ಗ್ಯಾರಂಟಿ ಯೋಜನೆಯ ತಾ|ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಶಾಸಕ ಅಶೋಕ್ ರೈ ಹೇಳಿಕೆ
ಪುತ್ತೂರು:ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಒಂದು ವರ್ಷದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 148.96 ಕೋಟಿ ರೂ.ಬಡವರ ಕೈ ಸೇರಿದೆ.ಈ ಉತ್ತಮ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವ ವಿಚಾರಗಳಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಆ.19ರಂದು ತಾ.ಪಂ ಸಾಮರ್ಥ್ಯ ಸೌಧದಲ್ಲಿ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಠಾನ ಸಮಿತಿಯ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗೃಹಲಕ್ಷ್ಮೀ ಯೋಜನೆಯ ಮೂಲಕ ರೂ.34.75 ಕೋಟಿ, ಗೃಹಲಕ್ಷ್ಮೀಯಲ್ಲಿ ರೂ.67.30 ಕೋಟಿ, ಅನ್ನಭಾಗ್ಯದಲ್ಲಿ ರೂ.19.18 ಕೋಟಿ, ಶಕ್ತಿ ಯೋಜನೆಯಲ್ಲಿ ರೂ.28 ಕೋಟಿ ಹಾಗೂ ಯುವನಿಧಿಯಲ್ಲಿ ರೂ.99.9ಲಕ್ಷ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಲಭಿಸಿದೆ ಎಂದರು.ಗ್ಯಾರಂಟಿ ಯೋಜನೆಯನ್ನು ಅತ್ಯಂತ ಅನುಭವಿ ತಜ್ಞರ ತಂಡದ ಮೂಲಕ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ.ಯೋಜನೆಗಳನ್ನು ಫಲಾನುಭವಿಗಳಿಗೆ ಸರಿಯಾಗಿ ತಲುಪಿಸುವಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ.ತಾಲೂಕಿನಲ್ಲಿ 15 ಜನರ ಸಮಿತಿಯಿದೆ.ಯೋಜನೆಗಳನ್ನು ಪಡೆಯುವಲ್ಲಿ ಇರುವ ಸಮಸ್ಯೆಗಳಿದ್ದರೆ ಅನುಷ್ಠಾನ ಸಮಿತಿಯವರನ್ನು ಸಂಪರ್ಕಿಸಬೇಕು.ಅನುಷ್ಠಾನ ಸಮಿತಿಯ ಸದಸ್ಯರು ಹೇಳಿದ್ದನ್ನು ಅಧಿಕಾರಿಗಳು ಅನುಷ್ಠಾನ ಮಾಡುವ ಅವಕಾಶವಿದೆ.ಇದಕ್ಕಾಗಿ ಅನುಷ್ಠಾನ ಸಮಿತಿ ಸದಸ್ಯರು ಯೋಜನೆಯ ಬಗ್ಗೆ ತಿಳಿದು ಕೊಳ್ಳಬೇಕು.ಫಲಾನುಭವಿಗಳಿಗೆ ಸಮಸ್ಯೆಗಳಿದ್ದರೆ ಅಧಿಕಾರಿಗಳ ಮೂಲಕ ವಿಚಾರಿಸಿ ಪರಿಹಾರ ಕಂಡುಕೊಳ್ಳಬೇಕು.ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು ಜನರೊಂದಿಗೆ ಉಡಾಫೆಯ ಮಾತನಾಡಬಾರದು ಎಂದು ಶಾಸಕರು ತಿಳಿಸಿದರು.
ಗ್ಯಾರಂಟಿ ಯೋಜನೆಯ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಅಽಕಾರಿಗಳ ಮೂಲಕ ಯೋಜನೆಗಳು ಶೇ.90ರಷ್ಟು ಅನುಷ್ಠಾನವಾಗಿದೆ. ಗೃಹಲಕ್ಷ್ಮೀ ಯೋಜನೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಶೇ.93ರಷ್ಟು ಅನುಷ್ಠಾನವಾಗಿದೆ.ಯುವನಿಽ ಯೋಜನೆಯು ಸ್ವಲ್ಪ ಹಿನ್ನಡೆಯಿದೆ.ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಫಲಾನಿಭವಿಗಳಿಗಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಯ ತಾಲೂಕು ಮೇಳ ನಡೆಸಬೇಕು.ಯಾವ ಕಾರಣಕ್ಕಾಗಿ ಸೌಲಭ್ಯ ಸಿಗಲಿಲ್ಲ ಎಂಬುದನ್ನು ತಿಳಿಯಬೇಕು.ಈ ಮೇಳವು ಪುತ್ತೂರಿನಿಂದಲೇ ಪ್ರಾರಂಭವಾಗವಬೇಕು.ಜಿಲ್ಲೆಯ ಅಽಕಾರಿಗಳನ್ನು ಒಟ್ಟು ಸೇರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ.ಫಲಾನುಭವಿಗಳಿಗಿರುವ ಸಮಸ್ಯೆ ಪರಿಹರಿಸುವಲ್ಲಿ ಅನುಷ್ಠಾನ ಸಮಿತಿ ಕಾರ್ಯನಿರ್ವಹಿಸಲಿದೆ.ಅನುಷ್ಠಾನ ಸಮಿತಿಯ ತಾಲೂಕು ಕಚೇರಿ ಪ್ರಥಮವಾಗಿ ಪುತ್ತೂರಿನಲ್ಲಿ ಉದ್ಘಾಟನೆಯಾಗಿದ್ದು ಸಮಾವೇಶವು ಪುತ್ತೂರಿನಲ್ಲಿ ಪ್ರಥಮವಾಗಿ ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಜಿಲ್ಲಾ ಸಮಿತಿ ಮೂಲಕ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿದ್ದಾರೆ, ಯಾರೆಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂಬುದರ ಮಾಹಿತಿ ಸಂಗ್ರಹವಾಗಿದೆ.ಆದಾಯ ತೆರಿಗೆ, ಜಿಎಸ್‌ಟಿ ವ್ಯಾಪ್ತಿಯಲ್ಲಿರುವವರು ಸೌಲಭ್ಯಗಳನ್ನು ಪಡೆದುಕೊಳ್ಳಲು ಇರುವ ಸಮಸ್ಯೆಗಳಿಗೆ ಜಿಲ್ಲಾ ಸಮಿತಿಯ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ತಾ.ಪಂ ಕಾರ್ಯನಿರ್ವಾಹಕಾಽಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಂಥಾಲಯಗಳಿಗೆ ಕಂಪ್ಯೂಟರ್, ಮೊಬೈಲ್ ವಿತರಣೆ:
ಜಿ.ಪಂ, ತಾ.ಪಂ, ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದೊಂದಿಗೆ ತಾಲೂಕಿನ ಎಂಟು ಗ್ರಾ.ಪಂಗಳ ಗ್ರಂಥಾಲಯಗಳಿಗೆ ಕಂಪ್ಯೂಟರ್ ಹಾಗೂ ಮೊಬೈಲ್‌ನ್ನು ಶಾಸಕ ಅಶೋಕ್ ಕುಮಾರ್ ರೈ ಇದೇ ಸಂದರ್ಭದಲ್ಲಿ ವಿತರಿಸಿದರು. ಬಡಗನ್ನೂರು,ಬನ್ನೂರು,ಕೊಳ್ತಿಗೆ,ನಿಡ್ಪಳ್ಳಿ,ನೆಟ್ಟಣಿಗೆ ಮುಡ್ನೂರು, ಒಳಮೊಗರು, ಕೆಯ್ಯೂರು, ಕೊಡಿಪ್ಪಾಡಿ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಹಾಗೂ ಗ್ರಂಥಪಾಲಕರು ಕಂಪ್ಯೂಟರ್ ಹಾಗೂ ಮೊಬೈಲ್‌ನ್ನು ಸ್ವೀಕರಿಸಿದರು.ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ವಂದಿಸಿದರು. ಭರತ್ ಕಾರ್ಯಕ್ರಮ ನಿರೂಪಿಸಿದರು.