ಪುತ್ತೂರು: ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಎಸ್ ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಬಾರದು ಎಂದು ನಾನು ಸರಕಾರವನ್ನು ಆಗ್ರಹಿಸಿಯೂ ಇಲ್ಲ ಮತ್ತು ಈ ವಿಚಾರದಲ್ಲಿ ನಾನು ವಿಧಾನ ಪರಿಷತ್ ನಲ್ಲಿ ಆಗ್ರಹವನ್ನೂ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯರಾದ ಐವನ್ಡಿಸೋಜಾರವರು ಸ್ಪಷ್ಟಪಡಿಸಿದ್ದು , ನಾನು ಎಸ್ ಪಿ ಕಚೇರಿ ಸ್ಥಳಾಂತರ ಮಾಡದಂತೆ ತಡೆದಿದ್ದೇನೆ ಎಂಬುದು ಸುಳ್ಳು ಸಂಗತಿಯಾಗಿದ್ದು ಇದು ಬಿಜೆಪಿಗರ ಕುತಂತ್ರದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪುತ್ತೂರಿಗೆ ಎಸ್ ಪಿ ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ರೈಯವರು ಸರಕಾರವನ್ನು ಆಗ್ರಹಿಸಿದ್ದರು, ಅದಕ್ಕೆ ನಾನು ಬೆಂಬಲವಾಗಿ ವಿಧಾನಸಪರಿಷತ್ ನಲ್ಲಿ ಮಾತನಾಡಿದ್ದೇನೆ. ಪುತ್ತೂರು ನಗರದಿಂದ 100 ಕಿ ಮೀ ದೂರದಲ್ಲಿರುವ ಎಸ್ ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಿದರೆ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ವ್ಯಾಪ್ತಿಯ ಜನರಿಗೆ ಪ್ರಯೋಜನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರಿಯಾಗಲಿದೆ ಎಂದು ನಾನು ಸರಕಾರಕ್ಕೆ ಮನವರಿಕೆ ಮಾಡಿದ್ದೇನೆ ವಿನಾ ಸ್ಥಳಾಂತರ ಮಾಡಬಾರದು ಎಂದು ನಾನು ಹೇಳಿಯೇ ಇಲ್ಲ ಇದೆಲ್ಲ ಬಿಜೆಪಿಗರ ಹತಾಷ ಸುಳ್ಳು ಪ್ರಚಾರದ ಭಾಗವಾಗಿದೆ ಎಂದು ಐವನ್ ಡಿಸೋಜಾರವರು ತಿಳಿಸಿದ್ದಾರೆ.
ಜಾಗ ಮಂಜೂರು ಆಗಿಯೇ ಇಲ್ಲ
ಈ ಹಿಂದೆ ಪುತ್ತೂರಿನಲ್ಲಿ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ಅವಧಿಯಲ್ಲಿ ಎಸ್ ಪಿ ಕಚೇರಿಗೆ ಪುತ್ತೂರಿನಲ್ಲಿ ಸ್ಥಳ ಮಂಜೂರು ಮಾಡಲಾಗಿದೆ ಮತ್ತು ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಎಸ್ ಪಿ ಕಚೇರಿ ಸ್ಥಳಾಂತರ ಪ್ರಕ್ರಿಯೆಗೆ ಅನುಮೋದನೆ ನೀಡಲಾಗಿತ್ತು ಎಂಬ ವಿಚಾರ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಆ ರೀತಿಯ ಪ್ರಸ್ತಾವನೆ ಇದುವರೆಗೆ ಬಂದಿಲ್ಲ ಎಂದು ಐವನ್ ಡಿಸೋಜಾರವರು ತಿಳಿಸಿದ್ದಾರೆ. ಜನರ ಕಣ್ಣಿಗೆ ಮಣ್ಣೆರಚಲು ಬಿಜೆಪಿ ಈ ರೀತಿಯ ಸುಳ್ಳು ಪ್ರಚಾರವನ್ನು ಮಾಡುತ್ತಿದೆ ಜನ ಇದಕ್ಕೆ ಕಿವಿಗೊಡಬಾರದು. ಪುತ್ತೂರಿಗೆ ಎಸ್ ಪಿ ಕಚೇರಿ ಸ್ಥಳಾಂತವಾಗಬೇಕು ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದ್ದೇ ಇದೆ. ಪುತ್ತೂರು ಶಾಸಕರಾದ ಅಶೋಕ್ ರೈಯವರ ಜೊತೆ ನಾನು ಕೈ ಜೋಡಿಸುವುದಾಗಿ ಅವರು ಹೇಳಿದ್ದಾರೆ.