹಿಳೆಯರು ಶಾಲೆ ನಡೆಸುವ ಶಕ್ತಿವುಳ್ಳವರಿದ್ದಾರೆ. ಅವರಿಗೊಂದು ಶಾಲೆ ಮಾಡಿಕೊಡುವ ಪರಿಕಲ್ಪಣೆ ನಮ್ಮ ಮುಂದಿದೆ. ಈಗಾಗಲೇ ಪುತ್ತೂರಿನಲ್ಲಿ ಐದೂವರೆ ಎಕ್ರೆ ಜಾಗವನ್ನು ಬಂಟ ಸಮಾಜಕ್ಕಾಗಿ ಗುರುತಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಮಹಿಳಾ, ಯುವ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಕೊಂಬೆಟ್ಟು ಎಂ.ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆ.10ರಂದು ನಡೆದ ಆಟಿಡೊಂಜಿ ಬಂಟೆರೆ ಸೇರಿಗೆ, ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕಲ್ಪವೃಕ್ಷದ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಬಳಿಕ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇವತ್ತು ಬಂಟ ಸಮಾಜದಿಂದ ಒಳ್ಳೆಯ ಕಾರ್ಯಕ್ರಮದ ಮೂಲಕ ಈ ಸಭಾಂಗಣ ತುಂಬುವ ಮೂಲಕ ಬಂಟರ ಶಕ್ತಿಯನ್ನು ತೋರಿಸುವ ಕೆಲಸ ಆಗಿದೆ. ಈ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಬೇಕು. ಇದಕ್ಕೆ ಮೊದಲು ಮಾಜಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮನೆ ಮನೆಗೆ ಹೋಗಿ ಬಂಟ ಸಮಾಜವನ್ನು ಸೇರಿಸುವ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಒಬ್ಬರಿಂದ ಒಬ್ಬರು ಹುಷಾರಿನವರೇ ನಮ್ಮ ಬಂಟರ ಸಂಘದಲ್ಲಿರುವವರು. ಇವತ್ತು ಬಂಟ ಸಮಾಜದ ಶಕ್ತಿಯನ್ನು ಸೇರಿಸುವ ಕೆಲಸ ಮಾಡಿದ್ದೇವೆ. ಯಾಕೆಂದರೆ ಪುತ್ತೂರು ಬಂಟರ ಸಂಘ ಯಾವ ರೀತಿಯಲ್ಲಿ ಸಮಾಜಕ್ಕೆ ದಾರಿ ದೀಪವಾಗಿ ಕೆಲಸ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡು ಇವತ್ತು ಕಾರ್ಯಕ್ರಮ ಆಯೋಜಿಸಲಾಗಿದೆ. ಇವತ್ತು ಪ್ರಕಾಶ್ ಶೆಟ್ಟಿಯವರು ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಯಾಕೆಂದರೆ ಬೆಂಗಳೂರಿನಲ್ಲಿ ಕಂಬಳ ಮಾಡುವಾಗ ಪೂರ್ಣ ಸಹಕಾರ ಅವರಿಂದ ಆಗಿದೆ. ಇವತ್ತು ಬಂಟರ ಸಮಾಜದಲ್ಲಿ ಹಲವು ಕೆಲಸ ಆಗಬೇಕಾಗಿದೆ. ನನ್ನನ್ನು ಎಲ್ಲಾ ಸಮಾಜದೊಂದಿಗೆ ಬಂಟರ ಸಂಘವು ಬೆನ್ನು ತಟ್ಟಿ ಶಾಸಕ ಸ್ಥಾನ ನೀಡಿದೆ. ಈ ನಿಟ್ಟಿನಲ್ಲಿ ಬಂಟ ಸಮಾಜದ ಗೌರವ ಉಳಿಸಿಕೊಂಡು ಬಡವರ ಕಣ್ಣೀರು ಒರೆಸುವ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.

ಬಂಟರ ಸಮಾಜದಲ್ಲಿ ಒಂದಷ್ಟು ಕೆಲಸ ಆಗಬೇಕಾಗಿದೆ. ಬಂಟ ಸಮಾಜದಿಂದ ಇಲ್ಲಿ ಶಿಕ್ಷಣ ಸಂಸ್ಥೆ ನಡೆಯುತ್ತಿದೆ. ಆದರೆ ಎಲ್‌ಕೆಜಿ ಯುಕೆಜಿ ನಂತರ ಪಿಯುಸಿ ಹಂತದ ಶಾಲೆ ನಿರ್ಮಾಣ ಆಗಬೇಕು. ನಮ್ಮಲ್ಲಿ ಅನೇಕ ಮಹಿಳೆಯರು ಶಾಲೆ ನಡೆಸುವ ಶಕ್ತಿವುಳ್ಳವರಿದ್ದಾರೆ. ಅವರಿಗೊಂದು ಶಾಲೆ ಮಾಡಿಕೊಡುವ ಪರಿಕಲ್ಪಣೆ ನಮ್ಮ ಮುಂದಿದೆ. ಈಗಾಗಲೇ ಪುತ್ತೂರಿನಲ್ಲಿ ಐದೂವರೆ ಎಕ್ರೆ ಜಾಗವನ್ನು ಬಂಟ ಸಮಾಜಕ್ಕಾಗಿ ಗುರುತಿಸಲಾಗಿದೆ. ದೇವರ ಅನುಗ್ರಹ ಇದ್ದರೆ ಬಂಟ ಸಮಾಜ ಕೂಡಾ ಉತ್ತಮ ರೀತಿಯ ವಿದ್ಯೆಯನ್ನು ಕೊಡುವ ಅವಕಾಶವಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ಇಂತಹ ಒಳ್ಳೆಯ ವಿಚಾರ ಮುಂದಿಟ್ಟು ದಾನಿಗಳು ಸಹಕಾರ ನೀಡುತ್ತಾರೆ. ಇವತ್ತು ಉದ್ಯಮಿಗಳು ಹಲವು ಮಂದಿ ಇದ್ದಾರೆ. ಆದರೆ ಗಂಟು ಕಟ್ಟಿ ಇಡುವವರು ಜಾಸ್ತಿ ಇದ್ದಾರೆಂದು ಅನೇಕರು ಹೇಳುತ್ತಿದ್ದರು. ಆದರೆ ಬಂಟ ಸಮಾಜ ಗಂಟು ಕಟ್ಟಿ ಇಡುವುದಕ್ಕಿಂತ ಹೆಚ್ಚು ಕೊಡುವ ದಾನಿಗಳಾಗಿರುವುದೇ ಹೆಚ್ಚು ಇದ್ದಾರೆ. ಯಾಕೆಂದರೆ ಈ ಭಾಗದಲ್ಲಿ ಯಾವುದಾದರೂ ದೇವಸ್ಥಾನ, ಭಜನಾ ಮಂದಿರವಿದ್ದರೆ ಅಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು ಅದು ಬಂಟ ಸಮಾಜ ಎಂದು ಎದೆ ತಟ್ಟಿ ಹೇಳಬೇಕು. ನಿಮ್ಮೆಲ್ಲರ ಆಶೀರ್ವಾದಿಂದ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದ ಅವರು ನಿಕ್ಲೆನ ಜಾತಿಯಪ್ಪೆ ಮಗನ್ ಏಪಾಗ್ಲೋ ಮರಪೋಡ್ಚಿ ನಿಕ್ಲೆನ ಸಹಕಾರ ನಟ್ಟೋನುವೆ ಎಂದರು.


ಗುರಿ ಸ್ಪಷ್ಟ, ಪ್ರಾಮಾಣಿಕ ಪ್ರಯತ್ನವಿದ್ದಾಗ ಕಾರ್ಯ ಯಶಸ್ವಿ:
ವಿಶೇಷ ಸನ್ಮಾನ ಸ್ವೀಕರಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಮಾತನಾಡಿ ಸಮಾಜದ ಒರ್ವ ಯುವಕನ ಮೇಲೆ ವಿಶ್ವಾಸವಿಟ್ಟು ನನಗೆ ಸನ್ಮಾನ ಮಾಡಿರುವ ಬಂಟ ಸಮಾಜದ ತನ್ನ ಜವಾಬ್ದಾರಿಯನ್ನು ನೆನಪಿಸುವ ಕೆಲಸ ಮಾಡಿದೆ. ನಿಮ್ಮ ಪ್ರೀತಿ ಅಭಿಮಾನ ವಿಶ್ವಾಸಕ್ಕೆ ವಂದಿಸುತ್ತೇನೆ. ಪ್ರಯತ್ನ ಪ್ರಾಮಾಣಿಕವಾಗಿರುತ್ತದೆ. ಗುರಿ ಸ್ಪಷ್ಟವಿದ್ದರೆ ಸಂಕಲ್ಪ ಗಟ್ಟಿಯಿದ್ದರೆ ಕಂಡಿತಾ ಸಿದ್ದಿಯಾಗುತ್ತದೆ ಎಂದು ನಮ್ಮ ಪ್ರಧಾನಿಯವರು ಹೇಳುತ್ತಿರುತ್ತಾರೆ. ಹಾಗಾಗಿ ನನ್ನ ಗುರಿ ಸ್ಪಷ್ಟವಿದೆ. ಪ್ರಾಮಾಣಿಕ ಪ್ರಯತ್ನವಿದೆ ಎಂದು ಹೇಳಿದರು. ಯುವಕರು ಇವತ್ತು ಪ್ರಕಾಶ್ ಶೆಟ್ಟಿಯವರ ಜೀವನ ಅರ್ಥ ಮಾಡಿಕೊಂಡು ಮುಂದೆ ಹೋಗಬೇಕು. ಯಾಕೆಂದರೆ ಅವರ ಸಾಧನೆ ಯುವಕರಿಗೆ ಪ್ರೇರಣದಾಯಿ ಎಂದರು.


ಯುವ ಸಮಾಜಕ್ಕೆ ಅರಿವು ಮೂಡಿಸುವ ಕೆಲಸ ಆಗಬೇಕು:
ಮುಂಬಯಿ ಹೇರಂಭಾ ಗ್ರೂಫ್ ಆಫ್ ಕಂಪೆನಿಯ ಮಾಲಕ ಕನ್ಯಾನ ಸದಾಶಿವ ಶೆಟ್ಟಿ ಅವರು ಮಾತನಾಡಿ ಪುತ್ತೂರು ಬಂಟರ ಮಹಾದೊಡ್ಡ ಕೇಂದ್ರವಾಗಿದೆ. ಬಂಟರ ಬಗ್ಗೆ ಹೇಳಲು ಆದಿಯೂ ಇಲ್ಲ ಅಂತ್ಯವಿಲ್ಲ. ಬಂಟರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ. ಇತಿಹಾಸದಲ್ಲಿ ಬಂಟರು ದೊಡ್ಡ ಶೂರ ಆಗಿದ್ದಾರೆ. ನಮ್ಮ ದೊಡ್ಡ ಉದ್ಯಮ ಹೊಟೇಲ್ ಉದ್ಯಮ. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇವತ್ತು ಬಂಟರು ಮುಟ್ಟದ ಕ್ಷೇತ್ರವೇ ಇಲ್ಲ. ಎಲ್ಲವನ್ನು ತಲುಪಿ ಆಗಿದೆ. ಯುವ ಪೀಳಿಗೆ ಇವತ್ತು ಕಡಿಮೆ ಆಗುತ್ತಿದೆ. ಹಳ್ಳಿ ಪ್ರದೇಶದಲ್ಲಿ ವಿದ್ಯಾವಂತರು ಪಟ್ಟಣಕ್ಕೆ ಹೋಗುತ್ತಾರೆ. ಹಾಗೆ ಹೋದವರಿಗೆ ಮದುವೆ ಸಂಸಾರದ ವಿಚಾರಕ್ಕೆ ಹೋಗುತ್ತಿಲ್ಲ. ಒಂದು ವೇಳೆ ಮದುವೆಯಾದರೂ ಮಕ್ಕಳಿಲ್ಲ. ನಾನು ಹೇಳುವುದು ನಮ್ಮ ಸಮಾಜವನ್ನು ಗಟ್ಟಿ ಮಾಡಲು ಸಮಯಕ್ಕೆ ಸರಿಯಾಗಿ ಮದುವೆಯಾಗಿ ಎರಡು ಮಕ್ಕಳನ್ನಾದರೂ ಮಾಡಿ. ಸಮಾಜದ ಜನಸಂಖ್ಯೆ ಹೆಚ್ಚಾಗಬೇಕು. ಯಾಕೆಂದರೆ ಇವತ್ತು ಬಾಂಗ್ಲಾದೇಶ, ಯು.ಕೆಯಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ಕೇಳುತ್ತಿದ್ದೇವೆ ಎಂದು ಕಿವಿ ಮಾತು ಹೇಳಿದರು. ಸಮಾಜ ಪರವಾದ ಕೆಲಸ ಮಾಡಿ. ಬಂಟ ಸಮಾಜಕ್ಕೆ ನನ್ನಿಂದಾಗುವ ಸಹಕಾರ, ಸಹಾಯ ಈಗ ಮಾಡುತ್ತಾ ಇದ್ದೇನೆ. ಮುಂದೆಯೂ ಮಾಡುತ್ತೇನೆ. ಭವನ ಮಾಡಿ. ಭವನದ ಜೊತೆಗೆ ಯುವ ಜನತೆಗೆ ತರಬೇತಿ ಕೊಡುವ ಕೆಲಸ ಮಾಡಿ. ಅನುದಾನ, ಸಹಕಾರ, ಪ್ರೋತ್ಸಾಹ ನೀಡಲು ಸಿದ್ದನಿದ್ದೇನೆ. ಬೇಕಾದರೆ ಯುವ ಜನತೆಗೆ ಲೆಕ್ಚರ್ ಕೊಡಲೂ ತಯರಾಗಿದ್ದೇನೆ ಎಂದು ಹೇಳಿದರು.


ಬಂಟರು ಎಲ್ಲಾ ಸಮಾಜವನ್ನು ಗೌರವಿಸುವವರು:
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ ಬಂಟರು ಎಲ್ಲಾ ಸಮಾಜವನ್ನು ಗೌರವದಿಂದ ನೋಡುವ ಮೂಲಕ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಹೊಂದಿದವರು. ಇವತ್ತು ಪುತ್ತೂರಿನಲ್ಲಿ ಬಂಟರ ಸಂಘದ ಮೂಲಕ ಅಭೂತಪೂರ್ವ ಕಾರ್ಯಕ್ರಮವನ್ನು ಹೇಮನಾಥ ಶೆಟ್ಟಿ ಟೀಮ್ ಉತ್ತಮವಾಗಿ ಮಾಡಿದ್ದಾರೆ. ಅದೇ ರೀತಿ ಪುತ್ತೂರಿನಲ್ಲಿ ಉತ್ತಮ ಯುವ ಬಂಟರ ತಂಡವಿದೆ. ಜಾಗತಿಕ ಬಂಟರ ಸಂಘದಿಂದ ಅನೇಕ ಕೆಲಸ ಕಾರ್ಯ ಬಂಟ ಸಮಾಜಕ್ಕೆ ಆಗುತ್ತಿದೆ ಎಂದರು.


ವಿಶ್ವ ಬಂಟರ ಮಾಹಿತಿ ಕೋಶಕ್ಕೆ ಶೀಘ್ರ ಚಾಲನೆ:
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ ನ್ಯಾಯ, ಧರ್ಮದ ಮೂಲಕ ನಡೆದು ಪ್ರಾಮಾಣಿಕ ಪ್ರಯತ್ನದ ಸಂಪದಾನೆ ಮಾಡಿ ಯಾರಿಗೆ, ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆಯೊ ಅವರಿಗೆ ನ್ಯಾಯ ಕೊಡುವ ಮೂಲಕ ಬಂಟರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದ ಅವರು ವಿಶ್ವ ಬಂಟರ ಮಾಹಿತಿ ಕೋಶ ಎಂಬ ದೊಡ್ಡ ಕೆಲಸ ಆಗುತ್ತಿದೆ. ಜಗತ್ತಿನಲ್ಲಿರುವ ಬಂಟ ಸಮಾಜದ ಮಾಹಿತಿ ಇರುವ ಕೋಶ ಸಿದ್ದ ಪಡಿಸಲಾಗುವುದು. ಇದು ನಮ್ಮ ವಿವಾಹ, ಉದ್ಯೋಗಕ್ಕೆ ಅನುಕೂಲವಾಗುತ್ತದೆ. ಇದಕ್ಕಾಗಿ ವಿಶೇಷ ಸಾಪ್ಟ್ ವೇರ್ ಮಾಡಲಾಗಿದೆ. ಸುಮಾರು 15 ಮಂದಿ ಸಾಪ್ಟ್ ವೇರ್ ಇಂಜಿನಿಯರ್ ಸಾಪ್ಟ್ ವೇರ್ ಮಾಡಿದ್ದಾರೆ. 300 ಮಂದಿ ಇದರ ತರಬೇತಿ ಪಡೆದವರು ಪ್ರತಿ ಗ್ರಾಮಕ್ಕೆ ಹೋಗಿ ಮಾಹಿತಿ ಕೊಡುತ್ತಾರೆ. ಪ್ರತಿ ಮನೆಯಿಂದಲೂ ಡಾಟಾ ಸಂಗ್ರಹ ಮಾಡಲಾಗುತ್ತದೆ. ಆ ಮೂಲಕ ಜಗತ್ತಿನ ಬಂಟರನ್ನು ಒಟ್ಟು ಮಾಡುವ ದೊಡ್ಡ ಕೆಲಸ ಆಗಲಿದೆ. ಇದರ ಪೂರ್ಣ ಖರ್ಚನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಕೊಡುಗೆಯಾಗಿ ನೀಡಲಿದ್ದಾರೆ. ಮಾತೃ ಸಂಘದ ಶತಮಾನೋತ್ಸವದ ಕಟ್ಟಡ ಯೋಜನೆಯೂ ಶೀಘ್ರವಾಗಿ ನಡೆಯಲಿದೆ ಎಂದ ಅವರು ಬಂಟರು ಬಂಟತನವನ್ನು ಉಳಿಸಿಕೊಂಡು ಎಲ್ಲಾ ಸಮಾಜದೊಂದಿಗೆ ಸಹಜೀವನ ನಡೆಸಿಕೊಂಡು ಬಂಟರ ಶಕ್ತಿಯನ್ನು ಬೆಳೆಸುವ ಎಂದರು.


ಅಶೋಕ್ ರೈ ಮುಂದಿಟ್ಟ ಭವನದ ಯೋಜನೆಗೆ ಸಹಕಾರದ ಭರವಸೆ:
ಸನ್ಮಾನಿತ ಎಮ್.ಆರ್.ಜಿ ಗ್ರೂಪ್ಸ್‌ನ ಅಧ್ಯಕ್ಷ ಕೆ.ಡಾ| ಕೆ.ಪ್ರಕಾಶ್ ಶೆಟ್ಟಿಯವರು ಮಾತನಾಡಿ ನಾನು ಪುತ್ತೂರಿಗೆ ಪ್ರಥಮ ಬಾರಿ ಬಂದಿದ್ದೇನೆ. 2007 ರಲ್ಲಿ ಸೀತಾರಾಮ ರೈ ಸವಣೂರು ಒಮ್ಮೆ ಕರೆದಿದ್ದರು. ಆಗಲೂ ಬರಲಾಗಲಿಲ್ಲ. ಪುತ್ತೂರಿನವರು ಸತ್ಕಾರದ ಪ್ರೀತಿಗೆ ಮಾದರಿಯಾದವರು ಎಂದು ಕೇಳಿದ್ದೆ. ಇವತ್ತು ಅದನ್ನು ಕಣ್ಣಾರೆ ನೋಡಿದ್ದೇನೆ. ಯಾಕೆಂದರೆ ಪುತ್ತೂರು ಮುತ್ತಿನ ಊರು. ಇಲ್ಲಿನ ಜನರು ಮುತ್ತಿನ ಜನರು, ಮುತ್ತಿನ ಮನಸ್ಸಿನವರು. ಹಾಗಾಗಿ ಸಮಾಜ ಸೇವೆಯಲ್ಲಿ ನನ್ನನ್ನು ಗುರುತಿಸಿ ನೀಡಿರುವ ಸನ್ಮಾನವನ್ನು ಮುತ್ತಿನ ಸನ್ಮಾನ ಎಂದು ಬಹಳ ಕುಶಿಯಿಂದ ಸ್ವೀಕಾರ ಮಾಡುತ್ತೇನೆ ಎಂದ ಅವರು ಬಂಟರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ. ಗೌರವ ಸ್ಥಾನ ಮಾನ ಎಲ್ಲಾ ಕ್ಷೇತ್ರದಲ್ಲೂ ಸಿಕ್ಕಿದೆ. ಇವತ್ತು ಪ್ರಕಾಶ್ ಶೆಟ್ಟಿ ಕೊಡುಗೈದಾನಿ ಎಂದು ಹೇಳುವುದಕ್ಕಿಂತ ಸಮಾಜ ನನಗೆ ತುಂಬಾ ಕೊಟ್ಟಿದೆ. ಸಮಾಜಕ್ಕೆ ನಾನು ಕೊಟ್ಟದು ಕಡಿಮೆ ಆಗಿದೆ. ಸಮಾಜದ ಋಣ ಮುಕ್ತ ಆಗಲು ಸಮಾಜಕ್ಕೆ ಒಂದಂಶ ನೀಡುವ ಅಳಿಲ ಸೇವೆ ಮಾಡುತ್ತಿದ್ದೇನೆ. ಸಮಾಜದ ಹಿರಿಯರ ಸಹಕಾರ, ಸಲಹೆ ಸದಾ ಇರಲಿ, ತುಳು ನಾಡ ದೈವ ದೇವರ ಅಶೀರ್ವಾದ ಸದಾ ಕೇಳಿಕೊಳ್ಳುತ್ತೇನೆ ಎಂದ ಅವರು ಅಶೋಕ್ ಕುಮಾರ್ ರೈ ಅವರು ಉಲ್ಲೇಖಿಸಿದಂತೆ ಪುತ್ತೂರು ಬಂಟರ ಇನ್ನೊಂದು ನೂತನ ಭವನಕ್ಕೆ 5 ಎಕ್ರೆ ಜಾಗ ಈಗಾಗಲೇ ಗುರುತಿಸಿರುವ ಕುರಿತು ತಿಳಿಸಿದ್ದಾರೆ. ಅಶೋಕ್ ಕುಮಾರ್ ರೈ ಅವರು ನಮ್ಮೊಂದಿಗೆ ಕಂಬಳವನ್ನೇ ಯಶಸ್ವಿ ಮಾಡಿದ್ದಾರೆ. ಹಾಗಾಗಿ ಅವರ ಮೇಲೆ ಪೂರ್ಣ ಭರವಸೆ ಇದೆ. ಅವರು ಮುಂದಿಟ್ಟ ನೂತನ ಬಂಟರ ಭವನದ ಯೋಜನೆಗೆ ನಾನು ಕೈ ಜೋಡಿಸುತ್ತೆನೆ ಎಂದು ಭರವಸೆ ನೀಡಿದರು.


ಸಂಸ್ಕಾರ, ಕಲೆ, ಆಚಾರ ವಿಚಾರ ಮುಂದಿನ ಪೀಳಿಗೆಗೆ ಅಗತ್ಯ:
ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ಅಬುದಾಬಿ ಇದರ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರು ಮಾತನಾಡಿ ಸಮಾಜದ ಅನರ್ಘ್ಯ ರತ್ನಗಳು ಬಂಟ ಸಮುದಾಯದಲ್ಲಿದ್ದಾರೆ. ಅಂತರವರನ್ನು ಗುರುತಿಸುವುದು ನಮ್ಮ ಕರ್ತವ್ಯ. ಇವತ್ತು ಏಳೇಲು ಜನ್ಮದ ಪುಣ್ಯ ಎಂಬಂತೆ ನನಗೆ ಸನ್ಮಾನ ಮಾಡಿರುವುದು ಸಂತೋಷ ಆಗಿದೆ. ಸಾಧಕರನ್ನು ಗುರುತಿಸಿದಾಗ ಮೂಲಕ ನಮ್ಮ ಯುಜನತೆಗೆ ಸಮಾಜಮುಖಿ ಕೆಲಸಕ್ಕೆ ಪ್ರೇರಣೆಯಾಗುತ್ತದೆ. ಇವತ್ತು ಮುಂದಿನ ಪೀಳಿಗೆಗೆ ಸಂಸ್ಕಾರ, ಕಲೆ, ಆಚಾರ ವಿಚಾರಗಳನ್ನು ತಿಳಿಸುವ ಕೆಲಸ ಆಗಬೇಕಾಗಿದೆ. ಆಸ್ತಿ, ಅಂತಸ್ತು ಮಾಡುವುದಕ್ಕಿಂತ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ಕೊಡಿಸಿ ಎಂದರು.


ಪುತ್ತೂರಿನ ಬಂಟರು ಸಮಾಜಮುಖಿ ಚಿಂತನೆಯುಳ್ಳವರು:
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ಮಾತನಾಡಿ ಪೂರ್ವಜನ್ಮದ ಪುಣ್ಯ ಎಂಬಂತೆ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಪುತ್ತೂರಿನ ಜನರು ಉತ್ತಮ ಮನೆತನದವರು. ಸಮಾಜಮುಖಿ ಚಿಂತನೆಯುಳ್ಳವರು ಎಂಬುದಕ್ಕೆ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.


ಬಂಟರು ಸಾಧಕರು, ನಾಯಕರು, ಜಗತ್ತನ್ನು ಆಳಲು ತಯಾರಿದ್ದವರು:
ಪುತ್ತೂರು ತಾಲೂಕು ಬಂಟ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಬಂಟರು ಸಾಧಕರು, ನಾಯಕರು, ಜಗತ್ತಿನ್ನು ಆಳಲು ತಯಾರಿದ್ದವರು. ಬಂಟರು ಮನಸ್ಸು ಮಾಡಿದರೆ ಏನು ಬೇಕಾದರು ಮಾಡಲು ತಯಾರಿದ್ದವರು. ಇದು ಬಂಟ ರಕ್ತಗತವಾಗಿ ಬಂದ ವಿಚಾರ ಎಲ್ಲರಿಗೂ ಗೊತ್ತಿದೆ. ದೊಡ್ಡ ದೊಡ್ಡ ಸಾಧಕರಿರುವ ಬಂಟ ಸಮಾಜವನ್ನು ಒಂದುಗೂಡಿಸುವ ಶಕ್ತಿ ಇದೆ. ಇವತ್ತು ಕಡಬ ಮತ್ತು ಪುತ್ತೂರು ಸೇರಿ ನಡೆಯುತ್ತಿರುವ ಪುತ್ತೂರು ತಾಲೂಕು ಬಂಟರ ಸಂಘದಲ್ಲಿ ಬಂಟ ಸಮಾಜದವರನ್ನು ಸಮೀಕ್ಷೆ ಮಾಡಿ ಎಲ್ಲರನ್ನು ಸೇರಿಸುವ ಕೆಲಸ ಈ ಕಾರ್ಯಕ್ರಮದ ಮೂಲಕ ನಡೆಯುತ್ತಿದೆ. ಹಿರಿಯರು ಹಾಕಿ ಕೊಟ್ಟ ಸಂಸ್ಕೃತಿ ಸಮಾಜ ಉಳಿಯಲು ದೊಡ್ಡ ದೊಡ್ಡ ಕೆಲಸವನ್ನು ಸಾಧಕರು ಮಾಡಿದ್ದಾರೆ. ಇವತ್ತು ಬಂಟ ಸೇರಿಗೆ ಮೂಲಕ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿಕೊಂಡಿದ್ದೇವೆ. ಈಗಾಗಲೇ ಕಾರ್ಯಕ್ರಮದ ಆಮಂತ್ರಣ ಪ್ರತಿ ಮನೆ ಮನೆಗೂ ತಲುಪಿಸಲಾಗಿದೆ. ಆದರೆ ಕೆಲವು ಕಡೆಯಿಂದ ಆಮಂತ್ರಣ ಬಂದಿಲ್ಲ ಎಂಬ ಮಾತು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಮಂದಿನ ದಿನ ಗ್ರಾಮಗಳ ಮೂಲಕ ಆಮಂತ್ರಣ ನೀಡುವ ಕೆಲಸ ಮಾಡಲಾಗುವುದು. ಪುತ್ತೂರು ತಾಲೂಕು ಬಂಟರ ಸಂಘಕ್ಕೆ ಸ್ವಂತ ಜಾಗ ಬೇಕು. ಅದರಲ್ಲಿ ಶಿಕ್ಷಣ ಸಂಸ್ಥೆ ಬೇಕು. ಅದರಲ್ಲಿ ಒಂದು ಭವನ ನಿರ್ಮಾಣ ಆಗಬೇಕು. ಅದರ ಆದಾಯದ ಮೂಲಕ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಚಿಂತನೆ ಇದೆ. ಇದಕ್ಕೆ ಪೂರಕವಾಗಿ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಅವರ ಸಹಕಾರವಿದೆ ಎಂದರು.


ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ನೆರವು:
ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ದಿವ್ಯಶ್ರೀ ರೈ, ಭಾಗ್ಯಲಕ್ಷ್ಮೀ, ರಿತೇಶ್ ರೈ, ವೀನ್ಯಾ ರೈ, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ತೇಜಸ್ವಿನಿ ವಿ ಶೆಟ್ಟಿ ಬನ್ನೂರು, ರಾಷ್ಟ್ರೀಯ ಕಬ್ಬಡಿಯಲ್ಲಿ ಭಾಗವಹಿಸಿದ ಪೂರ್ವಿಕಾ ಬಿ, ಎಸ್ ಎಸ್ ಎಲ್ ಸಿ ಮತ್ತು ಪಿಯಿಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ೩೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಸಯಿತು. ಇದೇ ಸಂದರ್ಭ ಲಲಿತಾ ಪಿ ಶೆಟ್ಟಿ ನೆಲ್ಯಾಡಿ, ರೂಪಾ ಶೆಟ್ಟಿ ಬನ್ನೂರು, ಸ್ಪಂದನಾ ಮಾಡಾವು ಅವರಿಗೆ ಆರ್ಥಿಕ ನೆರವು ನೀಡಲಾಯಿತು. ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ದಯಾನಂದ ಮನವಳಿಕೆ, ಲಕ್ಷ್ಮೀನಾರಾಯಣ, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಶಶಿಕಿರಣ್ ರೈ, ರವಿಪ್ರಸಾದ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು. ಮಮತಾ ಶೆಟ್ಟಿ ಮತ್ತು ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಯುವ ಗೌಡ ಸಂಘದ ಅಧ್ಯಕ್ಷ ಅಮರನಾಥ ಗೌಡ, ಶಿವರಮಾ ಮತಾವು, ಲ್ಯಾನ್ಸಿ ಮಸ್ಕರೇನಸ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಪುರುಷೋತ್ತಮ ಮುಂಗ್ಲಿಮನೆ, ಹರಿಪ್ರಸಾದ್ ಯಾದವ್ ಸಹಿತ ವಿವಿಧ ಸಮಾಜದ ಹಲವಾರು ಮಂದಿ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.


ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ:
ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿಯವರು ಮಹಾದ್ವಾರ ಉದ್ಘಾಟಸಿದರು. ಶ್ರೀರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಧ್ವಜಾರೋಹಣ ಮಾಡಿದರು. ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಜ್ಯೋತಿ ಪ್ರಜ್ವಲನೆ ಮಾಡಿದರು. ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿಯ ನಿಕಟಪೂರ್ವ ಸಂಚಾಲಕ ದಯಾನಂದ ರೈ ಮನವಳಿಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಚಾವಡಿ ಮಾತುಗಳನ್ನಾಡಿದರು. ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡ ಸಹಿತ ಪದಾಧಿಕಾರಿಗಳು ಅಭ್ಯಾಗತರಾಗಿ ಭಾಗವಹಿಸಿದರು. ಸರಳ ಸಭಾರ ಕಾರ್ಯಕ್ರಮದ ಬಳಿಕ ವಿಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರಲ್ ಪುತ್ತೂರು ಇದರ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ ರೈ ಮತ್ತು ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿ ಯವರಿಂದ ನಾಟ್ಯ ಧಾರೆ ಪ್ರದರ್ಶನಗೊಂಡಿತ್ತು. ಸಂಜೆ ಪ್ರಶಾಂತ್ ರೈ ಮುಂಡಾಳ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆಯವರ ಹಿಮ್ಮೇಳನದಲ್ಲಿ ಪ್ರಜ್ವಲ್ ಗುರುವಾಯನಕೆರೆ, ದಿನೇಶ್ ಶೆಟ್ಟಿ ಕಡಬ, ಸುಂದರ ರೈ ಮಂದಾರ,ಮತ್ತು ಕಡಬ ಶ್ರೀನಿವಾಸ ರೈ ಕಲಾವಿದರಿಂದ ಯಕ್ಷ ಹಾಸ್ಯ ವೈಭವ ಕಾರ್ಯಕ್ರಮ ನಡೆಯಿತು. ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಸಹಭೋಜನ ನಡೆಯಿತು.

ವಿಶೇಷ ಸನ್ಮಾನ:
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಎಲ್ಲಾ ಸಮಾಜಕ್ಕೂ ಆರೋಗ್ಯ ಶೈಕ್ಷಣಿಕ ನೀಡುತ್ತಿರುವ ಎಮ್.ಆರ್.ಜಿ ಗ್ರೂಪ್ಸ್‌ನ ಅಧ್ಯಕ್ಷ ಕೆ.ಡಾ| ಕೆ.ಪ್ರಕಾಶ್ ಶೆಟ್ಟಿ, ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆ ಕುರಿತು ಮಾತನಾಡಿ ಗಮನ ಸೆಳೆದ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿದೇಶಕ್ಕೂ ಹೋದರೂ ಊರಿನ ಬಗ್ಗೆ ಹೆಚ್ಚು ಕಾಳಜಿಯುಳ್ಳ ಸಮಾಜ ಸೇವಕ ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ಅಬುದಾಬಿ ಇದರ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

14 ಮಂದಿ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ;
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 14 ಮಂದಿ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಎ. ಹೇಮನಾಥ ಶೆಟ್ಟಿ ಕಾವು ಇವರಿಂದ ಬನ್ನೂರು ಗುತ್ತು ತಾರಾ ಅಂತಪ್ಪ ಶೆಟ್ಟಿಕಾವು ಅವರಿಂದ ಕೊಡಮಾಡಲ್ಪಡುವ ಬಂಟರ ಶಿರೋಮಣಿ ಪ್ರಶಸ್ತಿಯನ್ನು ಶಾಸಕ ಅಶೋಕ್ ಕುಮಾರ್ ರೈ ಮತ್ತು ಪತ್ನಿ ಸುಮಾ ಅಶೋಕ್ ರೈ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಡಮಜಲು ಸುಭಾಸ್ ರೈ ಅವರಿಂದ ಕೊಡಮಾಡುವ ಸಿರಿ ಕಡಮಜಲು ಕೃಷಿ ಪ್ರಶಸ್ತಿಯನ್ನು ರೈಲ್ ಬಾಲ್ ಪುಣ್ಚಪ್ಪಾಡಿ ಅರಿಯಡ್ಕ ಕೃಷ್ಣ ರೈಯವರಿಗೆ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಮತ್ತು ಪುತ್ತೂರು ತಾಲೂಕು ಸಮಿತಿಯಿಂದ ಕೊಡಮಾಡಲ್ಪಡುವ ಪುತ್ತೂರು ಬಂಟರ ಸಿರಿ ಪ್ರಶಸ್ತಿಯನ್ನು ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ ಮತ್ತು ಮಲ್ಲಿಕಾ ಪ್ರಸಾದ ಅವರಿಗೆ, ದಿ| ರೇಖಾ ಮುತ್ತಪ್ಪ ರೈ ಮತ್ತು ದಿ| ಜಯಂತ್ ರೈ ಸ್ಮರಣಾರ್ಥ ಎನ್ ಚಂದ್ರಹಾಸ ಶೆಟ್ಟಿ ಪ್ರಾಯೋಜಿತ ಕ್ರೀಡಾ ಪ್ರಶಸ್ತಿಯನ್ನು ಸುನಿಲ್ ಕುಮಾರ್ ಶೆಟ್ಟಿಯವರಿಗೆ, ಕೆ.ಸೀತಾರಾಮ ರೈ ಸವಣೂರು ಅವರಿಂದ ಕೊಡಮಾಡಲ್ಪಡುವ ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿಯನ್ನು ಎನ್.ಜಗನ್ನಾಥ ರೈ ಮಾದೋಡಿಯವರಿಗೆ, ಡಾ. ಬಿ.ಸಂಜೀವ ರೈ ಅವರು ಕೊಡಮಾಡಲ್ಪಡುವ ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಡಾ.ಎ.ಕೆ.ರೈ ಅವರಿಗೆ, ಮಿತ್ರಂಪಾಡಿ ಚೆನ್ನಪ್ಪ ರೈ ಸ್ಮರಣಾರ್ಥ ಜಯರಾಮ್ ರೈ ಮಿತ್ರಂಪಾಡಿ ಅಬುದಾಬಿ ಇವರಿಂದ ಕೊಡಮಾಡಲ್ಪಡುವ ಸಮಾಜ ಸೇವಾ ಮಿತ್ರ ಪ್ರಶಸ್ತಿಯನ್ನು ಕುದ್ಯಾಡಿ ಶೀನಪ್ಪ ರೈ ಕೊಡೆಂಕೀರಿಯವರಿಗೆ, ಮಿತ್ರಂಪಾಡಿ ಪುರಂದರ ರೈ ಅವರಿಂದ ಕೊಡಮಾಡಲ್ಪಡುವ ಪಂಚಮಿ ಉದ್ಯಮಿ ಸಿರಿ ಪ್ರಶಸ್ತಿಯನ್ನು ಸಂತೋಷ್ ಕುಮಾರ್ ರೈ ನಳೀಲು ಅವರಿಗೆ, ಅಗರಿ ಭಂಡಾರಿ ಸಹೋದರರು ಕೊಡಮಾಡಲ್ಪಡುವ ದೇಶ ಸೇವಾ ಅಗರಿ ಪ್ರಶಸ್ತಿಯನ್ನು ವಸಂತ ಕುಮಾರ್ ರೈ ಬಿ ಅವರಿಗೆ, ದೇರ್ಲ ಕರುಣಾಕರ ರೈ ಅವರಿಂದ ನೀಡುವ ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸೈನ್ಸ್ ಒಲಿಂಪಿಯಾಡ್ ಡಿಸ್ಟ್ರಿಕ್ ಬೆಸ್ಟ್ ಪ್ರಿನ್ಸಿಪಾಲ್ ಪುರಸ್ಕೃತ ಸತೀಶ್ ರೈ ಅವರಿಗೆ, ವಿಜಯಾ ಮಂಜುನಾಥ ಶೆಟ್ಟಿ ಅವರಿಂದ ಕೊಡಲ್ಪಡುವ ಅರಣ್ಯ ಮಿತ್ರ ಪ್ರಶಸ್ತಿಯನ್ನು ಡಾ. ಆಶಾ ಶಂಕರ ಭಂಡಾರಿ ಡಿಂಬ್ರಿಯವರಿಗೆ, ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರಿಂದ ಕೊಡಮಾಡಲ್ಪಡುವ ಪಿಯುಸಿ ಪ್ರತಿಭಾನ್ವಿತ ವಿದ್ಯಾ ಅರಿಯಡ್ಕ ಪ್ರಶಸ್ತಿಯನ್ನು ಕು.ಧನುಜ ಅವರಿಗೆ, ಚನಿಲ ತಿಮ್ಮಪ್ಪ ಶೆಟ್ಟಿಯವರಿಂದ ಕೊಡಮಾಡಲ್ಪಡುವ ಎಸ್‌ಎಸ್‌ಎಲ್‌ಸಿ ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿಯನ್ನು ಕು.ಸ್ವಸ್ತಿ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸುವವರನ್ನು ಕೊಂಬು, ಬ್ಯಾಂಡ್ ಸದ್ದಿನೊಂದಿಗೆ ಸಭಾಭವನದ ದ್ವಾರದಿಂದ ಸ್ವಾಗತಿಸಿದ ಬಂಟರ ಸಂಘದ ಪದಾಧಿಕಾರಿಗಳು ವೇದಿಕೆಗೆ ಕರೆತರುವ ಮೂಲಕ ವಿಶೇಷತೆಯನ್ನು ತೋರಿಸಲಾಯಿತು. ಈ ಸಂದರ್ಭ ಪ್ರಶಸ್ತಿ ಪತ್ರ, ಚಿನ್ನದ ಪದಕ, ಪೇಟ, ಶಲ್ಯ, ಗೊಂಡೆ ಹಾರವನ್ನು ಮೆರವಣಿಗೆಯಲ್ಲೇ ತರಲಾಯಿತು. ಪ್ರಶಸ್ತಿ ಪ್ರದಾನದ ಸಂದರ್ಭ ವೇದಿಕೆಯಲ್ಲಿ ಅಳವಡಿಸಿದ ಬೃಹತ್ ಎಲ್ ಇ ಡಿ ಪರದೆಯಲ್ಲಿ ಸನ್ಮಾನ ಸ್ವೀಕರಿಸುವವರ ಸಾಧನೆಯ ಚಿತ್ರಣವನ್ನು ಪ್ರದರ್ಶಿಸಲಾಯಿತು.

LEAVE A REPLY

Please enter your comment!
Please enter your name here