ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ ಮೂಲೆ ಜನತಾ ಕಾಲನಿ ಪರಿಸರದಲ್ಲಿ ಮೊಬೈಲ್ ಟವರ್ ಸ್ಥಾಪನೆಗೆ ವಿರೋಧಿಸಿ ಕೆಮ್ಮಿಂಜೆ ಗ್ರಾಮದ ಮಿಶನ್ ಮೂಲೆ ಜನತಾ ಕಾಲನಿ ಪರಿಸರದ ನಿವಾಸಿಗಳಿಂದ ಆ.14 ರಂದು ಪ್ರತಿಭಟನೆ ನಡೆಯಿತು.
ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಇಲ್ಲಿನ ಖಾಸಗಿ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಖಾಸಗಿ ಕಂಪೆನಿಯ ಮೊಬೈಲ್ ಟವರ್ ನಿಂದ 50-60 ಕ್ಕಿಂತಲೂ ಮಿಕ್ಕಿ ಲೇಔಟ್, ವಾಸದ ಮನೆಗಳಿರುವ ಜನತಾ ನಿವೇಶನದಲ್ಲಿ ಸುಮಾರು 300-350 ಗಳಷ್ಟು ಮನೆಗಳಿದ್ದು, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿರುವ ಅತೀ ಹೆಚ್ಚಿನ ಜನನಿಬಿಡ ಪ್ರದೇಶವಾಗಿದೆ. ಏರ್‌ಟೆಲ್ ಕಂಪನಿಯ ವತಿಯಿಂದ ದಿ. ಸಂಜೀವ ರೈರವರ ಜಾಗದಲ್ಲಿ ನಮ್ಮ ಪರಿಸರ ಬಳಿಯಲ್ಲಿಯೇ ಮೊಬೈಲ್ ಟವರ್ ನಿರ್ಮಿಸಲು ಸಮೀಕ್ಷೆ ನಡೆಸಿದ್ದು ಇದೀಗ ಅಡಿಪಾಯದ ಕಾಮಗಾರಿ ಪ್ರಾರಂಭವಾಗಿದೆ. ಜನನಿಬಿಡ ವಾಸ ಪ್ರದೇಶದಲ್ಲಿ ಮೊಬೈಲ್ ಟವರ್ ಸ್ಥಾಪಿಸಿದಲ್ಲಿ ಇದರಿಂದ ಶಾಲಾ ಕಾಲೇಜು ಮಕ್ಕಳ ವ್ಯಾಸಂಗಕ್ಕೆ ತೊಂದರೆ ಆಗಲಿರುವ ಸಾಧ್ಯತೆ ಇರುತ್ತದೆ. ಅಲ್ಲದೇ ಅಮಾಯಕ ಹಾಗೂ ಹಿರಿಯ ನಾಗರಿಕರಿಗೆ ಹೃದಯ ಸಮಸ್ಯೆಗಳು ಬರಲಿರುವ ಸಾಧ್ಯತೆ ಇರುತ್ತದೆ. ಮುಂದಕ್ಕೆ ಅಮೂಲ್ಯ ಜೀವಗಳು ಅನ್ಯಾಯವಾಗಿ ಕಳೆದುಕೊಳ್ಳುವ ಮೊದಲೇ ಈ ಮೊಬೈಲ್ ಟವರನ್ನು ಇಲ್ಲಿಂದ ಸ್ಥಳಾಂತರಿಸಬೇಕಾಗಿದೆ. ಈ ಮೊಬೈಲ್ ಟವರನ್ನು ವಸತಿ ಪ್ರದೇಶದಲ್ಲಿ ಸ್ಥಾಪಿಸಲು ತೀವ್ರ ಆಕ್ಷೇಪ ಇರುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಜೀವ ರೈ ರವರ ಜಾಗದಲ್ಲಿ ನಿರ್ಧರಿಸಲಾದ ಈ ಮೊಬೈಲ್ ಟವರ್ ನಿರ್ಮಾಣವನ್ನು ಅವರದೇ ಜಾಗ ಸುಮಾರು 60-80 ಅಡಿ ದೂರಕ್ಕೆ ಸ್ಥಳಾಂತರಿಸಲು ಅಥವಾ ಸದ್ರಿ ಪರಿಸರದಿಂದ ತೆರವುಗೊಳಿಸುವಂತೆ ಆದೇಶ ನೀಡಬೇಕು ಎಂದು ಸಹಾಯಕ ಕಮಿಷನರ್, ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಮೊಟ್ಟೆತ್ತಡ್ಕ ಮಿಷನ್ ಮೂಲೆ ಜನತಾ ಕಾಲನಿ ನಿವಾಸಿಗಳು ಮತ್ತು ಸಾರ್ವಜನಿಕರು ಪುತ್ತೂರು ಸಹಾಯಕ ಕಮೀಷನರ್ ಪುತ್ತೂರು ಉಪವಿಭಾಗ ಅವರಿಗೆ ಮನವಿ ಪತ್ರವನ್ನು ನೀಡಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಹಾಗೂ ಶಾಲಾ ಕಾಲೇಜು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಈ ಮೊಬೈಲ್ ಟವರ್ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ ಸ್ಥಳಾಂತರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಕಲೆ ಹಾಕಿ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮತ್ತೊಮ್ಮೆ ಮನವಿ ನೀಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ಅಬ್ದುಲ್ಲ ಕೆ, ವಿಶ್ವನಾಥ ಟೈಲರ್, ರಫೀಕ್ ಎಂ.ಕೆ, ರೊನಾಲ್ಡ್ ಮೊಂತೇರೊ, ಸುರೇಂದ್ರ ಎ, ಸುರೇಂದ್ರ ಪೂಜಾರಿ, ಹಮೀದ್ ಸಹಿತ ಹಲವರು ಉಪಸ್ಥಿತರಿದ್ದರು.