10 ತಿಂಗಳೊಳಗೆ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ- ಶಾಸಕರ ಸೂಚನೆ
ಪುತ್ತೂರು: ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಹೊಸ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನಡೆಸಲಾಗಿದೆ. ಅನುದಾನವೂ ಬಂದಿದೆ ಆದರೆ ಕಾಮಗಾರಿ ಯಾಕೆ ಆರಂಭವಾಗಿಲ್ಲ, ಮುಂದಿನ ಹತ್ತು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ರೈ ಇಂಜಿನಿಯರ್‌ಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಆ. 17 ರಂದು ಕಾಲೇಜಿನಲ್ಲಿ ನಡೆದ ಅಭಿವೃದ್ದಿ ಸಮಿತಿ ಸಭೆಯಲ್ಲಿ ಶಾಸಕರು ಈ ಸೂಚನೆಯನ್ನು ನೀಡಿದ್ದಾರೆ. ಈಗ ತರಗತಿ ನಡೆಯುತ್ತಿರುವ ಕಟ್ಟಡ ಹಳೇಯ ಕಟ್ಟಡವಾಗಿದೆ ಮತ್ತು ವಿದ್ಯಾರ್ಥಿಗಳು ಕಲಿಯಲು ಈ ಕಟ್ಟಡ ಸೂಕ್ತವಾಗಿಲ್ಲ ಎಂಬ ಭಾವನೆ ಇದೆ, ಇಲ್ಲಿ ಜೈಲು ಕೂಡಾ ಈ ಹಿಂದೆ ಇತ್ತು. ಕಟ್ಟಡ ಶಿಥಿಲಗೊಳ್ಳದೇ ಇದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸ ಕಟ್ಟಡಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಿದೆ ಕಾಮಗಾರಿ ಯಾವುದೇ ಕಾರಣಕ್ಕೂ ನಿಧಾನಗತಿಯಲ್ಲಿ ಸಾಗದೆ ವೇಗದಿಂದ ನಡೆಯಬೇಕು ಮತ್ತು ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕರು ಸೂಚನೆಯನ್ನು ನೀಡಿದ್ದಾರೆ.
ಇಲ್ಲಿಗೆ ಏನೆಲ್ಲಾ ವ್ಯವಸ್ಥೆ ಬೇಕೋ ಅದೆಲ್ಲವನ್ನೂ ಮಾಡುವೆ
ಇದು ಮಹಿಳಾ ಸರಕಾರಿ ಕಾಲೇಜು. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಸಾಧಾರಣ ಮಟ್ಟಿಗೆ ಇದೆ. ಕಾಲೇಜಿಗೆ ಸೌಲಭ್ಯಗಳ ಕೊರತೆ ಏನೇನಿದೆ , ಏನೆಲ್ಲಾ ವ್ಯವಸ್ಥೆಗಳು ಬೇಕು ಅದೆಲ್ಲವನ್ನೂ ಕೊಡಿಸುತ್ತೇನೆ. ವಿಜ್ಞಾನ ತರಗತಿ ( ಸೈನ್ಸ್ ವಿಭಾಗ) ವನ್ನು ಪ್ರಾರಂಭಿಸಬೇಕು ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯು ಮಹಿಳಾ ಕಾಲೇಜಿನಲ್ಲಿ ಆಗಬೇಕು. ವಿದ್ಯಾರ್ಥಿಗಳು ಅಥವಾ ಪೋಷಕರು ಯಾವ ಕೋರ್ಸನ್ನು ಬಯಸುತ್ತಾರೋ ಆ ಕೋರ್ಸನ್ನು ಕಾಲೇಜಿನಲ್ಲಿ ಪ್ರಾರಂಭ ಮಾಡಬೇಕು. ಕಟ್ಟಡದ ಕೊರತೆಯಾದಲ್ಲಿ ಇನ್ನೂ ಅನುದಾನವನ್ನು ಒದಗಿಸುತ್ತೇನೆ. ಕಾಲೇಜಿನಲ್ಲಿ ಯಾವುದೂ ಇಲ್ಲ ಎನ್ನುವಂತಾಗಬಾರದು ಎಂದು ಶಾಸಕರು ಹೇಳಿದರು.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿ
ಕೇವಲ ಕಟ್ಟಡ ಮತ್ತು ಸೌಲಭ್ಯಗಳನ್ನು ಮಾಡಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಯಾರಿಗೂ ಪ್ರಯೋಜನವಿಲ್ಲದಂತಾಗುತ್ತದೆ. ಸರಕಾರಿ ಕಾಲೇಜಿನಲ್ಲಿ ದೊರೆಯುವ ಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಪೋಷಕರಿಗೆ ತಿಳಿಸುವ ಮತ್ತು ಸಾರ್ವಜನಿಕರಿಗೂ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು ಎಂದು ಶಾಸಕರು ತಿಳಿಸಿದರು.ಸಭೆಯಲ್ಲಿ ಸಮಿತಿ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಶ್ರೀಧರ್ ರಐ ಎಚ್, ಪ್ರೇಮಲತಾ ಜೆ ರೈ, ಕೆ ಸೂರಜ್ ಶೆಟ್ಟಿ, ರಾಘವೇಂದ್ರ, ಡಾ. ಶ್ರೀಪ್ರಕಾಶ್, ಕೆ ಎಂ ಇಸ್ಮಾಯಿಲ್, ಸಿಲ್ವೆಸ್ಟರ್ ಡಿಸೋಜಾ, ಜಯಂತ್ ಭಂಡಾರಿ, ಈಶವರ್ ಬಿಡೇಕರ್, ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ, ಸ್ವಾತಿ ಜೆ ರೈ ,ಇಂಜಿನಿಯರ್ ಪ್ರಕಾಶ್, ಗುತ್ತಿಗೆದಾರ ಅಶ್ರಫ್ ಉಪಸ್ತಿತರಿದ್ದರು. ಪ್ರಾಂಶುಪಾಲ ಗೋಪಾಲಕೃಷ್ಣ ಸ್ವಾಗತಿಸಿ ವಂದಿಸಿದರು.